ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ: ಸಿಐಡಿ ನೋಟಿಸ್‌ಗೆ ಖರ್ಗೆ ಟೀಕೆ

Last Updated 28 ಏಪ್ರಿಲ್ 2022, 10:12 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಇತ್ತೀಚೆಗೆ ಆಡಿಯೊ ಬಿಡುಗಡೆ ‌ಮಾಡಿದ್ದಕ್ಕೆ ಸಿಐಡಿ ಅಧಿಕಾರಿಗಳು ನೀಡಿದ ನೋಟಿಸ್ ಗೆ ಉತ್ತರಿಸಿರುವ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ನೀವು ಕಲಂ 91 ಹಾಗೂ 160ರ ಅಡಿಯಲ್ಲಿ ನೀಡಿರುವ ನೋಟಿಸು, ಸಂವಿಧಾನದ ಅಡಿಯಲ್ಲಿ ಕೊಡಮಾಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಕಲಂ 91ರ ಪ್ರಕಾರ‌ ಯಾವ ದಾಖಲೆಗಳನ್ನು ನೀವು ನನ್ನಿಂದ ಬಯಸಿದ್ದೀರಿ ಎನ್ನುದನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು ಹಾಗೂ ಆ ದಾಖಲೆ ತನಿಖೆಗೆ ಎಷ್ಟು ಸಹಕಾರಿಯಾಗುತ್ತದೆ ಮತ್ತು ಆ ದಾಖಲೆಗಳು ನೀವು‌ ನೋಟಿಸ್ ನೀಡುವ ವ್ಯಕ್ತಿಯ ಸುಪರ್ದಿಯಲ್ಲಿವೆಯಾ ಎಂದು ನೀವು‌ ನಂಬಬಹುದಾದ ಕಾರಣಗಳಿರಬೇಕು. ಆದರೆ, ಅವು ಯಾವವೂ ಇಲ್ಲಿ ಕಂಡುಬರುತ್ತಿಲ್ಲ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು‌ ನೀಡಿರುವ ನೋಟಿಸ್ ಅಸ್ಪಷ್ಟ ಹಾಗೂ ಆಧಾರರಹಿತವಾಗಿದೆ. ಜೊತೆಗೆ ಸಿಆರ್ ಪಿಸಿ ಕಲಂ‌ 91 ಪ್ರಕಾರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ.

ನೋಟಿಸು ನೀಡಿರುವುದನ್ನು ಗಮನಿಸಿದರೆ ನೀವು ನಿಮ್ಮ ರಾಜಕೀಯ ನಾಯಕರನ್ನು ಸಂತೃಪ್ತಿಪಡಿಸಲು ನೀಡಿರುವಂತೆ ಕಾಣುತ್ತದೆಯೇ ಹೊರತು ಯಾವುದೇ ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತ ತನಿಖೆ ಮಾಡಲು ನೀಡಿರುವಂತೆ ಕಂಡುಬರುತ್ತಿಲ್ಲ. ಜೊತೆಗೆ ನನ್ನ ರಾಜಕೀಯ‌ ಎದುರಾಳಿಯಾದ ನಿಮ್ಮ ರಾಜಕೀಯ ನಾಯಕರ ಮೆಚ್ಚಿಸಲು ನೀಡಿರುವಂತೆ ಕಂಡುಬರುತ್ತಿದೆ. ನಿಮ್ಮ ಈ‌ ಪ್ರಯತ್ನ ಕಾನೂನುಬಾಹಿರ ಮಾತ್ರವಲ್ಲದೇ ನ್ಯಾಯನಿರ್ವಹಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದ್ದಾರೆ.

ಕಲಂ 160ರ ಪ್ರಕಾರ ಸಾಕ್ಷಿದಾರರಿಗೆ ತಮ್ಮ ಬಳಿ‌ ಇರುವ ದಾಖಲೆಗಳನ್ನು ಒದಗಿಸುವಂತೆ ಕೇಸಿನ ಸಂಪೂರ್ಣ ಮಾಹಿತಿ‌ ಇರುವವರಿಗೆ ಕರೆಯಬಹುದು. ಆದರೆ, ಈ ಕೇಸಿನಲ್ಲಿ ನಾನು ಸಾಕ್ಷಿದಾರ ಎಂದು ನೀವು ನಂಬಲು ಬಲವಾದ ಮಾಹಿತಿಗಳಿರಬೇಕು. ಆದರೆ, ಏಪ್ರಿಲ್ 23ರಂದು ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಹೇಳಿಕೆಗಳ ಅಧರಿಸಿ‌ ನೀವು ನನಗೆ ನೋಟಿಸು ನೀಡಿರುವುದಾಗಿ ಹೇಳಿದ್ದೀರಿ. ಆದರೆ‌, ನೀವು ಈಗ ಕೈಗೊಂಡಿರುವ ಹಗರಣದ ತ‌ನಿಖೆ ಸಾರ್ವಜನಿಕ ವಲಯಕ್ಕೆ ಹೊಸದಲ್ಲ.

ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಮಟ್ಟದ ಅವ್ಯವಹಾರ ನಡೆದಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಿಂದ ಸಮಗ್ರ ತನಿಖೆ‌ ನಡೆಸುವಂತೆ ಸಚಿವ ಪ್ರಭು ಚವ್ಹಾಣ್ ಫೆಬ್ರುವರಿ 3ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಜೊತೆಗೆ ಬಿಜೆಪಿಯ ಎಂಎಲ್ಸಿ‌ ಒಬ್ಬರು ಈ‌ ಹಗರಣದ ಕುರಿತು ತನಿಖೆ‌ ನಡೆಸುವಂತೆ ದಿನಾಂಕ ಮಾರ್ಚ್ 15ರಂದು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ‌ ಇಬ್ಬರು ಜವಾಬ್ದಾರಿ ಯುತ ಸದಸ್ಯರು. ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಪಿಎಸ್ ಐ ನೇಮಕಾತಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ತನಿಖೆ ಕೈಗೊಳ್ಳುವಂತೆ ಕೋರಿದ್ದರೂ ತನಿಖಾಧಿಕಾರಿಗಳು ಇವರುಗಳಿಗೆ ನೋಟಿಸ್ ನೀಡಿಲ್ಲ‌. ಇದು ನನಗೆ ಅಚ್ಚರಿ ತಂದಿದೆ ಎಂದಿದ್ದಾರೆ.

'ನೀವು ನೀಡಿರುವ ನೋಟಿಸ್ ದುರುದ್ದೇಶಪೂರಿತವಾಗಿರುವುದರ ಜೊತೆಗೆ ಉನ್ನತಮಟ್ಟದ ತನಿಖಾ ತಂಡ ಕಾನೂನಿನ‌ ಬಗ್ಗೆ ತಿಳಿವಳಿಕೆ ಕೊರತೆ ಹಾಗೂ ತೀಕ್ಷ್ಣತೆ ಕೊರತೆ ಎದುರಿಸುತ್ತಿದೆ ಎಂದು ತಿಳಿದುಬರುತ್ತದೆ. ಹಗರಣದ ಸಮಗ್ರ ತನಿಖೆ‌ ಮಾಡುವ ಬದಲು ನನಗೆ ನೋಟಿಸ್ ನೀಡುವ ಮೂಲಕ ಸಂವಿಧಾನಬದ್ದವಾಗಿ ನನಗೆ ನೀಡಿದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನದಂತೆ ತೋರುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಿಯಾಂಕ್ ಗೆ ಮತ್ತೊಂದು ನೋಟಿಸ್

ಪ್ರಿಯಾಂಕ್ ಖರ್ಗೆ ಅವರು ಮೊದಲ ನೋಟಿಸ್ ಗೆ ಉತ್ತರ ನೀಡಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ.

'ಕಲಬುರಗಿಗೆ ಬರಲು ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಮತ್ತೊಂದು ನೋಟಿಸ್ ನೀಡಿದ್ದಾಗಿ ನನ್ನ ಸಿಬ್ಬಂದಿ ತಿಳಿಸಿದರು' ಎಂದು ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT