ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ತಗ್ಗದ ಮಳೆ ಅಬ್ಬರ: ಅಪಾರ ಆಸ್ತಿ, ಬೆಳೆ ಹಾನಿ

Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಸೇರಿ ದಕ್ಷಿಣ ಕರ್ನಾಟಕದ ಹಲವೆಡೆ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೋಮವಾರ ತಡರಾತ್ರಿಯಿಂದಿಡಿದು ಮಂಗಳವಾರ ಕೂಡ ಧಾರಾಕಾರ ಮಳೆಯಾಗಿದೆ. ಇಬ್ಬರು ಯುವಕರು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ, ಬೆಳೆ ಹಾನಿಯಾಗಿದೆ.

ಮೂರು ದಶಕಗಳಲ್ಲೇ ಅತ್ಯಧಿಕ ಮಳೆಗೆ ಸಾಕ್ಷಿಯಾದ ರಾಮನಗರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೂಡ ಭಾರಿ ಮಳೆಯಾಗಿದೆ.ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, ಹಾರೋಹಳ್ಳಿ ಕೆರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದೆ. ಕಾರ್ಖಾನೆ, ಸಮುದಾಯ ಆರೋಗ್ಯ ಕೇಂದ್ರ ಜಲಾವೃತಗೊಂಡಿವೆ.ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯ ಬಿಸಿಲೇಶ್ವರ ದೇವಾಲಯವೂ ಜಲಾವೃತಗೊಂಡಿದೆ.

ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲೂ ಮಳೆ ಅಬ್ಬರ ಮುಂದುವರಿದಿದ್ದು ನೂರಾರು ಮನೆಗಳಿಗೆ ಹಾನಿಯಾಗಿದೆ. ಅಪಾರ ಬೆಳೆ ನಷ್ಟವಾಗಿದೆ. ಮೈಸೂರು ತಾಲ್ಲೂಕಿನ ಜಯ‍ಪುರ ಹೋಬಳಿಯಲ್ಲಿ ಕೆರೆಗಳು ತುಂಬಿ ಹರಿದು, ಹಲವು ಗ್ರಾಮಗಳು ಜಲದಿಗ್ಬಂಧನದಲ್ಲಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸತತ ಮಳೆಯಿಂದ 3 ಶತಮಾನಗಳ ಹಿಂದಿನ ಐತಿಹಾಸಿಕ ಆನೆಕೋಟೆ ದ್ವಾರ ಸಮೀಪದ ಒಂದು ಭಾಗ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಜಿಲ್ಲಾಡಳಿತ ನಡೆಸುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಪ್ರದೇಶದಲ್ಲೇ ಸುಮಾರು 25 ಅಡಿ ಉದ್ದ ಕೋಟೆ ಕುಸಿದಿದ್ದು, ಕಲ್ಲು ಮತ್ತು ಇಟ್ಟಿಗೆಗಳು ಕಂದಕಕ್ಕೆ ಬಿದ್ದಿವೆ.

ಚಾಮರಾಜನಗರ ಜಿಲ್ಲೆಯ ಯಳಂದೂರಿನ ಅರಣ್ಯ ಇಲಾಖೆ ಕಚೇರಿ, ಅಗರ ಮಾಂಬಳ್ಳಿ ಪೊಲೀಸ್‌ ಠಾಣೆ ಸೇರಿ ಹಲವು ಸರ್ಕಾರಿ ಕಚೇರಿಗಳೂ ಜಲಾವೃತವಾಗಿದ್ದು, ಕೆಲಸಕ್ಕೆ ಅಡ್ಡಿಯಾಯಿತು. ಅಗರ ಮಾಂಬಳ್ಳಿಯಲ್ಲಿ ಪೊಲೀಸ್‌ ಸಿಬ್ಬಂದಿ ಸೇರಿ ನಾಗರಿಕರನ್ನು ಅಗ್ನಿಶಾಮಕ ಸಿಬ್ಬಂದಿ ಬೋಟ್‌ ಮೂಲಕ ರಕ್ಷಿಸಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಜಲಾವೃತವಾಗಿದ್ದು, 40ಕ್ಕೂ ಹೆಚ್ಚು ಬಸ್‌ಗಳು ನೀರಿನಲ್ಲಿ ಸಿಲುಕಿದ್ದವು.

ಚಾಮರಾಜನಗರ ಜಿಲ್ಲೆಯ ಹಲವು ಕಡೆ ಸುವರ್ಣಾವತಿ ನದಿ, ಕಬಿನಿ ಕಾಲುವೆ ಉಕ್ಕಿ ಯಳಂದೂರು ಹಾಗೂ ಕೊಳ್ಳೇಗಾಲ ನಡುವಿನ ಅಗರ ಮಾಂಬಳ್ಳಿ ಗ್ರಾಮಗಳಿಗೆ ನೀರು ನುಗ್ಗಿದೆ. 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಯಲಕರಾಳ್ಳಹಳ್ಳಿ ಬಳಿ ಕುಶಾವತಿ ನದಿಗೆ ನಿರ್ಮಿಸುತ್ತಿದ್ದ ಚೆಕ್‌ಡ್ಯಾಂ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ನದಿ ಪಾತ್ರದ ಜಮೀನುಗಳಲ್ಲಿ ಬೆಳೆ ನಾಶವಾಗಿವೆ.

ಮೂವರ ಸಾವು: ಚನ್ನಪಟ್ಟಣ ತಾಲ್ಲೂಕಿನ ಹರಿಸಂದ್ರ ಗ್ರಾಮದ ಕೆರೆ ಕೋಡಿ ತುಂಬಿ ಹರಿಯುತ್ತಿದ್ದ ನೀರು ನೋಡಲು ಹೋಗಿದ್ದ ತಿಮ್ಮಸಂದ್ರ ಗ್ರಾಮದ ಸುಜೇಂದ್ರ (21), ಹಾವೇರಿಯಲ್ಲಿ ಮೈದುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ಇಳಿದಿದ್ದ ಸುನೀಲ ಪರಮೇಶಪ್ಪ ನೆಗಳೂರು (21) ನೀರು ಪಾಲಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ತುಮರಿಕೊಪ್ಪದಲ್ಲಿ ಮನೆ ಕುಸಿದು ನಿಂಬವ್ವ ಮೈಲಾರೆಪ್ಪ ನೆಗಳೂರ (51) ಎಂಬುವವರು ಸಾವಿಗೀಡಾಗಿದ್ದಾರೆ. ನೆಗಳೂರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆಯೂ ಕೊಚ್ಚಿಹೋಗಿದೆ.

ವಿಜಯನಗರ–ಬಳ್ಳಾರಿಯ ಹೆಚ್ಚಿನಭಾಗಗಳಲ್ಲಿ ಸತತ ನಾಲ್ಕನೇ ದಿನವೂ ಮಳೆಯ ಆರ್ಭಟ ಮುಂದುವರಿದಿದೆ. ವಿಶ್ವ ಪ್ರಸಿದ್ಧ ಹಂಪಿ ನೆಲಸ್ತರ ಶಿವ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರಸನ್ನ ದೇಗುಲದ ಮಂಟಪದ ಗೋಡೆ ಕುಸಿದು ಬಿದ್ದಿದೆ. ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಳೆಯಾಗಿದೆ. ಉದ್ಘಾಟನೆ ಮುನ್ನವೇ ದಶಪಥ ಹೆದ್ದಾರಿಗೆ ಹಾನಿ!: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಗೆ ಇನ್ನೂ ಕೇಂದ್ರ ತಂಡ ಸುರಕ್ಷತೆ ನಿರಾಕ್ಷೇಪಣಾ ಪತ್ರ ನೀಡಿಲ್ಲ. ಇದಕ್ಕೂ ಮೊದಲೇ ಹೆದ್ದಾರಿಯ ಬಿಡದಿ, ರಾಮನಗರ–ಚನ್ನಪಟ್ಟಣ ಬೈಪಾಸ್‌ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹೆದ್ದಾರಿ ಅಧಿಕೃತವಾಗಿ ಉದ್ಘಾಟನೆಯಾಗುವ ನ್ನವೇ ಭಾಗಶಃ ಹಾನಿಗೀಡಾಗಿದೆ.

ಉದ್ಘಾಟನೆ ಮುನ್ನವೇ ದಶಪಥ ಹೆದ್ದಾರಿಗೆ ಹಾನಿ!
ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಗೆ ಇನ್ನೂ ಕೇಂದ್ರ ತಂಡ ಸೇಫ್ಟಿ ಕ್ಲಿಯರೆನ್ಸ್‌ (ಸುರಕ್ಷತೆ ನಿರಾಕ್ಷೇಪಣಾ ಪತ್ರ) ನೀಡಿಲ್ಲ. ಇದಕ್ಕೂ ಮೊದಲೇ ಹೆದ್ದಾರಿಯ ಬಿಡದಿ, ರಾಮನಗರ–ಚನ್ನಪಟ್ಟಣ ಬೈಪಾಸ್‌ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹೆದ್ದಾರಿ ಅಧಿಕೃತವಾಗಿ ಉದ್ಘಾಟನೆಯಾಗುವ ಮುನ್ನವೇ ಭಾಗಶಃ ಹಾನಿಗೀಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT