ಶುಕ್ರವಾರ, ಮೇ 20, 2022
26 °C
ಕಡತ ಮಂಡಿಸುವಂತೆ ಸಿಎಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಕೆಪಿಎಸ್‌ಸಿ: 362 ಅಭ್ಯರ್ಥಿಗಳ ಪರ ಎಚ್‌ಡಿಡಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮೂಲಕ ನ್ಯಾಯ ಕೊಡಿಸಬೇಕೆಂದು ರಾಜ್ಯಸಭೆ ಜೆಡಿಎಸ್‌ ಸದಸ್ಯ ಎಚ್.ಡಿ ದೇವೇಗೌಡ ಅವರ ಪತ್ರ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿಗೆ (ಸಿಎಸ್‌) ಸೂಚಿಸಿದ್ದಾರೆ.

ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂಬ ಕಾರಣಕ್ಕೆ ಈ ಸಾಲಿನ ನೇಮಕಾತಿಯನ್ನು ರದ್ದುಗೊಳಿಸಿ 2018ರ ಮಾರ್ಚ್ 9ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಆ ಬಳಿಕ, ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

‘ಈ ಹಿಂದಿನ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರ ಹಾಗೂ ನ್ಯಾಯಾಲಯಕ್ಕೆ ನೀಡಿದ ತಪ್ಪು ಮಾಹಿತಿಯಿಂದಾಗಿ ಯಾವ ತಪ್ಪುಗಳನ್ನೂ ಮಾಡದ, ಆಯ್ಕೆಗೊಂಡ 362 ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ. ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಪ್ರಕರಣದಿಂದ ಅನೇಕ ಪ್ರತಿಭಾನ್ವಿತ ಅಭ್ಯರ್ಥಿಗಳ ಜೀವನ ಕತ್ತಲೆಯಲ್ಲಿದೆ. ಈ ಬಗ್ಗೆ, ನಮಗೆ ನ್ಯಾಯ ಒದಗಿಸಿಕೊಡುವಂತೆ ಕೋರಿ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿಗಳು ನನಗೆ ಮನವಿ ಸಲ್ಲಿಸಿದ್ದಾರೆ’ ಎಂದು ದೇವೇಗೌಡ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಈ ಹಿಂದಿನ ಸರ್ಕಾರದ ತಪ್ಪು ನಿರ್ಧಾರ ಮತ್ತು ನ್ಯಾಯಾಂಗ ನಿಂದನೆ ಆಗದಿರುವ ಬಗ್ಗೆ ಕಾರಣಗಳು ಮತ್ತು ಈಗಿನ ಸರ್ಕಾರ ತೀರ್ಮಾನ ತೆಗೆದುಕೊಳ್ಳಲು ಪೂರಕವಾದ ಅಂಶಗಳನ್ನು ಸಾಕಷ್ಟು ವಿಸ್ತಾರವಾಗಿ ನನಗೆ ವಿವರಿಸಿದ್ದಾರೆ. ಈ ಮನವಿಯನ್ನು ಪರಿಶೀಲಿಸಿ, ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅದೇ ಪತ್ರದ ಮೇಲೆ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಗೆ ಟಿಪ್ಪಣಿ ಬರೆದಿರುವ ಮುಖ್ಯಮಂತ್ರಿ, ಕಡತ ಮಂಡಿಸುವಂತೆ ಸೂಚಿಸಿದ್ದಾರೆ.

ಪ್ರಕರಣದ ಇತಿಹಾಸ ವಿವರಿಸಿ ದೇವೇಗೌಡರಿಗೆ ಪತ್ರ ಬರೆದಿದ್ದ ಈ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ‘ನಮ್ಮ ನೇಮಕಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದರು.

ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸಿರಿಗೆರೆಯ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸಿದ್ಧಗಂಗಾ ಶ್ರೀಗಳೂ ಈ ಹಿಂದೆ ಪತ್ರ ಬರೆದಿದ್ದರು.

ಸರ್ಕಾರ– ಡಿಪಿಎಆರ್‌ ವಿರುದ್ಧ ನಿಲುವು?

362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಪರ ರಾಜ್ಯ ಸರ್ಕಾರ ನಿಲುವು ಹೊಂದಿದ್ದರೂ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಅಭಿಪ್ರಾಯ ಇದಕ್ಕೆ ಪೂರಕವಾಗಿಲ್ಲ ಎಂದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಎಲ್ಲ ಕೋರ್ಟ್‌ಗಳು ಒಂದೇ ನಿಲುವು ತಾಳಿವೆ. ಹೀಗಿರುವಾಗ, ಸಂವಿಧಾನದ ಅನುಚ್ಚೇದ 323 (2)ರ ಪ್ರಕಾರ, ರಾಜ್ಯ ಸರ್ಕಾರ ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿದರೆ ಅಥವಾ ಹಿಂಪಡೆದರೆ ಆ ವಿಷಯವನ್ನು ಕೆಪಿಎಸ್‌ಸಿ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಬೇಕು. ಆ ವರದಿಯನ್ನು ವಿಧಾನ ಮಂಡಲದ ಎರಡೂ ಸದನಗಳಲ್ಲಿ ಮಂಡಿಸಬೇಕು. ಆದರೆ, 2011ನೇ ಸಾಲಿನ ವರದಿಯನ್ನು ಸದನದಲ್ಲಿ ಮಂಡಿಸುವ ವೇಳೆ ರೀತಿ–ರಿವಾಜು ಪಾಲನೆ ಆಗಿಲ್ಲ ಎಂಬ ಕಾರಣ ನೀಡಿ ಆಯ್ಕೆಯಾದವರಿಗೆ ಹುದ್ದೆ ನೀಡುವ ತೀರ್ಮಾನ ಕೈಗೊಂಡರೆ ‘ನ್ಯಾಯಾಂಗ ನಿಂದನೆ’ ಆಗಬಹುದೆಂಬ ಆತಂಕ ಡಿಪಿಎಆರ್‌ ಅಧಿಕಾರಿಗಳದ್ದಾಗಿದೆ.

ಸಿಐಡಿ ವರದಿಯಲ್ಲಿ ಏನಿದೆ?

* ನೇಮಕಾತಿ ಅಕ್ರಮದ ತನಿಖೆಯನ್ನು ರಾಜ್ಯ ಸರ್ಕಾರ 2013ರ ಜೂನ್‌ 6ರಂದು ಸಿಐಡಿಗೆ ವಹಿಸಿತ್ತು.

* 215 ಸಾಕ್ಷಿಗಳು, 700 ಮೊಬೈಲ್‌ಗಳು, 75 ಬ್ಯಾಂಕ್‌ ಶಾಖೆಗಳ ದಾಖಲೆಗಳು, ಕೆಪಿಎಸ್‌ಸಿಯಿಂದ 337 ಕಡತಗಳ ಜಪ್ತಿ, ಅಭ್ಯರ್ಥಿಗಳಿಂದ 160 ದೂರು ಸಲ್ಲಿಕೆ.

* ಇಡೀ ಮುಖ್ಯ ಪರೀಕ್ಷೆ ಮೌಲ್ಯಮಾಪನ ತ್ವರಿತಗತಿಯಲ್ಲಿ ನಡೆದಿರುವುದನ್ನು ಸಿಐಡಿ ಸಂಶಯಿಸಿತ್ತು.

* ಗ್ರಾಮೀಣಾಭಿವೃದ್ಧಿ ವಿಷಯದ ಪ್ರಾಧ್ಯಾಪಕರು ಲಭ್ಯವಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಕೋ–ಆಪರೇಟಿವ್‌ ವಿಷಯದ ಉತ್ತರ ಪತ್ರಿಕೆಗಳನ್ನು ಸಮಾಜ ಶಾಸ್ತ್ರದ ಮತ್ತು ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕರಿಂದ ಮೌಲ್ಯಮಾಪನ.

* ಕನ್ನಡ ಪ್ರಾಧ್ಯಾಪಕರಿಂದ ಆಂಗ್ಲ, ಆಂಗ್ಲ ವಿಷಯದ ಪ್ರಾಧ್ಯಾಪಕರಿಂದ ಕನ್ನಡ ಉತ್ತರ ಪತ್ರಿಕೆಗಳ ಮೌಲ್ಯಮಾಪನ.

* ಅಭ್ಯರ್ಥಿಗಳು, ಮೌಲ್ಯಮಾಪಕರು, ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರು, ಸಿಬ್ಬಂದಿ ಮಧ್ಯೆ ದೂರವಾಣಿ, ಎಸ್‌ಎಂಎಸ್‌ ಸಂವಾದ.

* ತರಾತುರಿಯಲ್ಲಿ ಅಂಕಗಳ ಮರು ಕೂಡಿಸುವ (ರಿ ಟೋಟಲಿಂಗ್) ಪ್ರಕ್ರಿಯೆ

* ಮುಖ್ಯ ಪರೀಕ್ಷೆಯ ಉತ್ತರಗಳನ್ನು ತಿದ್ದಿರುವುದು ಎಫ್‌ಎಸ್ಎಲ್‌ ವರದಿಯಲ್ಲಿ ಸಾಬೀತು

* ವಿಶ್ವವಿದ್ಯಾಲಯಗಳು ನೀಡಿದ್ದ ಪಟ್ಟಿಯಲ್ಲಿ ಇಲ್ಲದ ಪ್ರಾಧ್ಯಾಪಕರಿಂದ ಬಹುತೇಕ ವಿಷಯಗಳ ಉತ್ತರ ಪತ್ರಿಕೆಗಳ  ಮೌಲ್ಯಮಾಪನ

* ಕೆಪಿಎಸ್‌ಸಿ ಪಟ್ಟಿಯಲ್ಲಿ 13,663 ಉಪನ್ಯಾಸಕರಿದ್ದರೂ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು, ನಿವೃತ್ತ, ಪದವಿ ಕಾಲೇಜುಗಳ ಉಪನ್ಯಾಸಕರಿಂದ ಮೌಲ್ಯಮಾಪನ.

* ತಜ್ಞ ಮೌಲ್ಯಮಾಪಕರು ಮಾಡಿದ ಮೌಲ್ಯಮಾಪನಕ್ಕೂ ಸಿಐಡಿ ಮನವಿಯಂತೆ ವಿವಿಧ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಮತ್ತು ಕೆಪಿಎಸ್‌ಸಿ ಪಟ್ಟಿಯಲ್ಲಿದ್ದ ಉಪನ್ಯಾಸಕರು ಮಾಡಿದ ಮೌಲ್ಯಮಾಪನ ಅಂಕಗಳ ಮಧ್ಯೆ ಭಾರಿ ಅಂತರ (ಶೇ 225ರಷ್ಟು).

* ಹಣ ನೀಡಿದವರಿಗೆ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಹೆಚ್ಚು ಅಂಕ.

* ಸಿಸಿಟಿವಿ ಕ್ಯಾಮೆರಾದ ತುಣುಕು ನಾಶ. ನಿಜವಾದ ಡಿವಿಡಿಗಳನ್ನು ಬದಲಿಸಿ ನಕಲಿ ಡಿವಿಡಿಗಳ ಸೃಷ್ಟಿ.

ಅಂತಿಮ ಆಯ್ಕೆ ಪಟ್ಟಿ ಕಾನೂನುಬಾಹಿರ– ಹೈಕೋರ್ಟ್‌

362 ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು 2018ರ ಮಾರ್ಚ್‌ 9ರಂದು ರದ್ದುಪಡಿಸಿದ್ದ ಹೈಕೋರ್ಟ್‌, ‘ಕೆಪಿಎಸ್‌ಸಿ ಆಯ್ಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಸಿಐಡಿ ವರದಿಯಿಂದ ವೇದ್ಯವಾಗಿದೆ. ಹೀಗಾಗಿ, 2014ರ ಮಾರ್ಚ್‌ 21ರಂದು ಕೆಪಿಎಸ್‌ಸಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿ ಕಾನೂನು ಬಾಹಿರ’ ಎಂದು ಅಭಿಪ್ರಾಯಪಟ್ಟಿದೆ. ‘ಮರು ಎಣಿಕೆಯಲ್ಲಿ ಅಂಕಗಳನ್ನು ತಿದ್ದಿರುವುದು ಸ್ಪಷ್ಟವಾಗಿದೆ. ಸಂದರ್ಶನದಲ್ಲಿ ಕೆಪಿಎಸ್‌ಸಿ ಸದಸ್ಯರು ನಿರ್ದಿಷ್ಟ ಅಭ್ಯರ್ಥಿಗೆ ಒಂದೇ ರೀತಿಯಲ್ಲಿ ಅಂಕಗಳನ್ನು ನೀಡಿದ್ದಾರೆ. ಅಂದರೆ, 566 ಅಭ್ಯರ್ಥಿಗಳಿಗೆ ಎಲ್ಲ ಸದಸ್ಯರೂ ಒಂದೇ ತೆರನಾಗಿ ಅಂಕ ನೀಡಿದ್ದಾರೆ. ಇದರಿಂದ ಎಲ್ಲ ಸದಸ್ಯರೂ ಅಂಕಗಳನ್ನು ಏಕರೀತಿ ನೀಡುವುದಕ್ಕೆ ಪೂರ್ವ ನಿರ್ಧಾರ ಮಾಡಿದ್ದರು ಎಂಬುದು ತಿಳಿದುಬರುತ್ತದೆ. ಕೆಪಿಎಸ್‌ಸಿ ಅಧ್ಯಕ್ಷರಿಗೆ ಖಾಸಗಿ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ಪ್ರತಿ ದಿನ ಸಂದರ್ಶನ ನಡೆದ ನಂತರ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೋರಿದ ಸಾಧನೆಯ ಬಗ್ಗೆ ಚರ್ಚಿಸುತ್ತಿದ್ದರು ಎಂಬುದನ್ನು ಹೈಕೋರ್ಟ್‌ ತೀರ್ಪು ಉಲ್ಲೇಖಿಸಿದೆ.

ಆಯ್ಕೆ ಪ್ರಕ್ರಿಯೆ ರದ್ದು- ಸರ್ಕಾರದ ನಿರ್ಧಾರ ಸರಿ: ಸುಪ್ರೀಂ ಕೋರ್ಟ್‌

ಹೈಕೋರ್ಟ್‌ ತೀರ್ಪು ಪ್ರಶ್ನಿಸಿದ್ದ ಮೇಲ್ಮನವಿ ಪರಿಶೀಲಿಸಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಹೈಕೋರ್ಟ್‌ ನೀಡಿದ ಆದೇಶದಂತೆ ಅಕ್ರಮವಾಗಿ ನೇಮಕಾತಿ ಹೊಂದಿದ, ಅರ್ಹರಲ್ಲದ, ಪ್ರಾಮಾಣಿಕತೆ ಇಲ್ಲದ ವ್ಯಕ್ತಿಗಳಿಗೆ ಸರ್ಕಾರದಲ್ಲಿ ನೇಮಕಾತಿ ಕೊಡುವುದು ಕಾನೂನು ಪ್ರಕಾರ ಸಮ್ಮತವಲ್ಲ. ಸಂವಿಧಾನದ ಪ್ರಕಾರ ನ್ಯಾಯಸಮ್ಮತ ಆಯ್ಕೆಯೇ ಮಾನದಂಡ ಆಗಬೇಕು’ ಎಂದಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದಾಕ್ಷಣ ನೇಮಕಾತಿ ನೀಡಿ ಎಂದು ಕೇಳುವ ಹಕ್ಕು ಇಲ್ಲ. ಆದ್ದರಿಂದ, ನೇಮಕಾತಿ ಆದೇಶ ನೀಡಿ ಎಂದು ಕೆಎಟಿ ನೀಡಿದ ಆದೇಶ ದೋಷಪೂರಿತವಾಗಿದೆ ಹಾಗೂ ಸರ್ಕಾರದ ನಿಲುವಿಗೆ ವಿರುದ್ದವಾಗಿದೆ. ಹೈಕೋರ್ಟ್‌ ಬಹಳಷ್ಟು ದಾಖಲೆಗಳನ್ನು ಪರಿಶೀಲಿಸಿದೆ. ಅಭ್ಯರ್ಥಿಗಳ ಹಾಗೂ ಸಂದರ್ಶಕರ ದೂರವಾಣಿ ಕರೆಗಳನ್ನು ಕಲೆ ಹಾಕಿದೆ. ಕೆಪಿಎಸ್‌ಸಿ ಡಿಜಿಟಲ್ ವಿಡಿಯೊ ದಾಖಲೆಗಳನ್ನು ಬದಲಾಯಿಸಿರುವುದು ಸಾಕ್ಷಿ ನಾಶಪಡಿಸುವುದಕ್ಕಾಗಿಯೇ ಎಂದು ಆದೇಶಿಸಿರುವುದು ಸರಿಯಾಗಿದೆ. ಅಲ್ಲದೇ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ದೋಷವಿದ್ದಾಗ ಕೆಲವರು ಒಳ್ಳೆಯವರು, ಕೆಲವರು ಕೆಟ್ಟವರು ಎಂದು ವಿಂಗಡಿಸಲು ಸಾಧ್ಯವಾಗದು. ಆದ್ದರಿಂದ, ಈ ಪ್ರಕರಣದಲ್ಲಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಯೋಗ್ಯವಾಗಿದೆ. ಇದರಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು