ಮಂಗಳವಾರ, ಜೂನ್ 15, 2021
26 °C

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ; ವಿವಿಧೆಡೆ 'ಯೆಲ್ಲೊ ಅಲರ್ಟ್’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಬುಧವಾರ ಉತ್ತಮ ಮಳೆಯಾಗಿದೆ. ಆಗುಂಬೆಯಲ್ಲಿ 15 ಸೆಂ.ಮೀ ಹಾಗೂ ತೀರ್ಥಹಳ್ಳಿಯಲ್ಲಿ 7.48 ಸೆಂ.ಮೀ ಮಳೆಯಾಗಿದೆ.

ತೀರ್ಥಹಳ್ಳಿ, ಆಗುಂಬೆ, ಹೊಸನಗರದಲ್ಲಿ ಉತ್ತಮ ಮಳೆಯಾಗಿದ್ದು, ಶಿವಮೊಗ್ಗ ನಗರ, ಸೊರಬ, ಶಿಕಾರಿಪುರ, ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ. 

ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ನದಿಗಳ ನೀರಿನ ಮಟ್ಟ ಗಣನೀಯವಾಗಿ ಇಳಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. 

ತಗ್ಗಿದ ಕೃಷ್ಣಾ ಒಳಹರಿವು: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರ ಪರಿಣಾಮ‌ ಕೃಷ್ಣಾ ಒಳಹರಿವು ತಗ್ಗಿದೆ. ರಾಯಬಾಗ– ಕುಡಚಿ ಸೇತುವೆ ಮೇಲಿನ ನೀರು ಇಳಿದಿದ್ದು, ಸಂಚಾರಕ್ಕೆ ಮುಕ್ತವಾಗಿದೆ. 

ಕೆಆರ್‌ಎಸ್‌ ಭರ್ತಿಗೆ ಕ್ಷಣಗಣನೆ: ಕೆಆರ್‌ಎಸ್‌ ಒಳಹರಿವು ಹೆಚ್ಚಿದ್ದು, ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ಬುಧವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 123.05 ಅಡಿಗೆ ಏರಿಕೆಯಾಗಿದ್ದು ಗುರುವಾರ ಯಾವುದೇ ಕ್ಷಣದಲ್ಲಿ ಗರಿಷ್ಠ ಮಟ್ಟ (124.80) ತಲುಪುವ ಸಾಧ್ಯತೆ ಇದೆ.

‘ಕಳೆದ ವರ್ಷವೂ ಆಗಸ್ಟ್‌ನಲ್ಲಿ ಜಲಾಶಯ ಭರ್ತಿಯಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಹ್ವಾನಿಸಿ ಬಾಗಿನ ಅರ್ಪಿಸಲಾಗುವುದು. ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

10 ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'
ಬೆಂಗಳೂರು:
ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ಕಲಬುರ್ಗಿ, ಬೀದರ್, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ.13ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ 3.2 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳು ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ತಗ್ಗಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ಮಳೆ-ಎಲ್ಲಿ, ಎಷ್ಟು?: ಆಗುಂಬೆಯಲ್ಲಿ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೊಲ್ಲೂರು 11, ಧರ್ಮಸ್ಥಳ, ಕಾರ್ಕಳ 8, ಬೆಳ್ತಂಗಡಿ, ಭಾಗಮಂಡಲ, ತೀರ್ಥಹಳ್ಳಿ 7, ಹೊಸನಗರ, ಕೊಪ್ಪ 6, ಮೂಡುಬಿದರೆ, ಸಕಲೇಶಪುರ 5, ಉಡುಪಿ, ಭಟ್ಕಳ, ಸಾಗರ, ಮಡಿಕೇರಿ 4, ಸುಳ್ಯ, ಕುಂದಾಪುರ, 3, ಮಂಗಳೂರು, ಪುತ್ತೂರು, ಮೂಡಿಗೆರೆ, ಕೋಲಾರ, ಹೊಸಕೋಟೆ, ದೇವನಹಳ್ಳಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಬೆಟ್ಟ ಕುಸಿದ ಸ್ಥಳದಲ್ಲಿ ಮುಂದುವರಿದ ಶೋಧ
ಮಡಿಕೇರಿ:
ತಲಕಾವೇರಿಯಲ್ಲಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ಉಳಿದ ಮೂವರಿಗೆ ಬುಧವಾರವೂ ಶೋಧ ನಡೆಸಲಾಯಿತು.

ಅರ್ಚಕ ನಾರಾಯಣ ಆಚಾರ್‌ ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ರವಿ ಕಿರಣ್ ‌ಭಟ್‌, ಶ್ರೀನಿವಾಸ್‌ ಅವರಿಗಾಗಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ಪೊಲೀಸರು ಶೋಧ ನಡೆಸಿದರು. ಮಣ್ಣು ತೆರವು ಮಾಡಲು ಮೂರು ಹಿಟಾಚಿ ಯಂತ್ರ ಬಳಸಿಕೊಳ್ಳಲಾಯಿತು.  

ನಾರಾಯಣ ಆಚಾರ್‌ ಅವರ ಮೃತದೇಹ ಪತ್ತೆಯಾದ ಪ್ರಪಾತದಲ್ಲಿ ಶೋಧ ನಡೆಯಿತು. ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುವುದು ಅಪಾಯಕಾರಿ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು