ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಬಿರುಸಿನ ಮಳೆ: ಮುಳುಗಿದ ಸೇತುವೆ

ರಾಯಚೂರಿನ ಮಸ್ಕಿ, ಕಲಬುರಗಿಯ ಜೇವರ್ಗಿಯಲ್ಲಿ ಧಾರಾಕಾರ ಮಳೆ
Last Updated 6 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ವಿವಿಧೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಬಿರುಸಿನ ಮಳೆಯಾಗಿದ್ದು, ಕೆಲೆವೆಡೆ ಸೇತುವೆಗಳು ಮುಳುಗಿವೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿ, ಬಂಕನಕಟ್ಟೆ ಭಾಗದಲ್ಲಿ ತೋಟ, ಹೊಲಗಳಿಗೆ ನೀರು ನುಗ್ಗಿದೆ. ಅನುವನಹಳ್ಳಿ– ಬಂಕನಕಟ್ಟೆ ಮಾರ್ಗದ ಸೇತುವೆ, ಬುಕ್ಕಾಂಬುಧಿ– ಕಣಬಗಟ್ಟೆ ಮಾರ್ಗದ ಸೇತುವೆಗಳ ಮೇಲೆ ನೀರು ಹರಿದಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು.

ಬುಕ್ಕಾಂಬುಧಿ– 12.3, ಲಿಂಗದಹಳ್ಳಿ– 10, ಶಿವನಿ–9.3, ರಂಗೇನಹಳ್ಳಿ– 7.8, ಜೋಳದಾಳ್‌– 7 ಸೆಂ.ಮೀ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 8.3 ಸೆಂ.ಮೀ, ಬಬ್ಬೂರು8.5 ಸೆಂ.ಮೀ ಮಳೆಯಾಗಿದೆ.ವಾಣಿವಿಲಾಸ ಜಲಾಶಯದ ಒಳಹರಿವು ಸೋಮವಾರ ಬೆಳಿಗ್ಗೆ 5,300 ಕ್ಯುಸೆಕ್‌ ಇದ್ದು, ಅರ್ಧ ಅಡಿಯಷ್ಟು ನೀರು ಬಂದಿದೆ. ಕಾತ್ರಿಕೇನಹಳ್ಳಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಉಡುವಳ್ಳಿ, ಗಾಂಧಿನಗರ, ಜವನಗೊಂಡನಹಳ್ಳಿ, ಹೊಸದುರ್ಗದ ಚಿಕ್ಕೆರೆ, ಬಾಗೂರಿನ ದೊಡ್ಡಹಳ್ಳ, ಸೊಡರನಾಳ್‌ ಕೆರೆಗಳು ಕೋಡಿ ಬಿದ್ದಿವೆ. ಅತ್ತಿಮಗ್ಗೆಯ ಖಾನಿಹಳ್ಳದ ರಭಸಕ್ಕೆ ಅತ್ತಿಮಗ್ಗೆ–ಹೊಸದುರ್ಗ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಹೊಸದುರ್ಗದಲ್ಲಿ 8.26 ಸೆಂ.ಮೀ, ಮಾಡದಕೆರೆಯಲ್ಲಿ 9.2 ಸೆಂ.ಮೀ ಮಳೆ ಸುರಿದಿದೆ.

ಚಳ್ಳಕೆರೆಯ ಶಾಂತಿನಗರ, ರಹೀಮ್‌ ನಗರಕ್ಕೆ ನೀರು ನುಗ್ಗಿದೆ. ದುರ್ಗಾವರದಲ್ಲಿ ಮೊಬೈಲ್‌ ಟವರ್‌ ಉರುಳಿ ಬಿದ್ದಿದೆ. ಬುಡ್ನಹಟ್ಟಿ ಗ್ರಾಮದಲ್ಲಿ ಮನೆಯ ಹಳೆಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಒಂದು ಮೇಕೆ ಮರಿ ಮೃತಪಟ್ಟಿವೆ. ಹೊಳಲ್ಕೆರೆ ತಾಲ್ಲೂಕಿನ ಘಟ್ಟಿಹೊಸಹಳ್ಳಿಯಲ್ಲಿ ಒಂದು ತೆಂಗಿನ ಮರ ಹಾಗೂ 21 ಅಡಿಕೆ ಮರಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ.

ಧರೆಗುರುಳಿದ ಕಂಬ, ಮರ:ರಾಯಚೂರು ಜಿಲ್ಲೆಯ ಮಸ್ಕಿ ಮತ್ತುಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಎರಡೂ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ.

ಕೋಡಿ ಬಿದ್ದ ಕೆರೆ:ಮಂಡ್ಯದ ಕಲ್ಲಹಳ್ಳಿ ಕೆರೆ, ರಾಜಾ ಕಾಲುವೆ ಕೋಡಿ ಬಿದ್ದು ಕಿರುಗಾಲುವೆಯತ್ತ ನೀರು ಹರಿದು ಬಂದು ಬೆಳೆಗೆ ಹಾನಿಯಾಗಿರುವುದರಿಂದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಿಲ್ಲೆಯ ಕೆಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು ವಿದ್ಯುತ್‌ ಪೂರೈಕೆ ಇಲ್ಲದೆ ಜನ ಪರದಾಡಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಗೊರಹಳ್ಳಿಯ ನಾಗರಾಜು ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. ಮೈಸೂರು ನಗರ, ಬನ್ನೂರು ಹೋಬಳಿಯಲ್ಲೂ ಧಾರಾಕಾರ ಮಳೆಯಾಯಿತು. ಮಡಿಕೇರಿ ನಗರ ಮತ್ತು ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT