ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011ರಿಂದಲೇ ಅಕ್ರಮ: ಕೋಟಿ, ಕೋಟಿ ವ್ಯವಹಾರ?

ಪಿಎಸ್‌ಐ ನೇಮಕಾತಿ ಪರೀಕ್ಷೆ: ಹಣ, ವಸೂಲಿ ಇದ್ದವರಿಗೆ ಹುದ್ದೆ l ಮತ್ತಷ್ಟು ಪೊಲೀಸರು, ರಾಜಕಾರಣಿಗಳ ಬಂಧನ ಸಾಧ್ಯತೆ
Last Updated 12 ಮೇ 2022, 20:53 IST
ಅಕ್ಷರ ಗಾತ್ರ

ಬೆಂಗಳೂರು: ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮಾತ್ರವಲ್ಲದೇ ಪೊಲೀಸ್ ಇಲಾಖೆಯ ಬಹುತೇಕ ನೇಮಕಾತಿಗಳಲ್ಲಿ 2011ರಿಂದಲೇ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಮತ್ತಷ್ಟು ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಬಂಧನವಾಗುವ ಸಾಧ್ಯತೆ ಇದೆ.

ಪಿಎಸ್ಐ ಅಕ್ರಮದ ಆಳವಾದ ತನಿಖೆ ಆರಂಭಿಸಿರುವ ಅಧಿಕಾರಿಗಳು, ಪ್ರಮುಖ ರೂವಾರಿ ಎನ್ನಲಾದ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಬಂಧಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಭ್ಯರ್ಥಿಗಳು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳನ್ನು ಈಗಾಗಲೇ ಸಿಐಡಿ ಬಂಧಿಸಿದ್ದು, ಬಹುತೇಕರು, ಶಾಂತಕುಮಾರ್ ಹೆಸರು, ಅವರಿಗೆ ಹಣ ತಲುಪಿಸಿದ್ದ ಬಗ್ಗೆ ಬಾಯ್ಬಿಟ್ಟಿದ್ದಾರೆ.

‘ಬಂಧಿತರ ಹೇಳಿಕೆ ಆಧರಿಸಿ ಶಾಂತಕುಮಾರ್ ಅವರಿಗೆ ನೋಟಿಸ್‌ ನೀಡಲಾಗಿತ್ತು. ಅಕ್ರಮದಲ್ಲಿ ಶಾಂತಕುಮಾರ್ ಪಾತ್ರ ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದಂತೆ, ಬಂಧಿಸಲಾಯಿತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಕರ್ತವ್ಯದಲ್ಲಿದ್ದ ಶಾಂತಕುಮಾರ್, ನಿಯೋಜನೆ ಮೇರೆಗೆ 2011ರಿಂದ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನೇಮಕಾತಿ ಪ್ರಕ್ರಿಯೆಯ ಪೂರ್ಣ ಜವಾಬ್ದಾರಿ ಇತ್ತು’ ಎಂದೂ ಮೂಲಗಳು ತಿಳಿಸಿವೆ.

‘2011ರಿಂದ ಈವರೆಗೆ ಇಲಾಖೆಯ ಹಲವು ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಇವೆಲ್ಲದರ ಉಸ್ತುವಾರಿಯನ್ನು ಶಾಂತಕುಮಾರ್ ವಹಿಸಿಕೊಂಡಿದ್ದರು. ಪ್ರತಿ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಮಾಹಿತಿ ಇದ್ದು, ಕೋಟಿ ಕೋಟಿ ವ್ಯವಹಾರ ನಡೆದಿರುವ ಸಂಶಯವೂ ಇದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಹಣ, ವಸೂಲಿ ಇದ್ದವರಿಗೆ ಹುದ್ದೆ: ‘ನೇಮಕಾತಿ ವಿಭಾಗದ ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆಯಲ್ಲಿ ಒಡನಾಟವಿಟ್ಟುಕೊಂಡಿದ್ದ ಮಧ್ಯವರ್ತಿಗಳು, ಹಣ ಹಾಗೂ ವಸೂಲಿ ಇದ್ದವರಿಗೆ ಹುದ್ದೆ ನೀಡಿರುವ ಶಂಕೆ ದಟ್ಟವಾಗಿದೆ’ ಎಂದು ತಿಳಿಸಿವೆ.

‘2011ರಿಂದ ಹಲವು ಎಡಿಜಿಪಿಗಳು, ನೇಮಕಾತಿ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದರು. ಎಲ್ಲರನ್ನೂ ವಿಚಾರಣೆ ನಡೆಸಲು ಸದ್ಯದಲ್ಲೇ ತೀರ್ಮಾನಿಸಲಾಗುವುದು’ ಎಂದೂ ಮೂಲಗಳು ಹೇಳಿವೆ.

ಎಡಿಜಿಪಿ ವಿಚಾರಣೆ?:ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅವರ ಅಧೀನದಲ್ಲಿ ಶಾಂತಕುಮಾರ್ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅಮ್ರಿತ್ ಪೌಲ್‌ ಅವರನ್ನೂ ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

‘ಕಾನ್‌ಸ್ಟೆಬಲ್‌ನಿಂದ ಡಿವೈಎಸ್ಪಿ ಹುದ್ದೆಗೇರಿದ್ದ’

‘1996 ರಲ್ಲಿ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಕಾನ್‌ಸ್ಟೆಬಲ್ ಆಗಿ ಶಾಂತಕುಮಾರ್ ವೃತ್ತಿ ಆರಂಭಿಸಿದ್ದರು. ನಂತರ, ಸೇವಾನಿರತ ಕೋಟಾದಡಿ 2006ರಲ್ಲಿ ಆರ್‌ಎಸ್‌ಐ ಆಗಿ ಆಯ್ಕೆ ಆಗಿದ್ದರು. ಕೆಲವೇ ವರ್ಷಗಳಲ್ಲಿ ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು, ನೇಮಕಾತಿ ವಿಭಾಗಕ್ಕೆ ನಿಯೋಜನೆಗೊಂಡಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನೇಮಕಾತಿ ವಿಭಾಗದಲ್ಲಿ ಇರುವಾಗಲೇ 2019ರಲ್ಲಿ ಅವರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ಸಿಕ್ಕಿತ್ತು. ಅದಾದ ನಂತರವೂ ಅವರು ನೇಮಕಾತಿ ವಿಭಾಗದಲ್ಲೇ ಮುಂದುವರಿದಿದ್ದರು’ ಎಂದೂ ತಿಳಿಸಿವೆ.

‘ಪೊಲೀಸ್‌ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ, ಶುಲ್ಕ ಭರಿಸುವ, ಒಎಂಆರ್‌ ಸ್ಕ್ಯಾನಿಂಗ್, ಅಂತಿಮ ಆಯ್ಕೆ ಪಟ್ಟಿ ಪ್ರಕಟ ಸೇರಿದಂತೆ ಎಲ್ಲ ತಾಂತ್ರಿಕ ಕೆಲಸಗಳ ಜವಾಬ್ದಾರಿ ಶಾಂತಕುಮಾರ್ ಮೇಲಿತ್ತು. ಹೀಗಾಗಿ, ಅವರು ಹೇಳಿದ್ದಂತೆ ವಿಭಾಗದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಳುತ್ತಿದ್ದರು’ ಎಂದೂ ಸಿಐಡಿ ಮೂಲಗಳು ಹೇಳಿವೆ.

ಅಭ್ಯರ್ಥಿ ಮತ್ತೆ ನಾಲ್ಕು ದಿನ ಸಿಐಡಿ ಕಸ್ಟಡಿಗೆ

ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಅಭ್ಯರ್ಥಿ ಜಿ.ಸಿ. ರಾಘವೇಂದ್ರ ಅವರನ್ನು ನಾಲ್ಕು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ.

ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು. ಇವರೊಂದಿಗೆ ಸೂರ್ಯನಾರಾಯಣ ಹಾಗೂ ಜಿ.ಆರ್. ಮನುಕುಮಾರ್ ಅವರನ್ನು ಬಿ.ಕೆ. ಶೇಖರ್‌ ನೇತೃತ್ವದ ಸಿಐಡಿ ತಂಡ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿತು. ಉಳಿದಿಬ್ಬರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT