ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಐದು ಸ್ಥಾನ ಗೆದ್ದು ತೋರಿಸಲಿ: ಎಚ್‌.ಡಿ. ಕುಮಾರಸ್ವಾಮಿ ಸವಾಲು

Last Updated 12 ಫೆಬ್ರುವರಿ 2021, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ನಾಯಕತ್ವದ ಬಗ್ಗೆ ಮಾತನಾಡುವ ಮೊದಲು ಸ್ವಂತ ಪಕ್ಷ ಕಟ್ಟಿ ಐದು ಸ್ಥಾನ ಗೆದ್ದು ತೋರಿಸಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

‘ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಶಕ್ತಿ ಇಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಈ ಹಿಂದಿನಿಂದಲೂ ನಾನು ಇದೇ ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷವನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಾಪ್ರಹಾರ ಮಾಡಿದ್ದಾರೆ.

‘ಉಪ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡುವುದಿಲ್ಲ ಎಂದು ಎಚ್‌.ಡಿ. ದೇವೇಗೌಡರು ಹೇಳಿದ್ದಾರೆ. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುವುದಾಗಿ ಹೇಳಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಯ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್‌ ಪಕ್ಷಕ್ಕಲ್ಲ, ನಿಮಗೆ. 2008ರಲ್ಲಿ ಆಪರೇಷನ್‌ ಕಮಲದ ನಂತರ ನಡೆದ ಉಪ
ಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಬೇಕೆ’ ಎಂದು ಪ್ರಶ್ನಿಸಿದ್ದಾರೆ.

ಉಪ ಚುನಾವಣೆಗಳು ಹಣಬಲ ಇರುವವರ ಮತ್ತು ಅಧಿಕಾರಸ್ಥರ ಚುನಾವಣೆಗಳು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ಆಗ ಸಿದ್ದರಾಮಯ್ಯ ಸೆಣಸಾಟಕ್ಕೆ ಬರಲಿ. ಅವರೇ ಪಕ್ಷ ಕಟ್ಟಿದರೆ ಜೆಡಿಎಸ್‌ ಸಾಮರ್ಥ್ಯ ತೋರಿಸುವ ಕೆಲಸಕ್ಕೆ ಸಿದ್ಧ. ಅಲ್ಲಿಯವರೆಗೂ ಅವರು ತಾಳ್ಮೆಯಿಂದ ಇರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಜೆಡಿಎಸ್‌ ಅನ್ನು ದುರ್ಬಲಗೊಳಿಸಲು ಯತ್ನಿಸಿ ಹೊರಬಿದ್ದ ಸಿದ್ದರಾಮಯ್ಯಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ‘ಜೆಡಿಎಸ್‌ಗೆ ಶಕ್ತಿ ಎಲ್ಲಿದೆ’ ಎಂಬ ಹೇಳಿಕೆ ಅವರು ಪಕ್ಷಕ್ಕೆ ಬಗೆದಿರುವ ದ್ರೋಹದ ಪ್ರತೀಕ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT