ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ | ಬಿಜೆಪಿಯ ‘ಬಿ ಟೀಂ’ ಯಾರೆಂಬುದು ಬಯಲಾಗಿದೆ: ಕುಮಾರಸ್ವಾಮಿ

Last Updated 10 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯ ಬಿ ಟೀಂ ಯಾರು ಎಂಬುದು ರಾಜ್ಯಸಭೆ ಚುನಾವಣೆ ಫಲಿತಾಂಶದಲ್ಲಿನ ಬಹಿರಂಗವಾಗಿದೆ. ಸಿದ್ದರಾಮಯ್ಯ ಬಿಜೆಪಿಯ ಬಾಲಂಗೋಚಿ ಎಂಬುದೂ ಬಯಲಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಫಲಿತಾಂಶದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡು ತಮ್ಮದೇ ಪಕ್ಷದ ಅಲ್ಪ ಸಂಖ್ಯಾತ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರನ್ನು ಸೋಲಿಸಿದ್ದಾರೆ. ಜೆಡಿಎಸ್‌ ಬಗ್ಗೆ ಮನಸ್ಸಿನಲ್ಲಿ ನಂಜು ತುಂಬಿಕೊಂಡು ನಮ್ಮ ಅಭ್ಯರ್ಥಿಯನ್ನೂ ಸೋಲಿಸಿದ್ದಾರೆ’ ಎಂದಿದ್ದಾರೆ.

‘ಸಿದ್ದರಾಮಯ್ಯ ಅವರ ಡೋಂಗಿ ಜಾತ್ಯತೀತ ಮುಖವಾಡ ಈಗ ಕಳಚಿಬಿದ್ದಿದೆ. ನಮ್ಮ ಪಕ್ಷದ ಶಾಸಕರನ್ನು ಹೈಜಾಕ್‌ ಮಾಡುವ ಅವರ ಪ್ರಯತ್ನ ವಿಫಲವಾಗಿದೆ. ಅಲ್ಪಸಂಖ್ಯಾತ ಅಭ್ಯರ್ಥಿಯ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ ಖೆಡ್ಡಾಕ್ಕೆ ಬಿದ್ದಿದ್ದಾರೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

**
ಪೇಚಿಗೆ ಸಿಲುಕಿದ ಎಚ್‌.ಡಿ. ರೇವಣ್ಣ
ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಅವರು ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಚಲಾಯಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮತಪತ್ರ ತೋರಿಸಿದ್ದು ರಾಜ್ಯಸಭೆ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.

ರೇವಣ್ಣ ಜೆಡಿಎಸ್‌ನ ಮತಗಟ್ಟೆ ಏಜೆಂಟರಾಗಿದ್ದರು. ಕಾಂಗ್ರೆಸ್‌ನಿಂದ ಶಿವಕುಮಾರ್‌ ಮತ್ತು ಬಿಜೆಪಿಯಿಂದ ಸಿ.ಟಿ. ರವಿ ಮತಗಟ್ಟೆ
ಏಜೆಂಟರು.

ರೇವಣ್ಣ ಅವರು ಅನ್ಯ ಪಕ್ಷದ ಶಿವಕುಮಾರ್‌ ಅವರಿಗೆ ಮತಪತ್ರ ತೋರಿಸಿರುವುದರಿಂದ ಅವರ ಮತವನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಶಾಸಕ ಎಂ. ಸತೀಶ್‌ ರೆಡ್ಡಿ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ದೂರು ಸಲ್ಲಿಸಿದರು.

ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್‌ ಕೂಡ ಮತ್ತೊಂದು ದೂರು ಸಲ್ಲಿಸಿದರು.

ದೂರು ಸ್ವೀಕರಿಸಿದ ಚುನಾವಣಾಧಿಕಾರಿ, ಕೇಂದ್ರ ಚುನಾವಣಾ ಆಯೋಗದ ಅಭಿಪ್ರಾಯ ಕೋರಿದರು. ಇದರಿಂದ ಪೇಚಿಗೆ ಸಿಲುಕಿದ ರೇವಣ್ಣ, ‘ನಮ್ಮ ಪಕ್ಷದಲ್ಲಿ ನಾನೇ ಮತಗಟ್ಟೆ ಏಜೆಂಟ್‌. ಹೀಗಾಗಿ ಶಿವಕುಮಾರ್‌ ಅವರಿಗೆ ಮತಪತ್ರ ತೋರಿಸಿದೆ. ಇದರಲ್ಲಿ ತಪ್ಪೇನೂ ಇಲ್ಲ’ ಎಂಬ ವಾದ ಮಂಡಿಸಿದರು.

ಕೇಂದ್ರ ಚುನಾವಣಾ ಆಯೋಗದ ಅಭಿಪ್ರಾಯ ಆಧರಿಸಿ ರೇವಣ್ಣ ಅವರ ಮತವನ್ನು ಸಿಂಧು ಎಂಬುದಾಗಿ ಘೋಷಿಸಲಾಯಿತು.

‘ಕೈ’ ಹಿಡಿದ ಶ್ರೀನಿವಾಸ ಗೌಡ
ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದರು. ಬಳಿಕ ಮಾಧ್ಯಮಗಳ ಎದುರು ಬಹಿರಂಗವಾಗಿಯೇ ಘೋಷಿಸಿದರು.

‘ನಾನು ಕಾಂಗ್ರೆಸ್‌ ಪಕ್ಷವನ್ನು ಪ್ರೀತಿಸುತ್ತೇನೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದೆ. ಮುಂದೆಯೂ ಕಾಂಗ್ರೆಸ್‌ ಸೇರುತ್ತೇನೆ’ ಎಂದರು. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ತಮಗೆ ಬೇಸರವಿದೆ. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್‌ನ ಯಾರೊಬ್ಬರೂ ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದರು.

ಶ್ರೀನಿವಾಸ ಗೌಡ ಅವರು ವಿಧಾನಸೌಧಕ್ಕೆ ಬಂದು, ಮತ ಚಲಾಯಿಸಿ, ವಾಪಸಾಗುವವರೆಗೂ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ನಜೀರ್‌ ಅಹಮ್ಮದ್‌ ಜತೆಗಿದ್ದರು.

ಶ್ರೀನಿವಾಸ ಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಚ್.ಡಿ. ಕುಮಾರಸ್ವಾಮಿ, ‘ನನ್ನ ಅನುಮಾನದಂತೆಯೇ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಹೋಗಿ ರಾಜಕಾರಣ ಮಾಡಲಿ’ ಎಂದರು.

ಬಿಜೆಪಿಗೆ ಎಸ್‌.ಆರ್‌. ಶ್ರೀನಿವಾಸ್‌ ಮತ?
ಜೆಡಿಎಸ್‌ನಿಂದ ದೂರ ಸರಿದಿರುವ ಆ ಪಕ್ಷದ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಬಿಜೆಪಿ ಅಭ್ಯರ್ಥಿ ಲಹರ್‌ ಸಿಂಗ್‌ ಸಿರೋಯ ಅವರಿಗೆ ಮತ ಚಲಾಯಿಸಿರುವ ಅನುಮಾನ ವ್ಯಕ್ತವಾಗಿದೆ.

ಮತ ಚಲಾಯಿಸುವಾಗ ಪಕ್ಷದ ಮತಗಟ್ಟೆ ಏಜೆಂಟ್‌ ಎಚ್‌.ಡಿ. ರೇವಣ್ಣ ಅವರಿಗೆ ಶ್ರೀನಿವಾಸ್‌ ಖಾಲಿ ಮತಪತ್ರ ತೋರಿಸಿದ್ದರು. ಹೀಗಾಗಿ ಅವರು ಯಾರಿಗೂ ಮತ ಚಲಾಯಿಸಿಲ್ಲ ಎಂದು ಪಕ್ಷದ ನಾಯಕರು ನಂಬಿದ್ದರು. ಜೆಡಿಎಸ್‌ ನಾಯಕೆ ಎಚ್‌.ಡಿ. ಕುಮಾರಸ್ವಾಮಿ ಕೂಡ ಹಾಗೆಯೇ ಹೇಳಿಕೆ ನೀಡಿದ್ದರು.

ಆದರೆ, ಬಿಜೆಪಿ ಅಭ್ಯರ್ಥಿಗಳಿಗೆ ಒಟ್ಟು 123 ಮತ ದೊರಕಿವೆ. ಬಿಜೆಪಿಯ 120, ಪಕ್ಷೇತರ ಶಾಸಕ ಎಚ್‌.ವಿ. ನಾಗೇಶ್‌ ಮತ್ತು ಬಿಎಸ್‌ಪಿ ಶಾಸಕ ಎನ್‌. ಮಹೇಶ್‌ ಸೇರಿ 122 ಮತಗಳು ಮಾತ್ರ ಆಡಳಿತ ಪಕ್ಷದ ಬಳಿ ಇದ್ದವು. ಈಗ ಒಂದು ಹೆಚ್ಚುವರಿ ಮತ ದೊರಕಿದೆ. ಅಲ್ಲದೇ ಖಾಲಿ ಮತಪತ್ರ ಎಣಿಕೆ ವೇಳೆ ಪತ್ತೆಯಾಗಿಲ್ಲ.

ಖಾಲಿ ಮತಪತ್ರ ಹಾಕಿದಂತೆ ಮತ ಚಲಾಯಿಸಿದ್ದ ಗುರುತಿಗೆ ಹೆಬ್ಬೆರಳು ಅಡ್ಡ ಹಿಡಿದು ರೇವಣ್ಣ ಅವರಿಗೆ ತೋರಿಸಿದ್ದ ಶ್ರೀನಿವಾಸ್‌, ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದರು ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT