ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಲ್ಲಿ ಅಸಮಾಧಾನದ ಅಲೆ; ಮನವೊಲಿಕೆಗೆ ದೇವೇಗೌಡರ ಯತ್ನ

ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಂಡ ಶಾಸಕರು
Last Updated 14 ಫೆಬ್ರುವರಿ 2022, 19:22 IST
ಅಕ್ಷರ ಗಾತ್ರ

ಹಾಸನ: ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಜೆಡಿಎಸ್‌ ಪಾಲಿನ ಭದ್ರಕೋಟೆ ಎನಿಸಿರುವ ಹಾಸನ ಜಿಲ್ಲೆಯಲ್ಲಿ ಪಕ್ಷದೊಳಗೆ ಅಸಮಾಧಾನದ ಅಲೆ ಏಳಲು ಆರಂಭವಾಗಿದೆ.

ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳು, ಶಾಸಕರು, ಮುಖಂಡರ ನಡವಳಿಕೆಗಳು ಪಕ್ಷದ ವರಿಷ್ಠಎಚ್.ಡಿ.ದೇವೇಗೌಡ ಅವರಿಗೂ ತಲೆನೋವಾಗಿ ಪರಿಣಮಿಸಿದೆ.

ಅರಕಲಗೂಡು ಮುಖಂಡ ಹೊನ್ನವಳ್ಳಿ ಕೆ.ಸತೀಶ್‌ ಅವರನ್ನು ಒಂದೂವರೆ ವರ್ಷದ ಹಿಂದೆ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ನೇಮಿಸಿರುವುದು ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಕೆರಳಿಸಿದೆ. ಪಕ್ಷದ ನಾಯಕರ ವಿರುದ್ಧ ಅವರು ಅಸಮಾಧಾನಗೊಳ್ಳಲು ಪ್ರಮುಖ ಕಾರಣವಾಗಿದೆ.

‘ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆನಡೆಸಿದ್ದ ಸತೀಶ್‌ ಅವರನ್ನೇ ಎರಡು ಸ್ಥಾನಗಳಿಗೆ ನೇಮಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಬೆಂಬಲವಾಗಿನಿಂತರೆ ತಾಯಿಯೇ ಮಗುವಿಗೆ ವಿಷ ಉಣಿಸಿದಂತೆ. ವಿಷ ತಿಂದ ಮಗು ಬದುಕಲುಸಾಧ್ಯವೇ? ವರಿಷ್ಠರೂ ಇದಕ್ಕೆ ಬೆಂಬಲ ನೀಡುತ್ತಿರುವುದು ನೋವಿನ ಸಂಗತಿ’ ಎಂದು ರಾಮಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಜಿಲ್ಲೆಯ ಮಟ್ಟಿಗೆ ಪಕ್ಷದಲ್ಲಿ ರೇವಣ್ಣ ಅವರ ಮಾತು ಅಂತಿಮ. ರಾಮಸ್ವಾಮಿ ಮನವಿಗೆ ಅವರೂ ಸ್ಪಂದಿಸಲಿಲ್ಲ.ಈಬೆಳವಣಿಗೆಯಿಂದ ಬೇಸತ್ತು ಹಿರಿಯ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷ ತ್ಯಜಿಸುವ ಬಗ್ಗೆಯೂ ಆಪ್ತರ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಭಾನುವಾರ ನಡೆದ ಕಾರ್ಯಕರ್ತರ ಸಭೆಗೂ ಗೈರಾಗಿದ್ದರು. ಈ ಸೂಚನೆ ಅರಿತ ಗೌಡರು, ರಾಮಸ್ವಾಮಿ ಮನವೊಲಿಕೆಗೆ ಪ್ರಯತ್ನ ಆರಂಭಿಸಿದ್ದಾರೆ.

ಇನ್ನು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಯಾವುದೇ ಪಕ್ಷದ ಸರ್ಕಾರವಿದ್ದರೂ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ, ಕ್ಷೇತ್ರದಅಭಿವೃದ್ಧಿಗೆ ಬೇಕಾದ ಅನುದಾನ ತರುತ್ತಿದ್ದಾರೆ. ಅಲ್ಲದೇ, ಕ್ಷೇತ್ರದಲ್ಲಿ ಕಾರ್ಯಕ್ರಮಏರ್ಪಡಿಸಿ, ಬಿಜೆಪಿ, ಕಾಂಗ್ರೆಸ್‌ ನಾಯಕರನ್ನು ಆಹ್ವಾನಿಸಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಾಗಿ, ಅವರೂ ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರಿಂದ ಕಾರ್ಯಕರ್ತರಲ್ಲೂ ಗೊಂದಲು ಮೂಡಿದೆ. ಭಾನುವಾರ ನಡೆದ ಕಾರ್ಯಕರ್ತರ ಸಭೆಗೂ ಶಿವಲಿಂಗೇಗೌಡರು ಗೈರಾಗಿದ್ದರು.

‘ಬಿ.ಎಸ್‌.ಯಡಿಯೂರಪ್ಪ ಅರಸೀಕೆರೆಗೆಭೇಟಿ ನೀಡಿದ್ದ ಕಾರಣ ಶಾಸಕರು ಬಂದಿಲ್ಲ. ಅದು ಸೂಕ್ಷ್ಮ ಕ್ಷೇತ್ರ. ಅಲ್ಲಿ ಒಕ್ಕಲಿಗಸಮುದಾಯಕ್ಕೆ ಹೆಚ್ಚು ಶಕ್ತಿಯಿಲ್ಲ. ಲಿಂಗಾಯತರು, ಕುರುಬ ಸಮಾಜದವರುಹೆಚ್ಚಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಅವರು ನಡೆದುಕೊಳ್ಳಬೇಕಾಗುತ್ತದೆ’ಎಂದುಗೈರು ಹಾಜರಿಯನ್ನು ದೇವೇಗೌಡರು ಸಮರ್ಥಿಸಿಕೊಂಡರು.

ಭವಾನಿ ರೇವಣ್ಣ ಸ್ಪರ್ಧೆಗೆ ಒತ್ತಡ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಬೇಕೆಂದು ಕಾರ್ಯಕರ್ತರು, ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್‌ ಕಾರ್ಯತಂತ್ರರೂಪಿಸುತ್ತಿದೆ. ಅಭ್ಯರ್ಥಿ ಯಾರು ಎಂಬ ಕುತೂಹಲ ಮನೆ ಮಾಡಿದೆ.

ಹಾಸನದಲ್ಲಿ ರೇವಣ್ಣ ಸ್ಪರ್ಧಿಸಿ, ಭವಾನಿ ಅವರನ್ನು ಹೊಳೆನರಸೀಪುರ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ.

ಜೆಡಿಎಸ್‌ಗೆ ಮರಳುತ್ತಾರಾ ರಮೇಶ್‌ ಬಂಡಿಸಿದ್ದೇಗೌಡ?

ಮಂಡ್ಯ: ಜೆಡಿಎಸ್‌ನಿಂದ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದ್ದ ರಮೇಶ್‌ಬಾಬು ಬಂಡಿಸಿದ್ದೇಗೌಡ ಮತ್ತೆ ಜೆಡಿಎಸ್‌ಗೆ ಮರಳುತ್ತಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿಯಲ್ಲಿ ಭಾನುವಾರ ಸಮಾರಂಭವೊಂದರಲ್ಲಿ ರಮೇಶ್‌ಬಾಬು ಹಾಗೂ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅಕ್ಕಪಕ್ಕ ಕುಳಿತು ನಗುನಗುತ್ತಲೇ ಮಾತನಾಡಿದ್ದರು. ಇದು, ಜೆಡಿಎಸ್‌ ಸೇರಬಹುದು ಎಂಬ ಶಂಕೆ ಮೂಡಿಸಿದೆ. ಐದು ವರ್ಷಗಳಿಂದ ಇಬ್ಬರೂ ಭೇಟಿಯಾಗಿರಲಿಲ್ಲ, ವೇದಿಕೆ ಹಂಚಿಕೊಂಡಿರಲಿಲ್ಲ. ಜೊತೆಗೆ ಕುಳಿತಿರುವ ಚಿತ್ರ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

2018ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನಿಂದ ಬಂಡಾಯವೆದ್ದು ಕಾಂಗ್ರೆಸ್‌ ಸೇರಿದ್ದ 7 ಶಾಸಕರಲ್ಲಿ ರಮೇಶ್‌ ಕೂಡಾ ಇದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯ ಎದುರು ಸೋಲು ಕಂಡಿದ್ದರು. ‘ಅದು ನುಡಿನಮನ ಕಾರ್ಯಕ್ರಮ. ಬಹಳ ವರ್ಷದ ನಂತರ ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದೆವು. ಅಲ್ಲಿ ರಾಜಕಾರಣ ಇರಲಿಲ್ಲ. ಕುಮಾರಸ್ವಾಮಿ ಜೊತೆ ಆತ್ಮೀಯವಾಗಿ ಮಾತನಾಡಿದೆ. ಅದಕ್ಕೆ ಬೇರೆ ಅರ್ಥವಿಲ್ಲ’ ಎಂದು ರಮೇಶ್‌ಬಾಬು ಬಂಡಿಸಿದ್ದೇಗೌಡ ಪ್ರತಿಕ್ರಿಯಿಸಿದರು.

ಪಕ್ಷ ತೊರೆಯದಿರಿ; ಒಟ್ಟಿಗೆ ಸಾಗೋಣ:ದೇವೇಗೌಡ

ಬೆಂಗಳೂರು: ‘ಜೆಡಿಎಸ್‌ ತೊರೆದು ಹೋಗುವ ಯೋಚನೆಯಲ್ಲಿರುವವರಿಗೆ ಈಗಲೂ ಕಾಲ ಮಿಂಚಿಲ್ಲ. ಒಟ್ಟಿಗೆ ಕೆಲಸ ಮಾಡೋಣ ಬನ್ನಿ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ 123 ಎಂದು ಫಲಕ ಹಾಕಿಕೊಂಡರೆ ಆಗುತ್ತಾ? ಪಕ್ಷ ಸಂಘಟನೆ ಮಾಡಬೇಕು. ಜೆಡಿಎಸ್‌ ಬಿಟ್ಟು ಹೋಗಲು ಸಜ್ಜಾಗಿರುವವರು ಜತೆಗೆ ಬಂದರೆ ಒಟ್ಟಾಗಿಸಾಗುತ್ತೇವೆ’ ಎಂದರು.

ಹಾಸನದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದಾಗ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಎ.ಟಿ. ರಾಮಸ್ವಾಮಿ ಗೈರಾಗಿದ್ದರು. ರಾಮಸ್ವಾಮಿ ಪಕ್ಷ ತೊರೆದು ಹೋಗಬಹುದು ಎಂದು ತಾವು ಹೇಳಿರಲಿಲ್ಲ ಎಂದು ಈ ಕುರಿತು ಸ್ಪಷ್ಟನೆ ನೀಡಿದರು.

ಸಿ.ಎಂ. ಇಬ್ರಾಹಿಂ ಪಕ್ಷಕ್ಕೆ ಬಂದ ತಕ್ಷಣ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ಅವರ ಗಮನಕ್ಕೂ ತರಲಾಗಿದೆ. ಈಗ ಒಬ್ಬರು ಅಧ್ಯಕ್ಷರಿದ್ದಾರೆ. ಆರು ಬಾರಿ ಶಾಸಕರಾದವರನ್ನು ನಾಳೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ? ಮುಂದೆ ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಪರಿಗಣಿಸುವುದಾಗಿ ಇಬ್ರಾಹಿಂ ಅವರಿಗೆ ತಿಳಿಸಲಾಗಿದೆ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಏಕೆ ಹೋಗಬೇಕು? ಕುಮಾರಸ್ವಾಮಿ ಎಲ್ಲಿ ಸ್ಪರ್ಧಿಸಬೇಕು ಎಂಬುದು ದೇವರ ಇಚ್ಛೆ. ನಿಖಿಲ್‌ ಕುಮಾರಸ್ವಾಮಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಬೇಕೊ? ಬೇಡವೊ? ಎಂಬುದನ್ನು ಕುಮಾರಸ್ವಾಮಿ ತೀರ್ಮಾನಿಸುತ್ತಾರೆ’ ಎಂದು ದೇವೇಗೌಡ ಹೇಳಿದರು.

***
ಹಾಸನ ಜನರಿಗೆ ಪ್ರೀತಂ ಗೌಡರ ಯೋಚನೆ–ಯೋಜನೆ ಒಪ್ಪಿದೆಯೋ? ರೇವಣ್ಣ ಅವರ ಅಭಿವೃದ್ಧಿ ಶೈಲಿ ಇಷ್ಟವಾಗಿದೆಯೋ ಸ್ಪರ್ಧೆ ನಡೆಯಲಿ.

-ಪ್ರೀತಂ ಗೌಡ,ಹಾಸನ, ಬಿಜೆಪಿ ಶಾಸಕ

***

ಹಾಸನ ಕ್ಷೇತ್ರದಲ್ಲಿ ನಮ್ಮ ಕುಟುಂಬದವರು ಸ್ಪರ್ಧಿಸುವುದು ವದಂತಿ. ಅರಸೀಕೆರೆ, ಅರಕಲಗೂಡು ಕ್ಷೇತ್ರದ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

ಪಕ್ಷದಲ್ಲಿನ ಕೆಲ ವಿದ್ಯಮಾನಗಳು ಮನಸ್ಸಿಗೆ ಬೇಸರ ತರಿಸಿದ್ದು, ನಾಯಕರಗಮನಕ್ಕೆ ತರಲಾಗುವುದು. ಜೆಡಿಎಸ್ ತ್ಯಜಿಸುವ ಬಗ್ಗೆ ಚಿಂತಿಸಿಲ್ಲ

-ಎ.ಟಿ.ರಾಮಸ್ವಾಮಿ, ಅರಕಲಗೂಡು ಶಾಸಕ

***

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗುತ್ತಿದೆ.ಮುಂದಿನ ಚುನಾವಣೆಗಾಗಿ ಪಕ್ಷ ಕಾರ್ಯತಂತ್ರ ರೂಪಿಸುತ್ತಿದೆ

-ಜಾವಗಲ್‌ ಮಂಜುನಾಥ್‌, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT