ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ‘ಮತ್ತೊಮ್ಮೆ ಪ್ರವಾಹವೇ ಮುಕ್ತಿ ನೀಡಬಹುದು’

ಬೆಳ್ತಂಗಡಿ ತಾಲ್ಲೂಕು ಮಿತ್ತಬಾಗಿಲಿನಲ್ಲಿ ನೆಲೆ ಕಾಣದ ನೆರೆ ಪೀಡಿತರು
Last Updated 15 ಆಗಸ್ಟ್ 2020, 21:14 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಮನೆ ಬದಿಯ ಎಳುವೆರೆ ಹಳ್ಳ ನದಿಯಂತೆ ಉಕ್ಕಿ ಬಂದಾಗ ಅಪ್ಪ, ಅಮ್ಮ, ದನ–ಕರುಗಳನ್ನೆಲ್ಲ ಅಣ್ಣಂದಿರು ರಕ್ಷಿಸಿದ್ದರು. ಬಳಿಕ ದೇವಸ್ಥಾನ, ಪರಿಚಯಸ್ಥರ ಮನೆ, ಬಾಡಿಗೆ ಮನೆ... ಈಗ ಸಂಬಂಧಿಕರ ಮನೆಗೆ ತಲುಪಿದ್ದೇವೆ. ವರ್ಷ ಕಳೆದರೂ ನೆಲೆ ಇಲ್ಲ. ಮತ್ತೆ ಹಾನಿಗೀಡಾದ ಮನೆಯಲ್ಲೇ ನೆಲೆಸಲು ನಿರ್ಧರಿಸಿದ್ದೇವೆ. ಸರ್ಕಾರದ ಪರಿಹಾರದ ಬದಲು, ಪ್ರವಾಹವೇ ಮತ್ತೊಮ್ಮೆ ಬಂದು ಮುಕ್ತಿ ನೀಡಬಹುದು...’

2019ರ ಆಗಸ್ಟ್ 9ರಂದು ಸಂಭವಿಸಿದ ಭೂ ಕುಸಿತ ಹಾಗೂ ನೆರೆಗೆ ನೆಲೆ ಕಳೆದುಕೊಂಡ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲಿನ ಕಲ್ಲೊಳ್ಳೆಯ ಸತೀಶ ಅವರ ಅಳಲು ಇದು. ಅಂದು ಇದೇ ಊರಿನ ಸುತ್ತಮುತ್ತಲಿನ 263 ಮನೆಗಳು ಹಾನಿಗೀಡಾಗಿದ್ದರೆ, ಹೆಕ್ಟೇರ್‌
ಗಟ್ಟಲೆ ಅಡಿಕೆ, ತೆಂಗು, ಬಾಳೆ ತೋಟಗಳು, ಭತ್ತದ ಗದ್ದೆಗಳು ಹಾನಿಗೀಡಾಗಿದ್ದವು. ಸೇತುವೆಗಳು ಕೊಚ್ಚಿ ಹೋದರೆ, ಕಿಂಡಿ ಅಣೆಕಟ್ಟುಗಳು ಒಡೆದು ಹೋಗಿದ್ದವು.

ಈಗ ಕೆಲವು ಸೇತುವೆ ನಿರ್ಮಾಣಗೊಂಡಿವೆ. ಕಿಂಡಿ ಅಣೆಕಟ್ಟನ್ನು ನಿರ್ಮಿಸಬೇಕಾಗಿದೆ.

‘ಮೂರು ಎಕರೆ ತೋಟದಲ್ಲಿ ಹೂಳು ತುಂಬಿಕೊಂಡಿದೆ. ಅಲ್ಲಿ, ಕಲ್ಲು ಮತ್ತು ಮರಳು ಬಿಟ್ಟರೆ ಬೇರೇನೂ ಇಲ್ಲ. ಈ ತನಕ ನಯಾಪೈಸೆ ಪರಿಹಾರ ಸಿಕ್ಕಿಲ್ಲ’ ಎಂದು ದಿಡುಪೆ– ಮಲವಂತಿಗೆಯ ಪ್ರಶಾಂತ ಪರ್ಲ ಪರಿಸ್ಥಿತಿ ಬಿಚ್ಚಿಟ್ಟರು.

ಎಕರೆಗೆ ₹20 ಸಾವಿರದಿಂದ ₹40 ಸಾವಿರ ತನಕ ಪರಿಹಾರ ಬಂದಿದೆ. ಅದು ತೋಟಕ್ಕೆ ಬಿದ್ದ ಹೂಳು ತೆಗೆಯಲೂ ಸಾಲದು ಎನ್ನುವುದು ಸಂತ್ರಸ್ತರ ಅಳಲು.

ಪರಿಹಾರ ‘ಮರೀಚಿಕೆ’
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಲ್ಲಿ ಮನೆ, ಆಸ್ತಿಪಾಸ್ತಿ ಕಳೆದುಕೊಂಡ ಬಹಳಷ್ಟು ಮಂದಿಗೆ ಪೂರ್ಣವಾಗಿ ಪರಿಹಾರ ಸಿಕ್ಕಿಲ್ಲ. 457 ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಈವರೆಗೆ 258 ಮಂದಿಗೆ ಮನೆ ನಿರ್ಮಾಣಕ್ಕೆ ಒಂದು ಹಂತದಲ್ಲಿ ತಲಾ ₹ 1 ಲಕ್ಷದಂತೆ ಎರಡು–ಮೂರು ಹಂತಗಳಲ್ಲಿ ಅನುದಾನ ನೀಡಲಾಗಿದೆ. ಉಳಿದ 199 ಮನೆಗಳ ನಿರ್ಮಾಣಕ್ಕೆ ನಯಾಪೈಸೆಸಿಕ್ಕಿಲ್ಲ.

ಗುಡ್ಡ ಕುಸಿದು ತೋಟ, ಜಮೀನುಗಳೇ ಕೊಚ್ಚಿ ಹೋಗಿದ್ದವು. ತೋಟ, ಜಮೀನಿದ್ದ ಜಾಗ ಪಡೆದು ಪರ್ಯಾಯವಾಗಿ ಬೇರೆ ಕಡೆ ಜಾಗ ಒದಗಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಇದಕ್ಕೆ 54 ಸಂತ್ರಸ್ತರು ಒಪ್ಪಿಗೆ ನೀಡಿ, ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಕಳಸ ಹೆಬ್ಬೊಳೆ, ಕೋಟೆಹೊಳೆ ಸೇತುವೆಗಳ ನಿರ್ಮಾಣ ಇನ್ನು ಪ್ರಸ್ತಾವ ಹಂತದಲ್ಲಿಯೇ ಉಳಿದಿವೆ.

ಪುನರ್‌ನಿರ್ಮಿಸಿದ್ದ ಮನೆಗಳಲ್ಲಿ ಕೆಲವು ಈ ವರ್ಷದ ಮಳೆಗೆ ಮತ್ತೆ ಹಾನಿಗೀಡಾಗಿವೆ. ಮೂಡಿಗೆರೆ ತಾಲ್ಲೂಕಿನ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಪತಿಕಟ್ಟೆಯ ಪದ್ಮಾವತಿ ಮತ್ತು ಕೆ.ಎನ್‌.ಶ್ರೀನಿವಾಸಯ್ಯ, ಬಿ.ಎಸ್‌.ಮನೋಹರ್‌ ಮತ್ತು ಭವಾನಿ ಅವರ ನಿರ್ಮಾಣ ಹಂತದಲ್ಲಿದ್ದ ಮನೆಗಳ ಮೇಲೆ ರ, ಗುಡ್ಡದ ಮಣ್ಣು ಬಿದ್ದು ಹಾನಿಯಾಗಿದೆ.

ಅತಿವೃಷ್ಟಿ ಹಾನಿ ನಿಟ್ಟಿನಲ್ಲಿ ₹ 267 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎನ್ನುವುದು ಜಿಲ್ಲಾಡಳಿತದ ಮಾಹಿತಿ.

ಪರಿಹಾರ ಪ್ರಗತಿಯಲ್ಲಿದೆ...
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗಿದೆ. ಆದರೆ, ಮೊತ್ತ ತೀರಾ ಕಡಿಮೆ ಇದೆ ಎಂಬುದು ಸಂತ್ರಸ್ತರ ದೂರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಒಟ್ಟು 263 ಮನೆಗಳು ಹಾನಿಗೀಡಾಗಿದ್ದು, ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಕೋವಿಡ್–19ನಿಂದಾಗಿ ಸ್ವಲ್ಪ ಹಿನ್ನಡೆಯಾಗಿದೆ’ ಎಂದು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT