ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್‌ ಎಂಜಿನ್‌ ಸರ್ಕಾರದಿಂದ ಡಬಲ್‌ ದೋಖಾ: ಪ್ರಿಯಾಂಕ್‌ ಖರ್ಗೆ ಟೀಕೆ

Last Updated 6 ಸೆಪ್ಟೆಂಬರ್ 2022, 13:10 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯು ‘ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ಭಾರಿ ಅಭಿವೃದ್ಧಿಯಾಗಿದೆ’ ಎಂದು ಹೇಳಿಕೊಂಡಿದ್ದಕ್ಕೆ ಎದಿರೇಟು ನೀಡಿರುವ ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ, ‘ಡಬಲ್ ಎಂಜಿನ್ ಸರ್ಕಾದಿಂದ ರಾಜ್ಯದಲ್ಲಿ ಅಬಿವೃದ್ಧಿ ಆಗಿಲ್ಲ. ಅದರ ಬದಲು ರಾಜ್ಯಕ್ಕೆ ಡಬಲ್‌ ದೋಖಾ ಆಗುತ್ತಿದೆ’ ಎಂದು ಟೀಕಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮಂಗಳೂರಿಗೆ ಭೇಟಿ ನೀಡಿದಾಗ ಪ್ರಧಾನಿಯವರು ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಸ್ಥಾನ ಕಲ್ಪಿಸಬಹುದು, ಅವರು ತುಳುವಿನಲ್ಲಿ ಮಾತನಾಡಬಹುದು ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ತುಳುವರನ್ನು ಪ್ರಧಾನಿ ನಿರಾಸೆಗೊಳಿಸಿದ್ದಾರೆ’ ಎಂದರು.

‘ನಾರಾಯಣ ಗುರು ನಿಗಮ ಸ್ಥಾಪನೆ ಆಗಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆ. ಪ್ರಧಾನಿ ಎದುರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ನಾರಾಯಣ ಗುರುಗಳಿಗೆ ಬಿಜೆಪಿ ಪದೇ ಪದೇ ಅವಮಾನ ಮಾಡಿದೆ. ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ದಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿತು. ಪಠ್ಯ ಪುಸ್ತಕ ಪರಿಷ‌್ಕರಣಾ ಸಮಿತಿ ನಾರಾಯಣಗುರುಗಳ ಕುರಿತ ಪಠ್ಯವನ್ನೇ ಕೈಬಿಟ್ಟಿತ್ತು. ಆಗೆಲ್ಲಾ ಬಿಜೆಪಿಯ ಒಬ್ಬ ನಾಯಕನೂ ಮಾತನಾಡಲಿಲ್ಲ. ಜನ ತಿರುಗಿ ಬಿದ್ದು, ಸಮುದಾಯದಿಂದ ಒತ್ತಡ ಬಂದ ಬಳಿಕ ಸಚಿವ ವಿ.ಸುನಿಲ್‌ ಕುಮಾರ್‌ ಕಾಟಾಚಾರಕ್ಕೆ ಪತ್ರ ಬರೆದರು’ ಎಂದರು.

‘ಕೋಲಿ ಸಮಾಜ ಮತ್ತು ಮೊಗವೀರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಆದರೆ ಇದನ್ನು ಅನುಷ್ಠಾನಕ್ಕೆ ತರುವ ಯಾವುದೇ ಪ್ರಯತ್ನ ಮೂರು ವರ್ಷಗಳಲ್ಲಿ ಆಗಿಲ್ಲ. ಡಬಲ್‌ ಎಂಜಿನ್ ಸರ್ಕಾರ ಮೂರು ವರ್ಷದಿಂದ ಏನು ಕತ್ತೆ ಕಾಯುತ್ತಿದೆಯೇ. ಅವರ ಮತ ಪಡೆಯುವ, ತಮ್ಮ ಸಿದ್ಧಾಂತಕ್ಕಾಗಿ ಅವರನ್ನು ಬಲಿಪಶು ಮಾಡುವ ‌ಬಿಜೆಪಿ ಶಾಸಕರು ಅವರಿಗೆ ಆರ್ಥಿಕ ಸಮಾನತೆ ಒದಗಿಸುವ ವಿಚಾರದಲ್ಲಿ ಸುಮ್ಮನಿದ್ದಾರೆ. ಪ್ರಧಾನಿ ಬಳಿ ಈ ಬಗ್ಗೆ ಕೇಳಲು ಅಂಜಿಕೆ ಏಕೆ. ನೀವೇನು ಆಸ್ತಿ ಪಾಲನ್ನು ಕೇಳುತ್ತಿಲ್ಲವಲ್ಲ’ ಎಂದರು.

‘75 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡುತ್ತಿದೆ ಎಂದು ಪ್ರಶ್ನಿಸುವ ಬಿಜೆಪಿಯವರು ಕಾಂಗ್ರೆಸ್‌ ಕಾಲದಲ್ಲಿ ನಿರ್ಮಿಸಿದ ಒಂದೊಂದೇ ಸ್ವತ್ತುಗಳನ್ನು ಎಂಟು ವರ್ಷಗಳಲ್ಲಿ ಮಾರಾಟ ಮಾಡಿದ್ದನ್ನು ಬಿಟ್ಟು ಬೇರೇನೂ ಕೆಲಸ ಮಾಡಿಲ್ಲ. ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಯುಗ ಪುರುಷರಾದ ಕೋಟಿ– ಚೆನ್ನಯ ಅವಳಿವೀರರ ಹೆಸರಿಡುವಂತೆ ಜನರು ಒತ್ತಾಯಿಸಿದರೆ, ಕೇಂದ್ರ ಸರ್ಕಾರ ಅದನ್ನು ಉದ್ಯಮಿ ಅದಾನಿಗೆ ಮಾರಾಟ ಮಾಡಿದೆ. ಮೋದಿ ಮನಸ್ಸು ಮಾಡಿದರೆ ಚಿಟಿಕೆ ಹೊಡೆಯವುದರಲ್ಲಿ ಕೆಲಸ ಮಾಡಿ ತೋರಿಸುತ್ತಾರೆ ಎಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಈ ಕೆಲಸ ಮಾಡಲು ಏನು ದಾಡಿ’ ಎಂದು ಪ್ರಶ್ನಿಸಿದರು.

’ಭಾರಿ ಮಳೆಯಿಂದ ಬೆಟ್ಟ ಕುಸಿತ, ಶಿರಾಡಿ ಘಾಟಿ ರಸ್ತೆಯ ಅವ್ಯವಸ್ಥೆಗಳನ್ನು ಮೂರು ವರ್ಷಗಳಿಂದ ನೋಡುತ್ತಲೇ ಇದ್ದೇವೆ. ರಾಷ್ಟ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್‌) ಗೃಹಸಚಿವ ಅಮಿತಾ ಶಾ ಅವರೇ ಅಧ್ಯಕ್ಷರು. ಮಳೆಯಿಂದ ಯಾವೆಲ್ಲ ಮೂಲಸೌಕರ್ಯಗಳು ಹಾಳಾಗಿದೆ. ಬೆಳೆ ಎಷ್ಟು ಹಾನಿಯಾಗಿದೆ, ರಸ್ತೆಗಳು ಎಷ್ಟು ಹಾಳಾಗಿವೆ ಎಂಬ ವರದಿ ತಯಾರಿಸಿ ಸರ್ಕಾರ ಒಮ್ಮೆಯಾದರೂ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದೆಯೇ? ರಾಜ್ಯದಲ್ಲಿ ಮಳೆಯಿಂದ ₹ 30ಸಾವಿರ ಕೋಟಿಗೂ ಅಧಿಕ ಸೊತ್ತುಗಳು ಹಾನಿಯಾಗಿದೆ. ಕೇಂದ್ರವು ಕೇವಲ ₹ 2 ಸಾವಿರ ಕೋಟಿ ಬಿಡಿಗಾಸು ಪರಿಹಾರ ನೀಡುತ್ತಿದೆ. ಬಿಜೆಪಿ ಅದನ್ನೇ ಸಾಧನೆ ಎಂದು ಬಿಂಬಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವ ಅಗ್ರ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರಗತಿಪಥದಲ್ಲಿದ್ದ ಕರ್ನಾಟಕವನ್ನು ಇವರು ಸಾಲಗಾರ ರಾಜ್ಯವನ್ನಾಗಿ ಮಾಡಿ, ಕನ್ನಡಿಗರನ್ನು ಸಾಲದಲ್ಲಿ ಮುಳುಗಿಸಿದ್ದಾರೆ. ತಪ್ಪು ಆರ್ಥಿಕ ನೀತಿಗಳಿಂದ ಸರ್ಕಾರ ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ. ಮೋದಿ ಮುಂದೆ ಬಾಯಿ ಬಿಚ್ಚಲು ರಾಜ್ಯದ ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

’ಬಿಜೆಪಿ ನಾಯಕರಿಗೆ ಏಕೈಕ ಆಸಕ್ತಿ ಇರುವುದು ಕಮಿಷನ್‌ ಮೇಲೆ. ಈ ಆರೋಪ ಮಾಡಿದ್ದು ಕೂಡ ಬಿಜೆಪಿಯವರೇ. ಇದು ಭ್ರಷ್ಟ ಸರ್ಕಾರ ಎಂದು ಹೇಳಿದ್ದು ಸಿ.ಪಿ.ಯೋಗೇಶ್ವರ್‌ ಹಾಗೂಎಚ್‌.ವಿಶ್ವನಾಥ್‌. ₹ 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಕುರ್ಚಿ ನನ್ನದಾಗುತ್ತಿತ್ತು ಎಂದು ಹೇಳಿದ್ದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌. ಸರ್ಕಾರದಲ್ಲಿ ಏನೂ ಕೆಲಸಕಾರ್ಯ ನಡೆಯುತ್ತಿಲ್ಲ, ಸುಮ್ಮನೆ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ ಎಂದಿದ್ದು ಸಚಿವ ಮಾಧುಸ್ವಾಮಿ. ಕೆ.ಎಸ್‌.ಈಶ್ವರಪ್ಪ ಸಂಪುಟ ಸಚಿವರಾಗಿದ್ದಾಗ ಸರ್ಕಾರದ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಸ್ಥಿತಿ ರಾಜ್ಯದ್ದು’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಲೆನಾಡು, ಕರಾವಳಿ ಪರಿಸ್ಥಿತಿ ಇನ್ನೂ ವಿಪರ್ಯಾಸ. ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಮತ್ತು ಸಚಿವರಿಗೆ ದಿಗ್ಬಂಧನ ಹಾಕಿದ್ದು ಈ ಪ್ರದೇಶದಲ್ಲಿ. ಎಬಿವಿಪಿಯವರು ಗೃಹಸಚಿವರ ಗೃಹಕಚೇರಿಗೆ ದಾಳಿ ಮಾಡಿದ್ದಾರೆ. ನೀವು ಗೂಂಡಾಗಳನ್ನು ಬೆಳೆಸುತ್ತಿದ್ದೀರಾ ಎಂದು ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನೆ ಮಾಡಿದರೆ, ‘ಕಾಂಗ್ರೆಸ್‌ನವರೇ ನಮ್ಮನ್ನು ರೇಪ್ ಮಾಡುತ್ತಿದ್ದಾರೆ’ ಎನ್ನುತ್ತಾರೆ. ಇದು ಅವರು ಬಳಸುವ ಭಾಷೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಬದಲಾವಣೆ ಆಗಲಿದ್ದಾರೆ ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ಆದರೆ, ನಳಿನ್‌ ಕುಮಾರ್‌ ಕಟೀಲ್‌ ಇದನ್ನು ನಿರಾಕರಿಸಿದ್ದಾರೆ. ಕಟೀಲ್‌ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಮಾತ್ರವಲ್ಲ. ಈ ಪ್ರದೇಶದ ಸಂಸದರೂ ಹೌದು. ಆದರೂ ಮೋದಿ ಅವರು ಕಾರ್ಯಕ್ರಮದಲ್ಲಿ ಕಟೀಲ್‌ ಅವರ ಹೆಸರನ್ನೇನಾದರೂ ಪ್ರಸ್ತಾಪಿಸಿದರೇ? ಕಟೀಲ್‌ ಅವರೆಷ್ಟು ದುರ್ಬಲರಾಗಿದ್ದಾರೆ ಎಂದರೆ, ಬಾಯಿಗೆ ಬಂದಂತೆ ಹೇಳಿಕೆ ನೀಡಿದ ಯತ್ನಾಳ್‌ ಹಾಗೂ ಇತರ ಶಾಸಕರಿಗೆ ನೋಟಿಸ್‌ ಕೂಡಾ ಜಾರಿ ಮಾಡಿಲ್ಲ. ನಮಗೆ ಸಂಸದ ಬೇಡ. ಪ್ರಧಾನಿ ಬರುವ ಮುನ್ನವೇ ಸಂಸದರ ಬದಲಾವಣೆ ಆಗಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಪಕ್ಷದ ಕಾರ್ಯಕರ್ತರೇ ಅಭಿಯಾನ ನಡೆಸುತ್ತಾರೆ. ಕಟೀಲ್‌ ಅವರು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಬಗ್ಗೆ, ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಮಾತನಾಡುವ ಕಟೀಲ್‌ ಬಿಟ್‌ ಕಾಯಿನ್‌ ಹಗರಣದ ಬಗ್ಗೆ ಮೌನ ವಹಿಸುವುದು ಏಕೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಗೆಅಭಿವೃದ್ಧಿ ವಿಚಾರಗಳ ಅಗತ್ಯ ಇಲ್ಲ. ಅವರು ನಂಬಿಕೆ ಇಟ್ಟಿರುವುದು ಧರ್ಮ ರಾಜಕೀಯದಲ್ಲಿ ಮಾತ್ರ. ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದರೆ,ಅವರು ಹಲಾಲ್‌ ಕಟ್‌, ಜಟ್ಕಾ ಕಟ್‌ ಪ್ರಸ್ತಾಪಿಸುತ್ತಾರೆ. ಅಭಿವೃದ್ಧಿಗೆ ಹಣ ನೀಡಿ ಎಂದು ಕೇಳಿದರೆ, ಕಾಶ್ಮೀರ್‌ ಫೈಲ್ಸ್‌ ನೋಡಿದ್ದೀರಾ ಎಂದು ಕೇಳುತ್ತಾರೆ. ಪೆಟ್ರೋಲ್‌, ಡೀಸೆಲ್‌, ರಸಗೊಬ್ಬರ ಬೆಲೆ ಏರಿಕೆ ಬಗ್ಗೆ ಮಾತನಾಡಿದರೆ, ಟಿಪ್ಪು ಸುಲ್ತಾನ್‌ ಅನ್ನು ತರುತ್ತಾರೆ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಏನಾಯಿತು ಎಂದು ವಿಚಾರಿಸಿದರೆ, ಮುಸಲ್ಮಾನದ ಬಳಿ ಮಾವಿನ ಕಾಯಿ ಖರೀದಿಸಬೇಡಿ ಎನ್ನುತ್ತಾರೆ. ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿ ಎಂದರೆ, ಯುವಕರಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ, ಗೋ ರಕ್ಷಣೆಗೆ ಕಳುಹಿಸುತ್ತಾರೆ. ಅಕ್ಕಿ, ಗೋಧಿ, ಮೊಸರು, ಹಾಗೂ ಪೆನ್ಸಿಲ್‌ ಮೇಲೆ ಏಕೆ ಜಿಎಸ್‌ಟಿ ಹಾಕಿದ್ದೀರಿ ಎಂದು ಪ್ರಶ್ನಿಸಿದರೆ, ಆಜಾನ್‌ ನಿಷೇಧಿಸುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳುತ್ತಾರೆ‘ ಎಂದು ವ್ಯಂಗ್ಯವಾಗಿ ಹೇಳಿದರು.

‘2.40 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವರ ಯೋಗ್ಯತೆಗೆಮೂರು ವರ್ಷಗಳಲ್ಲಿ ಒಂದಾದರೂ ನೇಮಕಾತಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿದ್ದಾರೆಯೇ? 545 ಪಿಎಸ್‌ಐ ಹುದ್ದೆಗಳಿಗೆ 54 ಸಾವಿರ ಜನ ಅರ್ಹತೆ ಗಳಿಸಿದ್ದರು. ಈ ಹುದ್ದೆಗಳನ್ನು ₹ 80 ಲಕ್ಷದಿಂದ ₹ 1 ಕೋಟಿವರೆಗೆ ಮಾರಾಟ ಮಾಡಿದರು. ಆದರೂ, ನೇಮಕಾತಿಯಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಗೃಹಸಚಿವರು ಸದನದಲ್ಲೇ ನಾಲ್ಕು ಸಲ ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಐಪಿಎಸ್‌ ಅಧಿಕಾರಿ ಏಕೆ ಬಂಧನಕ್ಕೊಳಗಾದರು. ₹ 15 ಲಕ್ಷ ಪಡೆದ ಬಗ್ಗೆ ಬಿಜೆಪಿಯ ಒಬ್ಬರು ಶಾಸಕರ ಧ್ವನಿಮುದ್ರಿಕೆ ಬಹಿರಂಗವಾಗಿದೆ. ಅದು ನನ್ನದೇ ಧ್ವನಿ ಎಂದು ಆ ಶಾಸಕರೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ಶಾಸಕರು ಸಚಿವರ ಬ್ರೋಕರ್‌ಗಳಾ, ವಿಧಾನಸೌಧವೇನು ವ್ಯಾಪಾರ ಸಧ ಮಾಡಿಬಿಟ್ಟಿದ್ದೀರಾ. ಯುವಜನರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ? ನಾಚಿಕೆ ಆಗುವುದಿಲ್ಲವೇ ನಿಮಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಕೆಪಿಟಿಸಿಎಲ್‌ ಕಿರಿಯ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಹುದ್ದಗೆಳಿಗೆ 3.5 ಲಕ್ಷ ಯುವಜನರು ಪರೀಕ್ಷೆ ಬರೆದಿದ್ದಾರೆ. ಹಗರಣ ಆಗಿಲ್ಲ ಎಂದು ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ 20 ಜನ ಈಗಾಗಲೇ ಬಂಧಿತರಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರೆ ಕಾಂಗ್ರೆಸ್‌ನವರ ಹೆಸರೂ ಬರುತ್ತದೆ ಎಂದು ಹೆದರಿಸುತ್ತಾರೆ. ಕಾಂಗ್ರೆಸ್‌ನವರ ಹೆಸರು ಬಂದರೆ ಬರಲಿ. ಅವರನ್ನೂ ಒದ್ದು ಒಳಗೆ ಹಾಕಿ’ ಎಂದರು.

’ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಪಾಲಕ ಎಂಜಿನಿಯರ್‌ ಹುದ್ದೆಗಳು, ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು, ಪಶುಸಂಗೋಪನಾ ಇಲಾಖೆ ಹಾಗೂ ತೊಟಗಾರಿಕೆ ಇಲಾಖೆಯ ನೇಮಕಾತಿಯಲ್ಲಿ ಹಗರಣ ನಡೆದಿದೆ. ಕೆಪಿಎಸ್ಸಿ ಮತ್ತು ಕೆಇಎ ಮೂರು ವರ್ಷಗಳಲ್ಲಿ ನೇಮಕಾತಿಗೆ ಸಂಬಂಧಿಸಿ 8ಕ್ಕೂ ಹೆಚ್ಚು ಅಧಿಸೂಚನೆಗಳನ್ನು ಹೊರಡಿಸಿವೆ. 18ಲಕ್ಷದಿಂದ 20 ಲಕ್ಷ ಯುವಜನರು ನೇಮಕಾತಿ ಪರೀಕ್ಷೆಗಳನ್ನು ಬರೆದಿದ್ದಾರೆ. ಎಲ್ಲದರಲ್ಲೂ ಭ್ರಷ್ಟಾಚಾರ ಆಗಿದೆ. ಐಪಿಎಸ್‌ ಐಎಎಸ್‌ ಕೂಡಾ ಬಂಧನಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಲು ಈ ಸರ್ಕಾರಕ್ಕೆ ತಾಕತ್ತು ಇದೆಯಾ’ ಎಂದು ಸವಾಲು ಹಾಕಿದರು.

‘ಗುತ್ತಿಗೆದಾರರ ಸಂಘದವರು ಶೇ 40 ಪರ್ಸೆಂಟ್‌ ಸರ್ಕಾರ ಎಂದು ಎರಡು ಸಲ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ರುಪ್ಸಾ ಸಂಘಟನೆಯಲ್ಲಿ 13 ಸಾವಿರ ಶಾಲೆಗಳ ಆಡಳಿತ ಮಂಡಳಿಗಳು ನೋಂದಣಿ ಆಗಿವೆ. ಶಿಕ್ಷಣ ನೀತಿಗೆ ಸಂಬಂಧಿಸಿ ಸರ್ಕಾರ ಇವರ ಸಲಹೆ ಪಡೆಯುತ್ತದೆ. ಸರ್ಕಾರದ ವಿರುದ್ಧ ಪತ್ರ ಬರೆದ ತಕ್ಷಣ ರುಪ್ಸಾ ಸಂಘಟನೆಗೆ ಮಾನ್ಯತೆಯೇ ಇಲ್ಲ ಎನ್ನುತ್ತಾರೆ’ ಎಂದರು.

‘ಬಡವರ ಮಕ್ಕಳಿಗೆ ಗೋರಕ್ಷಣೆ, ಧರ್ಮ ರಕ್ಷಣೆ ಪಾಠ ಮಾಡುವ ಬಿಜೆಪಿ ಶಾಸಕರಲ್ಲಿಎಷ್ಟು ಮಂದಿ ತಮ್ಮ ಮಕ್ಕಳು ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ. ಶಾಸಕರ ಮಕ್ಕಳು ಅಮೆರಿಕದಲ್ಲಿ, ಇಂಗ್ಲೆಂಡ್‌ನಲ್ಲಿ ಓದುತ್ತಿದ್ದಾರೆ. ಅವರೆಲ್ಲ ಉದ್ಯಮಿಗಳಾಗಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ನಡೆಸುತ್ತಿದ್ದಾರೆ. ಎಷ್ಟು ಬಿಜೆಪಿ ಶಾಸಕರ ಮಕ್ಕಳು ಗೋಮೂತ್ರ ಕುಡಿಯುತ್ತಾರೆ ತೋರಿಸಿ. ಗೋಶಾಲೆಗಳಲ್ಲಿ ಗೋವು ದತ್ತು ಪಡೆಯುವ ಯೋಜನೆಯಡಿ ಗೋವು ದತ್ತು ಪಡೆಯಲು ಎಷ್ಟು ಶಾಸಕರು ಮುಂದೆ ಬಂದಿದ್ದಾರೆ ಹೇಳಿ’ ಎಂದು ಪ್ರಶ್ನಿಸಿದರು.

’ರಾಜ್ಯದಲ್ಲೂ ಉತ್ತರ ಪ್ರದೇಶದ ಮಾದರಿ ತರುತ್ತಾರಂತೆ. ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಮಂದಿ ಉತ್ತರ ಪ್ರದೇಶದಲ್ಲಿ ದುಡಿಯುತ್ತಿದ್ದಾರೆ. ಅಲ್ಲಿನವರು ಉದ್ಯೋಗ ಅರಸಿ ಇಲ್ಲಿಗೆ ಬರುವುದೇಕೆ. ಉತ್ತರ ಪ್ರದೇಶ ಸರ್ಕಾರ ವಾರಾಣಸಿಯಲ್ಲಿ ನಡೆಸುವ ಲೇಸರ್‌ ಶೋ ವೆಚ್ಚವನ್ನು ಭರಿಸುತ್ತಿರುವುದು ಕನ್ನಡಿಗರು. 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ನಮಗೆ ಅನ್ಯಾಯ ಆಗುತ್ತಿದೆ. ನಾವು ನೀಡುವ ₹ 100 ತೆರಿಗೆಯ ಬಹುಪಾಲು ಆ ರಾಜ್ಯವನ್ನು ಸೇರುತ್ತಿದೆ. ನಮ್ಮ ದುಡ್ಡಿನಲ್ಲಿ ಅಣೆಕಟ್ಟನ್ನೋ ಇತರ ಮೂಲಸೌಕರ್ಯವನ್ನೋ ಕಟ್ಟುವುದಾದರೆ ಅಡ್ಡಿಯಿಲ್ಲ. ಅದು ಬಿಟ್ಟು ನಮ್ಮ ತೆರಿಗೆ ಹಣವನ್ನು ಯೋಗಿ ಆದಿತ್ಯನಾಥ್‌ ಲೇಸರ್‌ಶೋಗೆ ಪೋಲು ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಧಾರ್ಮಿಕ ವಿಚಾರ ಮುಂದಿಟ್ಟು ಇಲ್ಲಿನ ಯುವಜನರ ಹಾದಿ ತಪ್ಪಿಸಲಾಗುತ್ತಿದೆ. ದಯವಿಟ್ಟು ದಕ್ಷಿಣ ಕನ್ನಡ ಜನರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ತೋಡುವ ಹಳ್ಳಕ್ಕೆ ಬೀಳದಿರಿ. ಶಿವಮೊಗ್ಗ ಕೋಮುಗಲಭೆಯಿಂ‌ದ ಬಂದ್‌ ಆದಾಗ ₹ 300 ಕೋಟಿ ನಷ್ಟ ಆಗಿದೆ. ಮಂಗಳೂರು ನಾಲ್ಕೈದು ದಿನ ಬಂದ್‌ ಆದರೆ ಎಷ್ಟು ನಷ್ಟ ಆಗಬಹುದು ಊಹಿಸಿ.‘ ಎಂದರು.

‘ಕಲ್ಯಾಣ ಕರ್ನಾಟಕದ ಮಕ್ಕಳು ಇಲ್ಲಿ ಬಂದು ಓದುತ್ತಾರೆ. ಇಲ್ಲಿ ಪ್ರಬುದ್ಧತೆ ಜಾಸ್ತಿ ಎಂದು ಭಾವಿಸಿದ್ದಾರೆ. ಶೈಕ್ಷಣಿಕ ಹಬ್‌, ಟೆಕ್‌ ಹಬ್‌ ಆಗುವ ಎಲ್ಲ ಅವಕಾಶ ಕರಾವಳಿಯಲ್ಲಿದೆ. ಇಲ್ಲಿ ಅನಿಮೇಷನ್‌ ಹಬ್‌ ನಿರ್ಮಿಸಲು ಸಚಿವನಾಗಿದ್ದಾಗ ನಾನು ಶಿಫಾರಸು ಮಾಡಿದ್ದೆ. ಶೇ 100ರಷ್ಟು ಸಾಕ್ಷರತೆ ಇರುವ ಈ ಪ್ರದೇಶದಲ್ಲಿ ಇಂತಹವರಿಗೆ ಅವಕಾಶ ಕಲ್ಪಿಸಿದ್ದೀರಲ್ಲಾ. ಈ ಪ್ರದೇಶದ ಏಳಿಗೆಗೂ ಬಸವಣ್ಣ ಹಾಗೂ ನಾರಾಯಣ ಗುರುಗಳ ತತ್ವಗಳೇ ಆಧಾರ ಎಂಬುದನ್ನು ಮರೆಯಬಾರದು’ ಎಂದರು.

ಕಾಂಗ್ರೆಸ್‌ ಸರ್ಕಾರದ ಹಗರಣ ಬಯಲಿಗೆಳೆಯುವ ಉದ್ದೇಶದಿಂದ ಬಿಜೆಪಿ ಸಭೆ ನಡೆಸಿದೆ. ಜಾಸ್ತಿ ಮಾಡಿದರೆ ನೋಟಿಸ್‌ ನೀಡುವ ಸರ್ಕಾರ ಇದು. ಬಿಜೆಪಿ ಶಾಸಕರೊಬ್ಬರು ದುಡ್ಡು ತೆಗೆದುಕೊಂಡಿದ್ದು ಒಪ್ಪಿದ್ದಾರೆ. ಅವರಿಗೆ ನೋಟಿಸ್ ನೀಡುತ್ತೀರಾ, ನೇರವಾಗಿ ಜೈಲಿಗೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದರು.

ಮೋದಿ ಎಂಟು ವರ್ಷಗಳಿಂದ ಏನೂ ಮಾಡಿಲ್ಲ. ರೈತರು, ವರ್ತಕರು, ಸಾರ್ವಜನಿಕರು ಖುಷಿಯಿಂದ ಇಲ್ಲ. ಶವಾಗಾರಕ್ಕೂ ಜಿಎಸ್‌ಟಿ ಹಾಕಲಾಗಿದೆ. ಸತ್ತರೂ ಈಗ ತೆರಿಗೆ ಪಾವತಿಸಬೇಕಾದ ಸ್ಥಿತಿ ಇದೆ’ ಎಂದು ಬೇಸರ ತೋಡಿಕೊಂಡರು.

ಎಐಸಿಸಿ ಕಾರ್ಯದರ್ಶಿ ರೋಜಿ ಎಂ. ಜಾನ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಪಕ್ಷದ ಮುಖಂಡರಾದ ರಮಾನಾಥ್ ರೈ, ಜೆ. ಆರ್. ಲೋಬೊ, ಮೊಯ್ದೀನ್ ಬಾವಾ, ಐವನ್ ಡಿಸೋಜ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT