ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಇನ್ನು ಎಸ್‌ಸಿ ಶೇ 17, ಎಸ್‌ಟಿ ಶೇ 7 ಮೀಸಲಾತಿ ಹೆಚ್ಚಳ ಅನುಷ್ಠಾನದ ಕುತೂಹಲ
Last Updated 23 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಸುಗ್ರೀವಾಜ್ಞೆ– 2022’ಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಭಾನುವಾರ ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ರಾಜ್ಯಪತ್ರವನ್ನು ಹೊರಡಿಸಲಾಗಿದೆ.

ಕೇವಲ ಸರ್ಕಾರಿ ಆದೇಶದ ಮೂಲಕ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯದಲ್ಲಿ ಹಿನ್ನಡೆ
ಆಗಬಹುದು ಎಂಬ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಸರ್ಕಾರ ಅದನ್ನು ಜಾರಿಗೊಳಿಸುತ್ತಿದೆ. ಸುಗ್ರೀವಾಜ್ಞೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಪೂರಕವಾದ ಸಮರ್ಥನೆಗಳನ್ನು ವಿವರಿಸಲಾಗಿದೆ. ಸುಗ್ರೀವಾಜ್ಞೆಯ ಪ್ರತಿ ‘ಪ್ರಜಾವಾಣಿ’ ಗೆ ಲಭ್ಯವಾಗಿದೆ.

ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ರಾಜ್ಯದಲ್ಲಿ ಈಗ ಶೇ 50 ರಷ್ಟು ಮೀಸಲಾತಿ ಇದೆ. ಹೆಚ್ಚಳ ಜಾರಿಯಾದರೆ ಈ ಪ್ರಮಾಣ ಶೇ 56 ರಷ್ಟು ಆಗಲಿದೆ.ಈ ಮಿತಿಯನ್ನುಮೀರದೆ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಒಟ್ಟು ಶೇ 6 ರಷ್ಟು ಹೆಚ್ಚಿಸಲು ಹೇಗೆ ಸಾಧ್ಯ ಎಂಬ ಬಗ್ಗೆ ಮಾಹಿತಿಯನ್ನು ಸುಗ್ರೀವಾಜ್ಞೆಯಲ್ಲಿ ವಿವರಿಸಿಲ್ಲ ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.

‘ಸೆಪ್ಟೆಂಬರ್‌ನಲ್ಲಿ ನಡೆದ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿತ್ತು, ಸಂವಿಧಾನ
ದ 174 ಮತ್ತು 213 ನೇ ಪರಿಚ್ಛೇದದ ಪ್ರಕಾರ ಅಧಿವೇಶನವನ್ನು ಮುಕ್ತಾಯಗೊಳಿಸದೇ ಯಾವುದೇ ಸುಗ್ರೀವಾಜ್ಞೆ ಹೊರಡಿಸಲು ಅವಕಾಶ ಇರಲಿಲ್ಲ. ಹೀಗಾಗಿ, ಅಧಿವೇಶನವನ್ನು ಮುಕ್ತಾಯಗೊಳಿಸಲು (ಸಮಾಪನ) ಪ್ರಸ್ತಾಪಿಸಿ ಮಂಡಿಸಿದ್ದ ಕಡತಕ್ಕೂ ರಾಜ್ಯಪಾಲರು ಭಾನುವಾರ ಬೆಳಿಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?: ಕೆಲವು ಸಮುದಾಯಗಳನ್ನು ಸೇರಿಸಿದ್ದರಿಂದ ಎಸ್‌ಸಿ, ಎಸ್‌ಟಿ ಜನಸಂಖ್ಯೆ ತೀವ್ರವಾಗಿಹೆಚ್ಚಿದೆ. 1976 ರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಆದೇಶಗಳ ತಿದ್ದುಪಡಿ ಕಾಯ್ದೆ1976 (1976ರ ಕೇಂದ್ರ ಕಾಯ್ದೆ 108) ಅನುಸಾರ ಜಾತಿಗಳಿಗೆ ಹಾಕಲಾದಭೌಗೋಳಿಕ ಮಿತಿಗಳನ್ನು ತೆಗೆದುಹಾಕಿರುವುದು ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಜನಸಂಖ್ಯೆ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ.

ಆದರೆ, ಮೀಸಲಾಯಿತಿಯು 1958ರಲ್ಲಿ ಇದ್ದಂತೆ ಎಸ್‌ಸಿ ಶೇ 15, ಎಸ್‌ಟಿ ಶೇ 3ರಷ್ಟು ಮಾತ್ರ ಇದೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ಮತ್ತು ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಸಮಿತಿ ವರದಿಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಲು ವಿಶೇಷ ಪ್ರಕರಣವನ್ನು ರೂಪಿಸುವ ಅಗತ್ಯವಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.

ಸಂವಿಧಾನದ 15ನೇ ಅನುಚ್ಛೇದ (4) ನೇ ಭಾಗವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ವರ್ಗಗಳ ಏಳಿಗೆಗಾಗಿ, ಯಾವುದೇ ವಿಶೇಷ ಅಂಶ ಸೇರಿಸಲು ರಾಜ್ಯಕ್ಕೆ ಅವಕಾಶ ನೀಡಿದೆ. 16ನೇ ಅನುಚ್ಛೇದ (4)ನೇ ಭಾಗವು ರಾಜ್ಯ ಸರ್ಕಾರದ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲವೆಂದು ಸರ್ಕಾರ ಅಭಿಪ್ರಾಯಪಡುವ ಹಿಂದುಳಿದ ಯಾವುದೇ ವರ್ಗಗಳ ಪರ
ನೇಮಕಾತಿ ಮತ್ತು ಹುದ್ದೆಗಳಲ್ಲಿ ಮೀಸಲಾತಿಗಾಗಿ ಉಪಬಂಧ ಕಲ್ಪಿಸಲು ಅವಕಾಶ ನೀಡಲಾಗಿದೆ. 38ನೇ ಅನುಚ್ಛೇದ (1) ಭಾಗದಲ್ಲಿ ನ್ಯಾಯಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ರಾಷ್ಟ್ರೀಯ ಜೀವನದ ಎಲ್ಲ ಕ್ಷೇತ್ರಗಳನ್ನು ಒಳಗೊಳ್ಳುವಂಥ ಸಾಮಾಜಿಕ ವ್ಯವಸ್ಥೆಯನ್ನು ಹೊಂದುವ ಮತ್ತು ಅದನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ಮೂಲಕಜನರ ಕಲ್ಯಾಣವನ್ನು ಉತ್ತೇಜಿಸಲು ರಾಜ್ಯ ಯತ್ನಿಸಬೇಕಿದೆ. ವಿಧಾನಮಂಡಲದ ಅಧಿವೇಶನ ಸದ್ಯಕ್ಕೆ ಇಲ್ಲದಿರುವುದರಿಂದ ಮತ್ತು ಶೀಘ್ರ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇರುವುದರಿಂದ ಈ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.

‘ಸುಗ್ರೀವಾಜ್ಞೆಯಲ್ಲಿರುವ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಗೆಜೆಟ್‌ ಅಧಿಸೂಚನೆ ಮೂಲಕ ನಿಯಮಗಳನ್ನು ರಚಿಸಬಹುದು. ಆ ನಿಯಮಗಳನ್ನು ರಚಿಸಿದ ಬಳಿಕ ಆದಷ್ಟು ಬೇಗ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಮಂಡಿಸಬೇಕು. ಸುಗ್ರೀವಾಜ್ಞೆಯ ಅಂಶಗಳ ಜಾರಿಗೆ ಸಮಸ್ಯೆ ಎದುರಾದರೆ, ಆದೇಶದ ಮೂಲಕ ಆ ಅಂಶಗಳನ್ನು ತೆಗೆದುಹಾಕಲು ಅಥವಾಹೊಸತಾಗಿ ಸೇರಿಸಲು ಅವಕಾಶ ನೀಡಲಾಗಿದೆ. ಆದರೆ, ಸುಗ್ರೀವಾಜ್ಞೆ ಜಾರಿಗೆ ಬಂದ ಎರಡು ವರ್ಷದ ಒಳಗೆ ಅಂಥ ಆದೇಶವನ್ನು ಮಾಡಬೇಕು’ ಎಂದೂ ಸ್ಪಷ್ಟಪಡಿಸಲಾಗಿದೆ.

ಎಲ್ಲೆಲ್ಲಿ ಮೀಸಲಾತಿ ಅನ್ವಯ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವು ರಾಜ್ಯ ಸರ್ಕಾರದ ಅಥವಾ ಅನುದಾನಿತ ಯಾವುದೇ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಅವಕಾಶಕ್ಕೆ ಅನ್ವಯ ಆಗಲಿದೆ. ರಾಜ್ಯ ಸರ್ಕಾರಿ ಅಂದರೆ, ಸರ್ಕಾರ, ವಿಧಾನಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪನಿ. ಸಾರ್ವಜನಿಕ ಸಂಸ್ಥೆಗಳು ಅಂದರೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು, ಕಂಪನಿ ಕಾಯ್ದೆಗಳಡಿ ಬರುವ ಸರ್ಕಾರಿ ಕಂಪನಿ, ಸ್ಥಳೀಯ ಪ್ರಾಧಿಕಾರ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ಹುದ್ದೆಗಳಿಗೆ ಅನ್ವಯ ಆಗಲಿದೆ.

ನೇಮಕಾತಿ ಅಥವಾ ಹುದ್ದೆಗಳಿಗೆ ಸ್ವಂತ ಅರ್ಹತೆಯ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಆಯ್ಕೆಯಾಗಿದ್ದರೆ, ಅಂಥವರನ್ನು ಮೀಸಲಾತಿಯಡಿ ಪರಿಗಣಿಸುವಂತಿಲ್ಲ. ಆ ಮೂಲಕ, ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯ ಬಾಧಕ ಉಂಟಾಗುವಂತಿಲ್ಲ ಎಂದೂ ಸುಗ್ರೀವಾಜ್ಞೆಯಲ್ಲಿ ಸ್ಪಷ್ಟಪಡಿಸಲಾಗಿದೆ.

****

ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮ್ಮ ಸರ್ಕಾರ ಬದ್ಧತೆಯಿಂದ ನಡೆದುಕೊಂಡಿದೆ. ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ದೀಪಾವಳಿ ಕೊಡುಗೆ ಕೊಟ್ಟಿದೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT