ಶುಕ್ರವಾರ, ಸೆಪ್ಟೆಂಬರ್ 25, 2020
26 °C

ರಾಜ್ಯದ ಹಲವೆಡೆ ಮುಂದುವರಿದ ಮಳೆ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರಿ ಮಳೆಯಿಂದಾಗಿ ಶಿವಮೊಗ್ಗದ ಸೋಮಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಬಿದ್ದಿರುವುದು.

ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲವೆಡೆ ಗುರುವಾರ ಆಶ್ಲೇಷ ಮಳೆ ಅಬ್ಬರ ಮುಂದುವರಿದಿದೆ. ಕೆಲ ತಾಲ್ಲೂಕುಗಳಲ್ಲಿ ಬುಧವಾರ ರಾತ್ರಿ ಇಡೀ ಮಳೆಯಾಗಿದೆ. ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಸಾಗರ ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಕೆಲವಡೆ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ತುಂಗಾ, ಭದ್ರಾ, ಶರಾವತಿ, ಕುಮದ್ವತಿ, ವರದಾ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿ 12 ಗೇಟ್‍ಗಳ ಮೂಲಕ 65 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಮಂಟಪ ಸಂಪೂರ್ಣ ಮುಳುಗಿದೆ. ಸಾಗರ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ, ಕೋಣಂದೂರು, ಸೊರಬದಲ್ಲಿ ಜೋರು ಮಳೆಯಾಗಿದೆ. 

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಬುಧವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿದ್ದು, ಗುರುವಾರವೂ ಬಿಟ್ಟಿರಲಿಲ್ಲ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ದಾವಣಗೆರೆ, ಹರಿಹರ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ತುಂಗಭದ್ರಾ ನದಿ ಪ್ರವಾಹದಿಂದ ಹರಿಹರ ತಾಲ್ಲೂಕಿನ ಸಾರಥಿ-ಚಿಕ್ಕಬಿದರೆ ಗ್ರಾಮದ ಸಂಪರ್ಕ ರಸ್ತೆ ಮುಳುಗಡೆಯಾಗಿದೆ.

ಕೆಳದಿ ಮ್ಯೂಸಿಯಂನಲ್ಲಿ ಶಾರ್ಟ್‌ ಸರ್ಕೀಟ್: ಸಾಗರ ತಾಲ್ಲೂಕಿನ ಕೆಳದಿಯ ಇತಿಹಾಸ ಪ್ರಸಿದ್ಧವಾದ ಮ್ಯೂಸಿಯಂಗೆ ಬುಧವಾರ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿದೆ. ಮ್ಯೂಸಿಯಂನ ಹಿಂಭಾಗದ ಕಟ್ಟಡ ಮಳೆಯಿಂದ ಸೋರುತ್ತಿದ್ದು, ನೀರು ಮೀಟರ್ ಬೋರ್ಡ್ ಮೇಲೆ ಹರಿದಿದ್ದರಿಂದ ಶಾರ್ಟ್ ಸರ್ಕೀಟ್‌ ಸಂಭವಿಸಿದೆ. ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದ್ದ ಕ್ಯೂರೇಟರ್ ಮತ್ತು ಸಿಬ್ಬಂದಿ ಗಾಬರಿಯಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ.

ಕೊಚ್ಚಿ ಹೋದ ಬಾಲಕಿ

ಕಲಘಟಗಿ (ಧಾರವಾಡ): ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೇರಿಯ ನೆಲಮಟ್ಟದ ಸೇತುವೆ ಮೇಲೆ ತಾಯಿಯೊಂದಿಗೆ ಗುರುವಾರ ಮಧ್ಯಾಹ್ನ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ (8) ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.

ಹಿರೇಕೆರಿಗೆ ಬೆಡ್ತಿ ಹಳ್ಳದ ನೀರು ಬರುವುದರಿಂದ ಸೇತುವೆ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಸೂಕ್ತವಾದ ಸೇತುವೆ ಇಲ್ಲದ ಕಾರಣ ಹೆಚ್ಚಿನ ನೀರು ರಸ್ತೆಯ ಮೇಲೆ ಹರಿಯುತ್ತದೆ. ಘಟನಾ ಸ್ಥಳಕ್ಕೆ ಸಿಪಿಐ ವಿಜಯ ಬಿರಾದಾರ ಹಾಗೂ ರಕ್ಷಣಾ ತಂಡ ಬಂದಿದ್ದು, ಬಾಲಕಿಗಾಗಿ ತೀವ್ರ ಹುಡುಕಾಟ ನಡೆಯಿತು. ಸಂಜೆಯ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಕೊಡಗು: ಸಚಿವ ಸೋಮಣ್ಣ ಮೊಕ್ಕಾಂ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಗುರುವಾರ ಸಂಜೆ ಕುಶಾಲನಗರಕ್ಕೆ ಆಗಮಿಸಿದ ಅವರು, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹಾಗೂ ಶಾಸಕ ಎಂ.‍ಪಿ.ಅಪ್ಪಚ್ಚು ರಂಜನ್‌ ಅವರಿಂದ ಮಾಹಿತಿ ಪಡೆದರು. ಶುಕ್ರವಾರ ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು