ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ನಮ್ಮದು, ಬಡಿಸುತ್ತಿರುವುದು ಬಿಜೆಪಿ: ಸಿದ್ದರಾಮಯ್ಯ

ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಕಾಂಗ್ರೆಸ್ ಕಾರಣ
Last Updated 19 ಜನವರಿ 2023, 8:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಬೇಕಾದ ಎಲ್ಲಾ ಕೆಲಸವನ್ನು ಮಾಡಿದ್ದು ಕಾಂಗ್ರೆಸ್. ಆದರೆ, ಬಿಜೆಪಿಯವರು ಎಲ್ಲವನ್ನೂ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾವು ಮಾಡಿದ ಅಡುಗೆಯನ್ನು ಬಡಿಸಿರುವ ಅವರು, ಅದನ್ನು ತಯಾರಿಸಿದ್ದು ಕೂಡ ನಾವೇ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಳ್ಳು ಹೇಳಿ ಹಕ್ಕುಪತ್ರ ವಿತರಣೆಗೆ ಕರೆಸಿದ್ದಾರೆ. ತಾವೇ ಕಾಯ್ದೆ ಮಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.

1992ರಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನಿಸಿದ್ದರು. ನಮ್ಮ ಸರ್ಕಾರ‌ಲ್ಲಿ‌ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು, ಕಂದಾಯ ಗ್ರಾಮ ಮತ್ತು ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು, ಉಳುವವನೇ ಭೂಮಿ ಒಡೆಯ ಮಾದರಿಯಲ್ಲಿ ವಾಸಿಸುವವನೇ ಮನೆಯೊಡೆಯ ಕಾಯ್ದೆ ಜಾರಿಗೆ ತಂದಿದ್ದರು ಎಂದು ಹೇಳಿದರು.

ಅದಕ್ಕೂ‌ ಮುಂಚೆ ನರಸಿಂಹಯ್ಯ ಎಂಬುವರ ಅಧ್ಯಕ್ಷತೆಯಲ್ಲಿ ತಾಂಡಾ, ಹಟ್ಟಿಗಳು, ಕುರುಬರ ಹಟ್ಟಿ, ನಾಯಕರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರ ಕುರಿತು ಅಧ್ಯಯನಕ್ಕೆ ಸಮಿತಿ ರಚಿಸಿದ್ದೆ. ನಂತರ, ಹೀರಾನಾಯ್ಕ ಎಂಬುವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದೆವು. ಅದರ ಫಲವಾಗಿ ಇಂದು ಅವರಿಗೆ ಹಕ್ಕುಪತ್ರ ಸಿಗುತ್ತಿದೆ ಎಂದರು.

ಲಂಬಾಣಿ ಸಮುದಾಯದ ಗುರು ಸೇವಾಲಾಲ್ ಜಯಂತಿ ಆರಂಭಿಸಿ, ಅವರ ಜನ್ಮಸ್ಥಳ ಅಭಿವೃದ್ಧಿಪಡಿಸಿದ್ದು ನಾವು. ಅಭಿವೃದ್ಧಿ ನಿಗಮ ಮಾಡಿ ಅಗತ್ಯ ಅನುದಾನ ಕೊಟ್ಟಿದ್ದು ನಾವು. ಪರಿಶಿಷ್ಟರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಎಸ್ ಸಿಪಿ, ಟಿಎಸ್ ಪಿ ಕಾಯ್ದೆ ಜಾರಿಗೆ ತಂದಿದ್ದು ಸಹ ನಮ್ಮ ಸರ್ಕಾರ. ಬಿಜೆಪಿಯವರು ಚುನಾವಣೆ ಬಂದಾಗ, ಎಲ್ಲವನ್ನೂ ನಾವೇ ಮಾಡಿದ್ದು ನಾವೇ ಎಂದು ಹೇಳುತ್ತಿದ್ದಾರೆ. ನಾವು ಈ ಎಲ್ಲಾ ಕೆಲಸಗಳನ್ನು ಮಾಡಿದ ಬಳಿಕ, ಇವರು ಮೋದಿ ಅವರನ್ನು ಕರೆಸಿ‌ ಹಕ್ಕುಪತ್ರ ವಿತರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಸುಳ್ಳು ಉತ್ಪಾದಿಸುವ ಕಾರ್ಖಾನೆ. ಮೋದಿ ಅವರಿಗೂ ಸುಳ್ಳು ಹೇಳಿ ಕರೆಸಿದ್ದಾರೆ. ಮೋದಿ ಕಂಡರೆ ನಮಗೆ ಭಯವಿಲ್ಲ. ನನ್ನನ್ನು ಕಂಡರೆ ಅವರಿಗೇ ಭಯ. ನಾನು ಸತ್ಯ ಹೇಳುತ್ತೇನೆ ಮತ್ತು ಆರೆಸ್ಸೆಸ್ ಟೀಕಿಸುತ್ತೇನೆ ಎಂದು ಅವರು ಭಯಪಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ಥಳದಲ್ಲಿದ್ದ ಸಿದ್ದರಾಮಯ್ಯ ಅಭಿಮಾನಿಗಳು, ಮುಂದಿನ‌ ಸಿ.ಎಂ ಸಿದ್ದರಾಮಯ್ಯ ಎಂದು‌ ಜೈಕಾರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT