ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ ಆರು ಮಂದಿಗೆ ಓಮೈಕ್ರಾನ್‌

Last Updated 18 ಡಿಸೆಂಬರ್ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಮತ್ತೆ ಆರು ಜನರಲ್ಲಿ ಕೊರೊನಾ ರೂಪಾಂತರಿ ವೈರಾಣು ಓಮೈಕ್ರಾನ್‌ ಪತ್ತೆಯಾಗಿದೆ. ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ (ಜೀನೋಮ್‌ ಸೀಕ್ವೆನ್ಸಿಂಗ್‌) ಪರೀಕ್ಷಾ ವರದಿಯಿಂದ ಇದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.

ಬ್ರಿಟನ್‌ನಿಂದ ಕೋವಿಡ್ ಹೊಂದಿಲ್ಲ ಎಂಬ ವರದಿ ಪಡೆದು ಡಿ.10ರಂದು ಬೆಂಗಳೂರಿಗೆ ಬಂದಿದ್ದ 18 ವರ್ಷದ ಯುವತಿಯನ್ನು (ರೋಗಿ ಸಂಖ್ಯೆ–9) ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯುವತಿಗೆ ಮೂವರು ನೇರ ಸಂಪರ್ಕಿತರು ಹಾಗೂ 16 ಮಂದಿ ಪರೋಕ್ಷ ಸಂಪರ್ಕಿತರಿದ್ದು, ಅವರನ್ನೆಲ್ಲಾ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಸೋಂಕು ತಗುಲಿಲ್ಲ. ಯುವತಿಯು ಫೈಜರ್‌ ಲಸಿಕೆಯ ಎರಡು ಡೋಸ್‌ಗಳನ್ನೂ ಬ್ರಿಟನ್‌ನಲ್ಲಿ ಪಡೆದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಐವರಲ್ಲಿ ಓಮೈಕ್ರಾನ್‌ ದೃಢಪಟ್ಟಿದೆ. 19 ವರ್ಷದ ಯುವತಿಯನ್ನು (ರೋಗಿ ಸಂಖ್ಯೆ–10) ಡಿ.8ರಂದು ಮಂಗಳೂರಿನ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಉಳಿದ ನಾಲ್ವರು ವಿದ್ಯಾರ್ಥಿನಿಯರು 14 ವರ್ಷದೊಳಗಿನವರು. ಅವರನ್ನು ಬಂಟ್ವಾಳದ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿದ್ದು ಖಾತರಿ ಯಾಗಿತ್ತು.ಸೋಂಕಿತರು ಅಥವಾ ಅವರ ಪೋಷಕರು ಕೇರಳ ರಾಜ್ಯ ಅಥವಾ ಅಂತರರಾಷ್ಟ್ರೀಯ ಪ್ರಯಾಣ ಮಾಡಿರುವವರಲ್ಲ. 19 ವರ್ಷದ ಯುವತಿ ಲಸಿಕೆಯ ಎರಡೂ ಡೋಸ್‌ ಪಡೆದವರಾಗಿದ್ದಾರೆ. ಆಕೆಯಲ್ಲಿ ರೋಗ ಲಕ್ಷಣಗಳು ಇಲ್ಲ.

‘ನಗರದ ಹೊರವಲಯದ ವಸತಿ ಶಾಲೆ ಹಾಗೂ ನಗರದ ನರ್ಸಿಂಗ್ ಕಾಲೇಜ್‌ ಒಂದನ್ನು ಈಗಾಗಲೇ ಕೋವಿಡ್ ನಿಯಂತ್ರಿತ ವಲಯ (ಕ್ಲಸ್ಟರ್) ಗಳಾಗಿ ಘೋಷಿಸಲಾಗಿದೆ. ವಸತಿ ಶಾಲೆಯಲ್ಲಿ ಕೋವಿಡ್‌ ಪಾಸಿಟಿವ್ ಬಂದಿದ್ದ 16 ಮಂದಿಯ ಮಾದರಿಯನ್ನು ಡಿ.10ರಂದು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಅವರಲ್ಲಿ ನಾಲ್ವರಿಗೆ ಓಮೈಕ್ರಾನ್ ವೈರಾಣು ಇರುವುದು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

‘ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದ 19 ಮಂದಿಯ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಅವರಲ್ಲಿ ಒಬ್ಬರಲ್ಲಿ ಓಮೈಕ್ರಾನ್ ವೈರಾಣು ಪತ್ತೆಯಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಐವರು ವಿದ್ಯಾರ್ಥಿಗಳಲ್ಲಿ ಈಗಾಗಲೇ ನಾಲ್ವರ ಮರು ತಪಾಸಣಾ ವರದಿ ನೆಗೆಟಿವ್‌ ಬಂದಿದೆ. ಒಬ್ಬರಿಗೆ ಸೋಂಕು ತಗುಲಿ ಒಂಬತ್ತು ದಿನಗಳಾಗಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT