ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮುಖ್ಯಮಂತ್ರಿ ಕುರ್ಚಿಗೆ ಟವೆಲ್‌ ಹಾಕಿದ ವಿಜಯೇಂದ್ರ

Last Updated 14 ನವೆಂಬರ್ 2020, 14:12 IST
ಅಕ್ಷರ ಗಾತ್ರ

ಕರ್ನಾಟಕ ಬಿಜೆಪಿ ಮಟ್ಟಿಗೆ ಪ್ರಶ್ನಾತೀತ ನಾಯಕರಂತಿದ್ದ ಹಾಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಲವನ್ನು ಹಿಮ್ಮೆಟ್ಟಿಸಿ, ಅವರನ್ನು ನೇಪಥ್ಯಕ್ಕೆ ಸರಿಸುವ ಯತ್ನವನ್ನು ಅದೇ ಪಕ್ಷದ ಮುಂದಾಳು ಮಾಡುತ್ತಲೇ ಇದ್ದಾರೆ. ಮುಖ್ಯಮಂತ್ರಿ ಗಾದಿ ಮೇಲೆ ಆಸೀನರಾಗಬೇಕೆಂಬ ತಹತಹ ಇಂತಹ ನಾಯಕರಿಗೆ ಇದೆ. ಅಧಿಕಾರ ರಾಜಕಾರಣದಲ್ಲಿ ಇದು ತಪ್ಪೇನೂ ಅಲ್ಲ; 80ರ ಏರು ಹರೆಯದತ್ತ ಯಡಿಯೂರಪ್ಪ ದಾಪುಗಾಲು ಇಡುತ್ತಿರುವ ಹೊತ್ತಿನಲ್ಲಿ ತಮ್ಮ ದಾರಿ ಸಲೀಸಾಯಿತು ಎಂದು ಕನಸುಕಟ್ಟುತ್ತಿದ್ದವರಿಗೆ ಈಗ ಹಿನ್ನಡೆಯಾದಂತೆ ತೋರುತ್ತಿದೆ.

ಅಪ್ಪನ ಅಧಿಕಾರ ಬಲ; ಕೋಟಿಗಟ್ಟಲೇ ದುಡ್ಡಿನ ಬಾಹುಬಲ, ಬೆನ್ನಿಗೆ ನಿಂತ ಜಾತಿಯ ಬೆಂಬಲಗಳ ಜತೆಗೆ ಅಪ್ಪನಿಗಿರುವ ರಾಜಕೀಯ ಚಾಣಾಕ್ಷತೆಯನ್ನು ಹುರಿಗಟ್ಟಿಸಿ ತನ್ನ ಅನುಕೂಲಕ್ಕೆ ತಕ್ಕಂತೆ ಅಚ್ಚುಕಟ್ಟಿನ ದಾರಿಯನ್ನು ಹಸನು ಮಾಡಿಕೊಳ್ಳುವ ಜಾಣ್ಮೆ ರೂಢಿಸಿಕೊಂಡಿರುವ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ, ಈಗ ಮುಖ್ಯಮಂತ್ರಿ ಕುರ್ಚಿಗೆ ತಮ್ಮದೊಂದು ಟವೆಲ್‌ ಹಾಸಿ ಬಿಟ್ಟಿದ್ದಾರೆ.

ಅಲ್ಲಿಗೆ ಬಂದು ಕೂರುವುದು ಅಷ್ಟು ಸುಲಭವಲ್ಲ; ಯಾವಾಗ ಯಾರು ಬೇಕಾದರೂ ಬದಿಗೆ ಸರಿಸಿ ಹಿಂದಕ್ಕೆ ತಳ್ಳಬಹುದೆಂಬ ಅಂದಾಜು ವಿಜಯೇಂದ್ರ ಅರಿವಿಗೆ ಇಲ್ಲವೆಂದೇನಲ್ಲ. ಹಾಗಿದ್ದರೂ ವಿಧಾನಸೌಧದ ಮೆಟ್ಟಿಲು ಹತ್ತುವ ನಾಜೂಕಿನ ಹೆಜ್ಜೆಯನ್ನು ಅವರ ಇಡತೊಡಗಿರುವುದಂತೂ ಸತ್ಯ. ಇದು 2021ರತ್ತ ಹೆಜ್ಜೆ ಇಡುತ್ತಿರುವ ಕಾಲಮಾನದಲ್ಲಿ ಬಿಜೆಪಿಯಲ್ಲಿ ಮಾತ್ರವಲ್ಲ; ರಾಜ್ಯ ರಾಜಕಾರಣದಲ್ಲಿ ಆಗಿರುವ ಮಹತ್ವದ ಬೆಳೆವಣಿಗೆ ಕೂಡ ಹೌದು.

2018ರ ವಿಧಾನಸಭೆ ಚುನಾವಣೆ ಹೊತ್ತಿನ ಘಟನಾವಳಿಗಳನ್ನು ಸ್ಮೃತಿಪಟಲದ ಮೇಲೆ ತಂದುಕೊಂಡರೆ ವಿಜಯೇಂದ್ರ ಬೆಳೆವಣಿಗೆಯ ಮಜಲುಗಳು ಅರಿವಾಗುತ್ತವೆ. ಯಡಿಯೂರಪ್ಪ ಅವರು ಚುನಾವಣೆ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಉಮೇದಿನಲ್ಲಿದ್ದರು. ಸಮಯದಲ್ಲಿ ವಿಜಯೇಂದ್ರ ಪಕ್ಷದ ಚಟುವಟಿಕೆಯಲ್ಲಿ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೈಸೂರಿನ ವರುಣಾ (ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದ ಕ್ಷೇತ್ರ) ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಬೇಕೆಂಬ ಬೇಡಿಕೆ ಮಂಡಿಸಿದರು. ಯಡಿಯೂರಪ್ಪ ಕೂಡ ಮೆಲುದನಿಯಲ್ಲಿ ಅದಕ್ಕೆ ಬೆಂಬಲ ಕೊಟ್ಟರು. ಆದರೆ, ಕ್ಷೇತ್ರದ ಪರಿಚಯವೇ ಇಲ್ಲದ, ಪಕ್ಷದಲ್ಲಿ ಅಷ್ಟಾಗಿ ಏನನ್ನೂ ಮಾಡದ ವಿಜಯೇಂದ್ರಗೆ ಟಿಕೆಟ್ ಕೊಡಲು ಪಕ್ಷದ ವರಿಷ್ಠರು ನಿರಾಕರಿಸಿದರು. ಇದು ಯಡಿಯೂರಪ್ಪಗೆ ಆದ ಹಿನ್ನಡೆ ಎಂದೇ ಆಗ ವಿಶ್ಲೇಷಣೆ ನಡೆದಿತ್ತು.

ಚುನಾವಣೆ ಮುಗಿದು, ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ಈಡೇರಲಿಲ್ಲ. ಅಷ್ಟೊತ್ತಿಗೆ ಮಹತ್ವಾಕಾಂಕ್ಷೆಯನ್ನು ಮೈಯೊಳಗಿನ ಕಣಕಣದಲ್ಲಿ ತುಂಬಿಕೊಳ್ಳತೊಡಗಿದ್ದ ವಿಜಯೇಂದ್ರ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದರು. ಮೈತ್ರಿ ಸರ್ಕಾರವನ್ನು ಕೆಡಹುವ ತಂತ್ರಗಾರಿಕೆ ಹೆಣೆಯಲಾರಂಭಿಸಿದರು. 2–3 ಬಾರಿ ಈ ಯತ್ನ ವಿಫಲವಾಯಿತು. ತಮ್ಮ ಶಿಷ್ಯ ಎನ್.ಆರ್. ಸಂತೋಷ, ಹಾಲಿ ವಿಧಾನ ಪರಿಷತ್ತಿನ ಸದಸ್ಯ ಸಿ.ಪಿ. ಯೋಗೇಶ್ವರ ಅವರನ್ನು ಬೆನ್ನಿಗಿಟ್ಟುಕೊಂಡು ಸರ್ಕಾರ ಉರುಳಿಸುವ ‘ಸಂಚು ತೀವ್ರಗೊಳಿಸಿದರು. 17 ಮೈತ್ರಿ ಸರ್ಕಾರ ತೊರೆಯುವ ಕಾರ್ಯಾಚರಣೆ, ಶಾಸಕರನ್ನು ವಿಮಾನದಲ್ಲಿ ಮುಂಬೈಗೆ ಹೊತ್ತೊಯ್ದುದು, ಸರ್ಕಾರ ಪತನ ಹೀಗೆ ಎಲ್ಲವೂ ವಿಜಯೇಂದ್ರ ನಿರ್ದೇಶನದಂತೆ ನಡೆದುಹೋಯಿತು.

ಇದರ ಹಿಂದೆ ದೆಹಲಿಯ ಕಾಣದ ಕೈಗಳು ಪರೋಕ್ಷವಾಗಿ ಕೆಲಸ ಮಾಡಿದ್ದು, ಬಿಜೆಪಿ ಸರ್ಕಾರ ತರಲು ಶ್ರಮಿಸಿದ್ದು ಬೇರೆಯದೇ ಕತೆ. ಬರೆದರೆ ಅದೊಂದು ದೊಡ್ಡ ಅಧ್ಯಾಯವೇ ಆದೀತು.

ಆದರೆ, ಮೈತ್ರಿ ಸರ್ಕಾರ ಪತನ ಹಾಗೂ ಬಿಜೆಪಿ ಸರ್ಕಾರದ ಸ್ಥಾಪನೆ ತನ್ನದೇ ಹೆಗ್ಗಳಿಕೆ ಎಂದು ಬಿಂಬಿಸಿಕೊಂಡ ವಿಜಯೇಂದ್ರ ಸರ್ಕಾರದಲ್ಲಿ ಮುಂಚೂಣಿ ದಂಡನಾಯಕರಲ್ಲಿ ಒಬ್ಬರಾಗಿ ಮುನ್ನೆಲೆಗೆ ಬಂದು ನಿಂತರು. ಶಾಸಕರ ಬಲ ಕ್ರೋಡೀಕರಣ, ಅವರಿಗೆ ಬೇಕಾದ ನೆರವು, ಅನುದಾನ ಬಿಡುಗಡೆ ಹೀಗೆ ಎಲ್ಲವೂ ವಿಜಯೇಂದ್ರ ಸುಪರ್ದಿಯಲ್ಲೇ ನಡೆಯತೊಡಗಿತು. ಸರ್ಕಾರವೇ ವಿಜಯೇಂದ್ರ ಕೈಯಲ್ಲಿದೆ; ಅವರು ಹೇಳಿದ ಕೆಲಸ ಮಾತ್ರ ಆಗುತ್ತದೆ; ಅವರಿಗೆ ಹೇಳಿದವರಿಗಷ್ಟೇ ಅನುದಾನ ಸಿಗುತ್ತದೆ ಎಂದು ಶಾಸಕರು ದೂರುವಷ್ಟರ ಮಟ್ಟಿಗೆ ಪ್ರಭಾವವನ್ನು ಬೆಳೆಸಿಕೊಂಡ ವಿಜಯೇಂದ್ರ, ಅಧಿಕಾರವನ್ನು ತನ್ನ ಅಂಕೆಯಲ್ಲಿಟ್ಟುಕೊಂಡರು ಎಂಬ ಅಸಹನೆಗೂ ಕಾರಣರಾದರು.

ಸರ್ಕಾರ ಅಧಿಕೃತವಾಗಿ ಬಹುಮತ ಪಡೆಯಬೇಕಾದರೆ ಉಪಚುನಾವಣೆಗಳಲ್ಲಿ ಪಕ್ಷ ಗೆಲ್ಲಲೇಬೇಕಿತ್ತು. ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅನೇಕರು ತಮ್ಮ ಸ್ವಂತ ಬಲದ ಮೇಲೆ ಗೆಲ್ಲುವ, ಕೆಲವರು ಯಡಿಯೂರಪ್ಪನವರ ಜಾತಿ ಬಲದ ಮೇಲೆ ಗೆಲ್ಲುವ ಹುಮ್ಮಸಿನಲ್ಲಿದ್ದರು. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ನೆಲೆಯೇ ಇರಲಿಲ್ಲ. ಕೆ.ಆರ್. ಪೇಟೆ(ಬೂಕನಕೆರೆ) ಯಡಿಯೂರಪ್ಪನವರ ಹುಟ್ಟೂರಾದರೂ ಕಾರ್ಯಕ್ಷೇತ್ರ ಶಿಕಾರಿಪುರವಾಗಿದ್ದರಿಂದಾಗಿ ಅಲ್ಲಿ ಅವರಿಗೆ ನೆಲೆ ಇರಲಿಲ್ಲ. ಇದನ್ನು ಸಾಧಿಸುವುದಕ್ಕೆ ಉಪಚುನಾವಣೆ ದಾರಿಯಾಯಿತು. ಕೆ.ಆರ್. ಪೇಟೆಯಲ್ಲಿ ನಾರಾಯಣಗೌಡ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ವಿಜಯೇಂದ್ರ ಹೊತ್ತುಕೊಂಡರು. ಅದಾದ ಬಳಿಕ ಶಿರಾದಲ್ಲಿ ಉಪಚುನಾವಣೆ ನಡೆಯಿತು. ಅಲ್ಲಿಯೂ ಬಿಜೆಪಿ ಈವರೆಗೆ ಗೆದ್ದಿರಲಿಲ್ಲ. ಅದಕ್ಕಿಂತ ಮೊದಲಿದ್ದ ಕಳ್ಳಂಬೆಳ್ಳದಲ್ಲಿ ಕೂಡ ಬಿಜೆಪಿಗೆ ನೆಲೆ ಇರಲಿಲ್ಲ. ಅದನ್ನೂ ಸವಾಲಾಗಿ ಸ್ವೀಕರಿಸಿದ ವಿಜಯೇಂದ್ರ ಅಲ್ಲಿಯೂ ಕೆ.ಆರ್. ಪೇಟೆ ಮಾದರಿ ಚುನಾವಣೆಗೆ ತಂತ್ರ ಹೆಣೆದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದರು. ಕೋಟಿ ಗಟ್ಟಲೇ ದುಡ್ಡು ಚೆಲ್ಲಿ ಚುನಾವಣೆಯಲ್ಲಿ ಗೆದ್ದರು ಎಂದು ಕಾಂಗ್ರೆಸ್–ಜೆಡಿಎಸ್‌ ನಾಯಕರು ಆರೋಪಿಸುತ್ತಾರೆ. ಅದು ಸತ್ಯ ಕೂಡ. ಹಾಗಂತ ದುಡ್ಡು ಚೆಲ್ಲುವುದರಲ್ಲಿ ಯಾರೇನೂ ಹಿಂದೆ ಬಿದ್ದಿಲ್ಲ. ಬಿಜೆಪಿಅಧಿಕಾರದಲ್ಲಿರುವಾಗ ಹಾಗೂ ಭವಿಷ್ಯ ರೂಪಿಸಿಕೊಳ್ಳುತ್ತಿರುವ ವಿಜಯೇಂದ್ರ, ಕಾಂಗ್ರೆಸ್–ಜೆಡಿಎಸ್‌ಗಿಂತ ಹೆಚ್ಚು ದುಡ್ಡು ಹಂಚಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲದ ಮಾದರಿಯಲ್ಲಿ ಉಪಚುನಾವಣೆಗಳು ನಡೆದಿವೆ ಎಂದು ಹೇಳಲು ಅಂಜಿಕೆಯೇನೂ ಬೇಕಿಲ್ಲ; ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲ ರಾಜಕಾರಣಿಗಳೂ ಹಣ–ಆಮಿಷ, ಜಾತಿ ಹೆಸರಿನಲ್ಲಿ ಮತ ವಿಭಜನೆ ಮಾಡುತ್ತಿರುವುದು ಅನೂಚಾನವಾಗಿ ನಡೆದುಬಂದಿರುವಾಗ ಯಾರೋ ಒಬ್ಬರನ್ನು ದೂರಿ ಪ್ರಯೋಜನವೂ ಇಲ್ಲ. ಎಲ್ಲರೂ ಮತ್ತೊಬ್ಬರ ಜೇಬಿನಲ್ಲಿ ಕೈ ಇಟ್ಟು ನಿಂತಿರುವ ಮತಭ್ರಷ್ಟರೇ.

ಆದರೆ, ಕೆ.ಆರ್‌. ಪೇಟೆ ಹಾಗೂ ಶಿರಾ ಚುನಾವಣೆ ಫಲಿತಾಂಶದ ಬಳಿಕ ವಿಜಯೇಂದ್ರ ಅವರು ಬಿಜೆಪಿಯಲ್ಲಿ ತನ್ನದೇ ಆದ ‘ವಾಮನ’ ಹೆಜ್ಜೆಯನ್ನು ಇಡುತ್ತಿದ್ದಾರೆ. ಬಲಿಚಕ್ರವರ್ತಿ ಯಾರೆಂಬುದು ಮಾತ್ರ ಇನ್ನಷ್ಟೇ ನಿಶ್ಚಯವಾಗಬೇಕಷ್ಟೆ.

ವರುಣಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ನಾಯಕರು, ವಿಜಯೇಂದ್ರ ಬೆಳೆಯುತ್ತಿರುವ ಪರಿಗೆ ಅಚ್ಚರಿ ಗೊಂಡಿದ್ದಾರೆ. ಅಷ್ಟು ರಭಸದಲ್ಲಿ ಮುನ್ಸಾಗುತ್ತಿರುವುದು ಈ ಹೊತ್ತಿನ ವಿದ್ಯಮಾನ. ಕೆಲವು ಚುನಾವಣೆಗಳಲ್ಲಿ ‘ಶಕ್ತಿಮಾನ್‌’ ರೂಪದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿತ್ವಗಳು ಆ ಚುನಾವಣೆಯಲ್ಲಿ ಪಕ್ಷವನ್ನು ದಡ ಸೇರಿಸುವುದುಂಟು. ಇಂತಹವರು ಎಲ್ಲ ಪಕ್ಷಗಳಲ್ಲೂ, ಎಲ್ಲ ಕಾಲದಲ್ಲೂ ಕಾಣಸಿಗುತ್ತಾರೆ. ಎರಡು ಚುನಾವಣೆಗಳಲ್ಲಿ ವಿಜಯೇಂದ್ರ ತಂದುಕೊಟ್ಟ ಅನಿರೀಕ್ಷಿತ ಜಯದಿಂದಾಗಿ, ಅನೇಕ ಕಡೆಗಳಲ್ಲಿ ವಿಜಯೇಂದ್ರ ಅವರೇ ಉಸ್ತುವಾರಿ ವಹಿಸಿಕೊಳ್ಳಲಿ ಎಂಬ ಬೇಡಿಕೆ ಹುಟ್ಟಿಕೊಳ್ಳುತ್ತಿದೆ.

2023 ವಿಧಾನಸಭೆ ಚುನಾವಣೆ ಹೊತ್ತಿಗೆ ತಮ್ಮ ವರ್ಚಸ್ಸನ್ನು ಮತ್ತಷ್ಟು ಬೆಳೆಸಿಕೊಳ್ಳುವತ್ತ ವಿಜಯೇಂದ್ರ ದಾಪುಗಾಲು ಇಟ್ಟಿರುವುದಂತೂ ಹೌದು.

ಹಾಗೆ ನೋಡಿದರೆ, ಯಡಿಯೂರಪ್ಪ ಕುಟುಂಬದಲ್ಲಿ ಮೊದಲು ರಾಜಕಾರಣಕ್ಕೆ ಬಂದವರು ಬಿ.ವೈ. ರಾಘವೇಂದ್ರ. 2018ರ ಚುನಾವಣೆಗೆ ಮುನ್ನ ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಬೇಕು ಎಂಬ ಚರ್ಚೆ ಅವರ ಕುಟುಂಬದಲ್ಲಿ ನಡೆದಾಗ ಆಕ್ರಮಣಶೀಲ ಗುಣವುಳ್ಳ ವಿಜಯೇಂದ್ರ ಕಡೆಗೆ ಯಡಿಯೂರಪ್ಪನವರ ಹೆಣ್ಣುಮಕ್ಕಳು ಒಲವು ತೋರಿದ್ದರು. ರಾಘವೇಂದ್ರ ಅವರು, ಯಡಿಯೂರಪ್ಪನವರ ಆಪ್ತ ಬಣದಲ್ಲಿರುವ ಸಂಸದರೊಬ್ಬರ ಮಾತು ಕೇಳುತ್ತಾರೆ ವಿನಃ ವಿಜಯೇಂದ್ರರಂತೆ ಸ್ವಯಂ ನಿರ್ಧಾರ ಕೈಗೊಳ್ಳುವ, ಪಕ್ಷವನ್ನು ಮುನ್ನಡೆಸುವ ಛಾತಿ ಹೊಂದಿಲ್ಲ. ಸಂಸದರು, ಆಪ್ತಬಣದ ಮಾತಿಗೆ ಸೊಪ್ಪು ಹಾಕದ ವಿಜಯೇಂದ್ರ ಅವರೇ ಉತ್ತರಾಧಿಕಾರಿಯಾಗಬೇಕು ಎಂದು ಹೆಣ್ಣು ಮಕ್ಕಳು ನಿಶ್ಚಯಿಸಿದ್ದರು. ವಿಜಯೇಂದ್ರ ಅವರನ್ನು ತಮ್ಮ ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿಲ್ಲದೇ ಇದ್ದರೂ ಯಡಿಯೂರಪ್ಪನವರು ಕುಟುಂಬದ ಒತ್ತಡಕ್ಕೆ ಮಣಿದು, ಅವರನ್ನು ಮುಂಚೂಣಿಗೆ ತಂದು ನಿಲ್ಲಿಸಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.

ಈ ಅವಧಿಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ಯಡಿಯೂರಪ್ಪ ಆಪ್ತ ಬಣದಲ್ಲಿದ್ದ ಎನ್.ಆರ್. ಸಂತೋಷ, ಎಂ.ಬಿ. ಮರಂಕಲ್‌, ಶೋಭಾ ಕರಂದ್ಲಾಜೆ ಹೀಗೆ ಎಲ್ಲರನ್ನೂ ಅಧಿಕೃತ ಸರ್ಕಾರಿ ನಿವಾಸ ’ಕಾವೇರಿ’ ಹಾಗೂ ಧವಳಗಿರಿಯಿಂದ ದೂರ ಇಡಲಾಗಿದೆ. ವಿಜಯೇಂದ್ರ ಅವರನ್ನು ಮುನ್ನೆಲೆಗೆ ತಂದು ಭವಿಷ್ಯದ ನಾಯಕನಾಗಿ ರೂಪಿಸಬೇಕೆಂಬ ಯಡಿಯೂರಪ್ಪ ಪುತ್ರಿಯರ ಅಪೇಕ್ಷೆಯಿಂದಲೇ ಈ ಎಲ್ಲವೂ ನಡೆದಿದೆ ಎಂಬ ಮಾತುಗಳೂ ಆಪ್ತವಲಯದಲ್ಲಿ ಹರಿದಾಡುತ್ತಿವೆ.

ಹೀಗೆ ವಿಜಯೇಂದ್ರ ಅವರು ಸರ್ಕಾರದಲ್ಲಿ ಮಾತ್ರವಲ್ಲದೇ ಪಕ್ಷದಲ್ಲಿ ಕೂಡ ತಮ್ಮ ಹಿಡಿತವನ್ನು ಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ, ಎಲ್ಲವೂ ವಿಜಯೇಂದ್ರ ಕಣ್ಣಳತೆಯಲ್ಲೇ ನಡೆಯಬೇಕೆಂಬಷ್ಟರಮಟ್ಟಿಗೆ ಇದೆ ಎಂಬ ಅಭಿಪ್ರಾಯವೂ ಇದೆ. ಪಕ್ಷದಲ್ಲಿ ಹೀಗೆ ಹಿಡಿತ ಸಾಧಿಸುವ ಮೂಲಕ ಯಡಿಯೂರಪ್ಪ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳುವುದು, ಲಿಂಗಾಯತ ನಾಯಕರಾಗಿ ಹೊರಹೊಮ್ಮುವುದು ಮೊದಲ ಹೆಜ್ಜೆ. ಒಂದು ವೇಳೆ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡುವುದೇ ಆದಲ್ಲಿ, ಆ ಸ್ಥಾನದಲ್ಲಿ ತಮ್ಮನ್ನೇ ಕೂರಿಸಬೇಕು ಎಂಬಷ್ಟರ ಮಟ್ಟಿಗೆ ಪ್ರಭಾವವಲಯ ಸೃಷ್ಟಿಸಿಕೊಳ್ಳುವುದು ವಿಜಯೇಂದ್ರ ನಡೆ ಇದ್ದಂತೆ ತೋರುತ್ತಿದೆ.

ಅಪ್ಪ ನೆಟ್ಟಾಲ: ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದವರು ಹಾಗೂ ಪ್ರಭಾವಿ ರಾಜಕಾರಣಿಗಳ ಮಕ್ಕಳು ಉತ್ತರಾಧಿಕಾರಿಗಳಾಗಿ ಬೆಳೆದ ಸಾಕಷ್ಟು ನಿದರ್ಶನಗಳಿವೆ.

ಆದರೆ, ಅಪ್ಪ ಅಧಿಕಾರದಲ್ಲಿದ್ದಾಗ ಪಕ್ಷ ಹಾಗೂ ಸರ್ಕಾರವನ್ನು ಈ ಮಟ್ಟಿಗೆ ಪ್ರಭಾವಿಸುವಷ್ಟು ತಮ್ಮ ಕಾರ್ಯವೈಖರಿಯನ್ನು ಬೆಳೆಸಿಕೊಂಡವರು ಇಲ್ಲವೆಂದೇ ಹೇಳಬೇಕು.

ಅಪ್ಪ–ಮಕ್ಕಳ ಪಕ್ಷವೆಂಬ ಟೀಕೆಗೆ ಸದಾ ಗುರಿಯಾಗುವ ಜೆಡಿಎಸ್‌ನಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ರೇವಣ್ಣ ಸಕ್ರಿಯರಾಗಿಯೇ ಇದ್ದರು. ಆದರೆ, ಎಲ್ಲವೂ ದೇವೇಗೌಡರ ಅಣತಿಯಂತೆ ನಡೆಯುತ್ತಿತ್ತು. ತಮ್ಮದೇ ಆದ ಕೇಂದ್ರವನ್ನು ಹಾಸನ ಜಿಲ್ಲೆಯಾಚೆಗೆ ರೇವಣ್ಣ ಬೆಳೆಸಿಕೊಂಡಿರಲಿಲ್ಲ. ದೇವೇಗೌಡರು ಹಿನ್ನೆಲೆಗೆ ಸರಿದ ಬಳಿಕವೇ ಎಚ್‌.ಡಿ. ಕುಮಾರಸ್ವಾಮಿ ಮುಂಚೂಣಿಗೆ ಬಂದು, ಒಂದರ್ಥದಲ್ಲಿ ಅಪ್ಪನ ವಿರೋಧವನ್ನು ಕಟ್ಟಿಕೊಂಡೇ ಮುಖ್ಯಮಂತ್ರಿಯಾದರು. ಅಪ್ಪ ಅಧಿಕಾರದಲ್ಲಿದ್ದಾಗ ಅವರೇನೂ ಪಕ್ಷದಲ್ಲಿ ಈ ಮಟ್ಟಿನ ಹಿಡಿತ ಸಾಧಿಸಲಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ತಮ್ಮದೇ ಆದ ಅಭಿಮಾನಿಗಳು, ಕಾರ್ಯಕರ್ತರನ್ನು ದಂಡನ್ನು ಇಡೀ ರಾಜ್ಯದಲ್ಲಿ ಕಟ್ಟಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಅದಕ್ಕೂ ಪೂರ್ವದ ಇತಿಹಾಸ ನೋಡುವುದಾದರೆ ಎಸ್‌. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರರು ಸಕ್ರಿಯರಾಗಿರಲಿಲ್ಲ. ಬಂಗಾರಪ್ಪ ಲೋಕಸಭೆಗೆ ಆಯ್ಕೆಯಾದಾಗ ತಮ್ಮ ಕ್ಷೇತ್ರ ಸೊರಬವನ್ನು ಕುಮಾರ್‌ಗೆ ಬಿಟ್ಟುಕೊಟ್ಟರು. ಆದರೆ, ಸೊರಬದ ಆಚೆಗಿನ ರಾಜಕಾರಣದಲ್ಲಿ ಕುಮಾರ್ ಬಂಗಾರಪ್ಪ ಬೆಳೆಯಲೇ ಇಲ್ಲ. ಮಧು ಬಂಗಾರಪ್ಪ ಶಾಸಕರಾಗಿದ್ದು 2013 ಚುನಾವಣೆಯಲ್ಲಷ್ಟೆ.

ಎಸ್.ಆರ್. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಸಕ್ರಿಯವಾಗಿದ್ದರೂ ಅಪ್ಪನ ರಾಜಕೀಯದಲ್ಲಿ ಕೈಯಾಡಿಸುತ್ತಿರಲಿಲ್ಲ. ಬೊಮ್ಮಾಯಿ ಅವರ ಯುಗದ ಮುಗಿದ ಬಳಿಕವೇ ಜೆಡಿಯುನಿಂದ ವಿಧಾನಪರಿಷತ್ತಿನ ಸದಸ್ಯರಾಗುವ ಮೂಲಕ ಬಸವರಾಜ ಬೊಮ್ಮಾಯಿ ರಾಜಕಾರಣಕ್ಕೆ ಪ್ರವೇಶಿಸಿದರು. ಬಳಿಕ ಬಿಜೆಪಿ ಸೇರಿದ್ದು ಬೇರೆಯದೇ ಆದ ಕತೆ.

ವೀರೇಂದ್ರ ಪಾಟೀಲರ ಪುತ್ರ ಕೈಲಾಶನಾಥ ಪಾಟೀಲ, ಜೆ.ಎಚ್‌. ಪಟೇಲ್ ಪುತ್ರ ಮಹಿಮ ಪಟೇಲ್ ರಾಜಕೀಯದಲ್ಲಿ ಏಳಿಗೆಯನ್ನೇ ಕಾಣಲಿಲ್ಲ. ಗುಂಡೂರಾವ್ ಪುತ್ರ ದಿನೇಶ್‌, ಧರ್ಮಸಿಂಗ್ ಪುತ್ರ ಅಜಯ್ ಸಿಂಗ್, ವಿಜಯಸಿಂಗ್, ತಮ್ಮ ತಂದೆ ಅಧಿಕಾರದಲ್ಲಿದ್ದಾಗ ರಾಜಕೀಯಕ್ಕೆ ಬರಲಿಲ್ಲ. ದಿನೇಶ್‌ ಗುಂಡೂರಾವ್‌ ಕಾಂಗ್ರೆಸ್‌ನಲ್ಲಿ ಪ್ರಭಾವಿಯಾದರೂ ಅನ್ಯಕ್ಷೇತ್ರಗಳ ಮತದಾರರನ್ನು ಸೆಳೆಯುವಲ್ಲಿ ಹೇಳಿಕೊಳ್ಳಬಹುದಾದ ವರ್ಚಸ್ಸು ಹೊಂದಿಲ್ಲ. ಸಿದ್ದರಾಮಯ್ಯ ಪುತ್ರ ಯತೀಂದ್ರ ತಮ್ಮ ತಂದೆಯ ನೆರಳಲ್ಲಷ್ಟೇ ರಾಜಕಾರಣ ಮಾಡುವಷ್ಟಕ್ಕೆ ಸೀಮಿತರಾಗಿದ್ದಾರೆ. ಮಲ್ಲಿಕಾರ್ಜನ ಖರ್ಗೆಯವರು ಮುಖ್ಯಮಂತ್ರಿಯಾಗದೇ ಇದ್ದರೂ ತಮ್ಮದೇ ಪ್ರಭಾವವಲಯವನ್ನು ಹೊಂದಿದ್ದಾರೆ. ಅವರ ಪ್ರಭಾವವನ್ನು ಮೀರಿ ಬೆಳೆಯುವಷ್ಟು ಪ್ರಿಯಾಂಕ್‌, ಇನ್ನೂ ಪ್ರಭಾವಶಾಲಿಯಾಗಿಲ್ಲ.

ಅಷ್ಟು ಸಲೀಸಲ್ಲ: ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟು ವಿಜಯೇಂದ್ರ ಮುಂದಡಿ ಇಡುತ್ತಿದ್ದಾರಾದರೂ ಅದು ಅಷ್ಟು ಸಲೀಸಿನ ಹಾದಿಯಲ್ಲ. ನರೇಂದ್ರ ಮೋದಿ ಅವರ ಪೂಜೆಯನ್ನು ಬಿಟ್ಟು ಬೇರೆ ಯಾವ ವ್ಯಕ್ತಿಯ ಪೂಜೆಯನ್ನು ಸದ್ಯಕ್ಕೆ ಒಪ್ಪದಿರುವ ಬಿಜೆಪಿ, ಏಕವ್ಯಕ್ತಿ ಗುಣಗಾನ ಹಾಗೂ ಪಾರಮ್ಯವನ್ನು ಒಪ್ಪದೇ ಇರುವುದು ಅದರ ಸದ್ಯದ ರಾಜಕೀಯ ಶೈಲಿ.

ಹೀಗಾಗಿ, ವಿಜಯೇಂದ್ರ ಅವರು ಅಪ್ಪನ ಅಧಿಕಾರ, ಜಾತಿ ಹಾಗೂ ಹಣದ ಬಲ ನೆಚ್ಚಿಕೊಂಡು ದಾಂಗುಡಿ ಇಡುತ್ತಿದ್ದಾರೆ. ಅವರು ಮುಂಚೂಣಿ ನಾಯಕರಾಗಿ ಹೊರಹೊಮ್ಮಲು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕರು, ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ಹೊಂದಿದ ಕರ್ನಾಟಕದ ಪ್ರಮುಖರು ಬಿಡಲಾರರು ಎಂಬ ಮಾತೂ ಚರ್ಚೆಯಲ್ಲಿದೆ. ಏಕೆಂದರೆ ಮುಖ್ಯಮಂತ್ರಿ ಹುದ್ದೆ ಮೇಲೆ ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ್‌ ಕೂಡ ಕಣ್ಣಿಟ್ಟಿದ್ದಾರೆ. ವಿಜಯೇಂದ್ರ ಕನಸಿನ ಕುದುರೆಯೇರಿ ವಿಧಾನಸೌಧದ ಮೆಟ್ಟಿಲ ಕಡೆಯತ್ತ ದೌಡಾಯಿಸಲು ಮುಂದಾದರೂ ಅಶ್ವಮೇಧದ ಕುದುರೆಯ ಕಟ್ಟಿಹಾಕುವ ಶಕ್ತಿ–ನೈಪುಣ್ಯ ದೆಹಲಿಯ ನಾಯಕರಿಗೆ ಇದೆ ಎಂಬುದು ಸತ್ಯ. ಇವೆಲ್ಲವನ್ನೂ ಮೀರಿ ವಿಜಯೇಂದ್ರ ಹೇಗೆ ಮುನ್ನಡೆಯಲಿದ್ದಾರೆ ಎಂಬುದು ರಾಜಕೀಯ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT