ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮ್ಲಜನಕ ಕೊರತೆಯಿಂದ ಸತ್ತಿಲ್ಲ’ –ಈ ಸುಳ್ಳು ಬಿಜೆಪಿಯೇ ಹೇಳಲು ಸಾಧ್ಯ: ಕಾಂಗ್ರೆಸ್

ಅಕ್ಷರ ಗಾತ್ರ

ಬೆಂಗಳೂರು: ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿಯಾಗಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್‌ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿಲ್ಲ ಎಂಬ ಇಂಥದ್ದೊಂದು ಮಹಾ ಸುಳ್ಳನ್ನು ಬಿಜೆಪಿ ಮಾತ್ರ ಹೇಳಲು ಸಾಧ್ಯ’ ಎಂದು ಕಿಡಿಕಾರಿದೆ.

‘ಯಾವುದೇ ಲಜ್ಜೆ, ಆತ್ಮಸಾಕ್ಷಿ, ಪಾಪಪ್ರಜ್ಞೆ, ನೈತಿಕತೆ ಇಲ್ಲದ ಪಕ್ಷ ಬಿಜೆಪಿ ಎನ್ನಲು ಇದಕ್ಕಿಂತ ಉದಾಹರಣೆ ಇನ್ನೇನೂ ಬೇಕಿಲ್ಲ. ಆಮ್ಲಜನಕ ಇಲ್ಲದೆ ಸಾವಿರಾರು ಮಂದಿ ಜೀವ ಬಿಟ್ಟಿದ್ದು, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ್ದು ಇದೆಲ್ಲವನ್ನೂ ದೇಶ ಮರೆತಿಲ್ಲ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

‘ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಳೆದ ವರ್ಷದಂತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೊರೊನಾ 3ನೇ ಅಲೆ ಎದುರಿಸಲು ಗಂಭೀರ ಪ್ರಯತ್ನ ಮಾಡಬೇಕಿದೆ. ವೈದ್ಯಕೀಯ ವ್ಯವಸ್ಥೆಯ ಲೋಪ ಸರಿಪಡಿಸಿ ಸಜ್ಜುಗೊಳ್ಳಬೇಕಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಇದ್ಯಾವುದರ ಪರಿವೇ ಇಲ್ಲದೆ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವಲ್ಲಿ ನಿರತವಾಗಿದೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ಪೆಗಾಸಸ್ ಹಗರಣದಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಅವರ ನೇರ ಕೈವಾಡವಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದಿದ್ದು ಸ್ಪಷ್ಟ. ಇಂತಹದ್ದೇ ಸ್ನೂಪ್ ಗೇಟ್ ಹಗರಣ ನಡೆಸಿದ ಇತಿಹಾಸ ಅವರಿಗಿದೆ. ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಬಿಜೆಪಿ, ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿಸಲು ನಡೆಸಿದ ಕಸರತ್ತುಗಳು ಒಂದೆರಡಲ್ಲ. ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಮಾಡುವುದು. ಶಾಸಕರ ರೂಮ್‌ಗಳಿಗೆ ಕಳ್ಳ ಕ್ಯಾಮೆರಾ ಇಡುವುದು. ಶಾಸಕರನ್ನು ಹನಿ ಟ್ರಾಪ್, ಬ್ಲಾಕ್‌ಮೇಲ್‌ ಮಾಡುವುದು. ಬಿಜೆಪಿ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ’ ಎಂದು ಕಾಂಗ್ರೆಸ್ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT