ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೇ ನೋಡಿ ದುರ್ಬಲ ಕಾಂಗ್ರೆಸ್‌ನ ಸಿಎಂ ಸ್ಥಾನದ ಆಕಾಂಕ್ಷಿಗಳು: ಬಿಜೆಪಿ ವ್ಯಂಗ್ಯ

Last Updated 3 ಏಪ್ರಿಲ್ 2021, 15:01 IST
ಅಕ್ಷರ ಗಾತ್ರ

ಬೆಂಗಳೂರು: ದುರ್ಬಲ ಕಾಂಗ್ರೆಸ್‌ ಪಕ್ಷದ ಸಿಎಂ ಸ್ಥಾನದ ಆಕಾಂಕ್ಷಿಗಳು ಇವರೇ ನೋಡಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘ದುರ್ಬಲ ಕಾಂಗ್ರೆಸ್‌ ಪಕ್ಷದ ಸಿಎಂ ಸ್ಥಾನದ ಆಕಾಂಕ್ಷಿಗಳು ಇವರೇ, ಭ್ರಷ್ಟಾಚಾರ ಆರೋಪಿ ಡಿ.ಕೆ.ಶಿವಕುಮಾರ್, ಜೆಡಿಎಸ್‌ ಪಕ್ಷದಿಂದ ವಲಸೆ ಬಂದು, ಸ್ವಕ್ಷೇತ್ರದಲ್ಲಿ ಸೋತಿರುವ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ವಿರೋಧಿ, ಸ್ವಕ್ಷೇತ್ರದಲ್ಲಿ ಸೋತಿರುವ ಮಲ್ಲಿಕಾರ್ಜುನ ಖರ್ಗೆ, ಇದು ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯಾಗಲು ಇರಬೇಕಾದ ಮಾನದಂಡವೇ? ಎಂದು ಪ್ರಶ್ನಿಸಿದೆ.

‘ಡಿಕೆಶಿ ಅವರ ಮುಖವನ್ನು ಸಿದ್ದರಾಮಯ್ಯ ಅವರು ನೋಡುತ್ತಿಲ್ಲ. ಸಿದ್ದರಾಮಯ್ಯ ಮುಖವನ್ನು ಡಿಕೆಶಿ ನೋಡುತ್ತಿಲ್ಲ. ಕಾಂಗ್ರೆಸ್ ಒಳಜಗಳ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದ್ದು, ಒಳಜಗಳದಿಂದಾಗಿ ನೆಲೆ ಕಳೆದುಕೊಳ್ಳಲಿದೆ’ ಎಂದು ಮತ್ತೊಂದು ಟ್ವೀಟ್‌ ಮಾಡಿದೆ.

‘ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿ, ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿರುವ ಜನತೆ ನಮ್ಮ ಪಕ್ಷವನ್ನು ಗೆಲ್ಲಿಸುತ್ತಾರೆ’ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

‘ಸಿದ್ದರಾಮಯ್ಯ ಅವರು ಅಧಿಕಾರದ ಗದ್ದುಗೆಗೆ ಏರಲು ಅಹಿಂದ ಜಪ ಮಾಡಿದರು. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ದಲಿತರಿಗೆ ನ್ಯಾಯವನ್ನು ಒದಗಿಸಿಲ್ಲ. ದಲಿತ ಮುಖಂಡರನ್ನು ಅಧಿಕಾರ ಪಡೆಯಲು ಮಾತ್ರ ಕಾಂಗ್ರೆಸ್ ಬಳಸಿಕೊಂಡಿದೆ’ ಎಂದು ಬಿಜೆಪಿ ಆರೋಪಿಸಿದೆ.

‘ಕಾಂಗ್ರೆಸ್ ಪಕ್ಷ ಕೇವಲ ಪರಮೇಶ್ವರ್ ಅವರನ್ನು ಸೋಲಿಸಿದ್ದಲ್ಲ, ಅಂಬೇಡ್ಕರ್ ಅವರಿಗೂ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಂಬೇಡ್ಕರ್‌ ಅವರನ್ನು ಸೋಲಿಸಿದ ಕಾಂಗ್ರೆಸ್‌ ಅಂಬೇಡ್ಕರ್‌ ಅವರ ಶವ ಸಂಸ್ಕಾರಕ್ಕೂ ಜಾಗ ನೀಡದೆ ಅನ್ಯಾಯ ಮಾಡಿದೆ’ ಎಂದು ಬಿಜೆಪಿ ಟೀಕಿಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT