ಮಳೆ–ಪ್ರವಾಹ| ನದಿ ತೀರ ಪ್ರದೇಶದ ಜನತೆಗೆ ಆತಂಕ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ, ಗದಗ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಶನಿವಾರ ಬಿಡುವು ನೀಡಿದೆ. ಆದರೆ, ನದಿಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದು ಮತ್ತು ಜಲಾಶಯಗಳಿಂದ ಹೊರಹರಿವಿನ ಪ್ರಮಾಣ ಏರಿಕೆಯಾಗಿರುವ ಪರಿಣಾಮ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಜಾಸ್ತಿಯಾಗುತ್ತಿದೆ.
ಚಿಕ್ಕೋಡಿಯ ರಾಮನಗರ ಬಳಿ ಹಳ್ಳದಲ್ಲಿ ಶುಕ್ರವಾರ ಕೊಚ್ಚಿ ಹೋಗಿದ್ದ ಬಾಲಕಿ ಕಿರಣ ಶಾನೂರ (12) ಶವ ಹಾಗೂ ಧಾರವಾಡ ತಾಲ್ಲೂಕಿನ ಬೇಲೂರು ಗ್ರಾಮದ ಹಳ್ಳದಲ್ಲಿ ತೇಲಿ ಹೋಗಿದ್ದ ಕೋಟೂರು ಗ್ರಾಮದ ಇಮಾಮ್ ಭಾಷಾ ಖುರೇಶಿ (45) ಮೃತ ದೇಹ ಶನಿವಾರ ಪತ್ತೆಯಾಗಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2,24,435 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 51,920 ಕ್ಯುಸೆಕ್ ಸೇರಿ 2,72,295 ಕ್ಯುಸೆಕ್ ನೀರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ದೂಧ್‌ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಯಿಂದ ಬಾಧಿತರಾದವರನ್ನು ಸ್ಥಳಾಂತರಿಸಲಾಯಿತು. ವೇದಗಂಗಾ ಉಕ್ಕಿ ಹರಿಯುತ್ತಿದ್ದು, ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ ಸ್ಥಿತಿಯಲ್ಲೇ ಇದೆ. ಸಂಚಾರ ಬಂದ್ ಮಾಡಲಾಗಿದೆ. ಈ ಹೆದ್ದಾರಿಯಲ್ಲಿ ಸಂಕೇಶ್ವರ ಬಳಿ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿರುವ ಕಾಗಲ್ ಸಮೀಪವೂ ನೀರು ಸಂಗ್ರಹವಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳದ ಕಮತೆ ತೋಟದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ನೀರು ಬಂದು ಸಿಲುಕಿದ್ದ ಸಾಜನೆ ಕುಟುಂಬದ ನಾಲ್ವರನ್ನು ಎನ್‌ಡಿಆರ್‌ಎಫ್ ತಂಡ ಹಾಗೂ ಪೊಲೀಸರು ರಕ್ಷಿಸಿದರು. ಗೋಕಾಕ ತಾಲ್ಲೂಕು ಲೋಳಸೂರದಲ್ಲಿ ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು, ಪಾಶ್ಚಾಪುರದಲ್ಲಿ 18 ಮಂದಿ ಬಿಹಾರದ ಕೂಲಿ ಕಾರ್ಮಿಕರು, ಸಂಕೇಶ್ವರದಲ್ಲಿ 100 ಮತ್ತು ಖಾನಾಪುರದ ದುರ್ಗಾ ನಗರದಲ್ಲಿ 55 ಜನರನ್ನು ರಕ್ಷಿಸಲಾಗಿದೆ.
‘ಪುಣೆಯಿಂದ ಹುಬ್ಬಳ್ಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದ ಕುಟುಂಬದ ನಾಲ್ವರು ಯಮಗರ್ಣಿ ಬಳಿ ಸಿಲುಕಿದ್ದರು. ಅವರನ್ನು ಬೋಟ್‌ನಲ್ಲಿ ಕರೆ ತಂದು ಬಳಿಕ ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಕಳುಹಿಸಲಾಯಿತು. ಕೃಷ್ಣಾ ದಡದ ಯಡೂರದ ವೃದ್ಧರು ಮತ್ತು ರೋಗಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಬೆಳೆ ಹಾನಿ: ಗೋಕಾಕದಿಂದ ಜಲಪಾತದ ಕಡೆಗೆ ಸಂಪರ್ಕಿಸುವ ರಸ್ತೆ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಮುಳುಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ, 3ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಬೆಳೆ ಹಾನಿಯಾಗಿದೆ. 70 ರಸ್ತೆ, 36 ಸೇತುವೆಗಳು ಜಲಾವೃತಗೊಂಡಿವೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ತಗ್ಗಿದೆ. ಅಳ್ನಾವರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಕುಸಿದಿದೆ. ಮಲಪ್ರಭಾ ಜಲಾಶಯದಿಂದ ಹೊಳೆ–ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಲಕಮಾಪುರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಜನರನ್ನು ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮುತ್ತೂರು ಹಾಗೂ ಕಂಕಣವಾಡಿ ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿವೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಹಾಗೂ ಗದಗ ಜಿಲ್ಲೆ ಕೊಣ್ಣೂರ ನಡುವಿನ ಹಳೆಯ ಸೇತುವೆ ಮುಳುಗಿದೆ. ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನ 443 ಮನೆಗಳಿಗೆ ಭಾಗಶಃ ಮತ್ತು 34 ಸಂಪೂರ್ಣ ಹಾನಿಯಾಗಿದೆ.
ಕೃಷ್ಣಾ ಪ್ರವಾಹ ಏರಿಕೆ: ನಡುಗಡ್ಡೆ ಸಂಪರ್ಕ ಕಡಿತ
ಯಾದಗಿರಿ/ರಾಯಚೂರು: ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಶನಿವಾರ ಕೃಷ್ಣಾ ನದಿಗೆ 3.44 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ)–ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದೆ.
ಶಹಾಪುರ– ದೇವದುರ್ಗ ಸಂಪರ್ಕ ಕಡಿತವಾಗಿದ್ದು, ವಾಹನ ಸವಾರರು ತಿಂಥಣಿ ಮಾರ್ಗವಾಗಿ 46 ಕಿ.ಮೀ. ಸುತ್ತುವರೆದು ತೆರಳಬೇಕಿದೆ.
ಕೊಡೇಕಲ್ ಸಮೀಪದ ಛಾಯಾ ಭಗವತಿ ದೇವಸ್ಥಾನ ಜಲಾವೃತಗೊಂಡಿದೆ. ದೇವಿಯ ಮೂರ್ತಿಯನ್ನು ಮೆಟ್ಟಿಲ ಮೇಲೆ ಇಡಲಾಗಿದೆ. ಪ್ರವಾಹದ ನೀರು ಮತ್ತಷ್ಟು ಏರಿಕೆಯಾದಲ್ಲಿ ವಡಗೇರಾ ತಾಲ್ಲೂಕಿನ ಯಕ್ಷಂತಿ, ಟೊಣ್ಣುರು, ಗೌಡೂರು, ಮರಕಲ್, ಕೊಳ್ಳೂರು (ಎಂ) ಗ್ರಾಮಗಳು ಜಲಾವೃತವಾಗಲಿವೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಶನಿವಾರ ಸಂಪೂರ್ಣ ಮುಳುಗಡೆಯಾಗಿದೆ.
ರಾಯಚೂರು ತಾಲ್ಲೂಕಿನ ಕುರ್ವಕಲಾ, ಕುರ್ವಕುರ್ದಾ, ಅಗ್ರಹಾರ ನಡುಗಡ್ಡೆ ಗ್ರಾಮಗಳಿಗೆ ಮತ್ತು ಲಿಂಗಸುಗೂರು ತಾಲ್ಲೂಕಿನ
ತದವಗಡ್ಡಿ ನಡುಗಡ್ಡೆಗೆ ಸಂಪರ್ಕ ಕಡಿತಗೊಂಡಿದೆ. ತೆಪ್ಪಗಳಲ್ಲಿ ಜನ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
***
ಕೆಲವು ದಿನಗಳಿಂದ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳಗಾವಿ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆಗೆ ₹ 550 ಕೋಟಿ ಹಾನಿಯಾಗಿದೆ.
– ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.