ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ಇಂದು 4,234 ಪ್ರಕರಣ ಪತ್ತೆ, ಐದು ತಿಂಗಳ ಗರಿಷ್ಠ

10 ಲಕ್ಷ ದಾಟಿದ ಕೋವಿಡ್
Last Updated 1 ಏಪ್ರಿಲ್ 2021, 15:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸತತ ಎರಡನೇ ದಿನ ಕೂಡ ನಾಲ್ಕು ಸಾವಿರಕ್ಕೂ(4,234) ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಈವರೆಗೆ ಸೋಂಕಿತರಾದವರ ಸಂಖ್ಯೆ 10.01 ಲಕ್ಷಕ್ಕೆ ಮುಟ್ಟಿದೆ.

ರಾಜ್ಯದಲ್ಲಿ ಕಳೆದ ವರ್ಷ ಮಾ.8ರಂದು ಮೊದಲ ಪ್ರಕರಣ ವರದಿಯಾಗಿತ್ತು. ಮೊದಲ ಒಂದು ಲಕ್ಷ ಪ್ರಕರಣಗಳು 108 ದಿನಗಳಲ್ಲಿ ವರದಿಯಾದರೇ, ಕಡೆಯ ಒಂದು ಲಕ್ಷ ಪ್ರಕರಣಗಳು 110 ದಿನಗಳಲ್ಲಿ ವರದಿಯಾಗಿವೆ. ಈ ನಡುವೆ ಸೋಂಕಿತರ ಸಂಖ್ಯೆ ಏರಿಳಿತ ಕಂಡಿದೆ. ಈ ವರ್ಷದ ಮೊದಲ ತಿಂಗಳಲ್ಲಿ ಕೆಲ ದಿನಗಳು ಪ್ರಕರಣಗಳ ಸಂಖ್ಯೆ 500ರ ಗಡಿಯ ಆಸುಪಾಸಿಗೆ ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಮಾರ್ಚ್ ಒಂದೇ ತಿಂಗಳಲ್ಲಿ 45,753 ಮಂದಿ ಸೋಂಕಿತರಾಗಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿದ್ದು, 5 ಜಿಲ್ಲೆಗಳಲ್ಲಿ ಮೂರಂಕಿ ತಲುಪಿದೆ. ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, ಮತ್ತೆ 2,906 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. 48 ಗಂಟೆಗಳ ಅವಧಿಯಲ್ಲಿ 5,834 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ಸೋಂಕಿತರಾದವರ ಸಂಖ್ಯೆ 4.37 ಲಕ್ಷ ದಾಟಿದೆ. ಬೀದರ್ (218), ಕಲಬುರ್ಗಿ (144), ಮೈಸೂರು (109), ತುಮಕೂರು (102) ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ ಮತ್ತೆ 18 ಮಂದಿ ಸಾವಿಗೀಡಾಗಿರುವುದು ಖಚಿತಪಟ್ಟಿದೆ.

ಬೆಂಗಳೂರಿನಲ್ಲಿ 11 ಮಂದಿ, ಧಾರವಾಡದಲ್ಲಿ ಇಬ್ಬರು, ತುಮಕೂರು, ಮೈಸೂರು, ಮಂಡ್ಯ, ಕಲಬುರ್ಗಿ, ಹಾಗೂ ಬೀದರ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,585ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಸದ್ಯ 30,865 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 265 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಒಂದು ದಿನದ ಅವಧಿಯಲ್ಲಿ 1.15 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೊರೊನಾ ಸೋಂಕಿತರಲ್ಲಿ 1,599 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.57 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT