ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2022: ಎಸ್ಸೆಸ್ಸೆಲ್ಸಿ- ಈ ಬಾರಿ ದಾಖಲೆಯ ಫಲಿತಾಂಶ

ಶೇ 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ: ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು: ವಿದ್ಯಾರ್ಥಿನಿಯರ ಮೇಲುಗೈ.
Last Updated 19 ಮೇ 2022, 20:37 IST
ಅಕ್ಷರ ಗಾತ್ರ

ಬೆಂಗಳೂರು: 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. ಈ ಬಾರಿ ಶೇ 85.63 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ರಾಜ್ಯದ ವಿವಿಧ ಶಾಲೆಗಳ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶೇ100ರಷ್ಟು ಅಂಕ ಗಳಿಸಿದ್ದಾರೆ. ಇದುವರೆಗೆ 625 ಅಂಕಗಳನ್ನು ಪಡೆಯುವವರ ವಿದ್ಯಾರ್ಥಿಗಳ ಸಂಖ್ಯೆ ಹತ್ತು ದಾಟಿದ್ದು ಅಪರೂಪವಾಗಿತ್ತು. 2020ರಲ್ಲಿ ಆರು ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿದ್ದರು.

ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ 81.30ರಷ್ಟು ಮತ್ತು ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 90.29ರಷ್ಟಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಭಾಂಗಣದಲ್ಲಿ ಗುರುವಾರ ಫಲಿತಾಂಶ ಪ್ರಕಟಿಸಿದರು.

‘ಈ ಬಾರಿ ಒಟ್ಟು 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ 10 ವರ್ಷಗಳಲ್ಲೇ (2020-21 ಹೊರತುಪಡಿಸಿ) ಈ ಬಾರಿಯ ಶೇಕಡವಾರು ಫಲಿತಾಂಶ ಅತ್ಯಧಿಕವಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿ ಸ್ನೇಹಿಯಾಗಿದ್ದವು. ಜತೆಗೆ, ಪ್ರತಿ ಬಾರಿ ಶೇ 20ರಷ್ಟು ಕಠಿಣ ಪ್ರಶ್ನೆಗಳನ್ನು ನೀಡಲಾಗುತ್ತಿತ್ತು. ಈ ಬಾರಿ ಶೇ 10ರಷ್ಟು ಕಠಿಣ ಪ್ರಶ್ನೆಗಳಿದ್ದವು. ಈ ಅಂಶವು ಸಹ ಉತ್ತಮ ಫಲಿತಾಂಶ ದೊರೆಯಲು ಪೂರಕವಾಗಿದೆ’ ಎಂದು ತಿಳಿಸಿದರು.

2020–21ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿತ್ತು. ಪರೀಕ್ಷೆಗೆ ನೋಂದಾಯಿಸಿದ್ದ ಖಾಸಗಿ ವಿದ್ಯಾರ್ಥಿಯೊಬ್ಬರ ಹೆಸರಿನಲ್ಲಿ ಬೇರೊಬ್ಬರು ಪರೀಕ್ಷೆಗೆ ಹಾಜರಾಗಿದ್ದರಿಂದ, ಆ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿತ್ತು. ಹೀಗಾಗಿ, ಶೇ 99.99ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. 2019–20ನೇ ಸಾಲಿನಲ್ಲಿ ಶೇ72.4 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.


‘ಈ ಬಾರಿಯೂ ಜಿಲ್ಲಾವಾರು ರ‍್ಯಾಂಕಿಂಗ್‌ ನೀಡುವ ಪದ್ಧತಿಯನ್ನು ಕೈಬಿಡಲಾಗಿದೆ. ಜಿಲ್ಲೆಗಳ ನಡುವೆ ಸ್ಪರ್ಧೆ ಬೇಡ ಎನ್ನುವ ಉದ್ದೇಶದಿಂದ ಈ ಪದ್ಧತಿ ಕೈಬಿಡಲಾಗಿದೆ. ಗುಣಾತ್ಮಕ ಫಲಿತಾಂಶ ವಿಶ್ಲೇಷಣೆ ಆಧರಿಸಿ ಎ,ಬಿ, ಸಿ ಎಂದು ವಿಂಗಡಿಸಲಾಗಿದೆ. ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಶೈಕ್ಷಣಿಕ ಜಿಲ್ಲೆಗಳು ಮಾತ್ರ ಬಿ ಗ್ರೇಡ್‌ನಲ್ಲಿವೆ. ಉಳಿದ ಎಲ್ಲ 32 ಶೈಕ್ಷಣಿಕ ಜಿಲ್ಲೆಗಳು ಎ ಗ್ರೇಡ್‌ನಲ್ಲಿವೆ. ಶೇ 75ರಿಂದ 100ರಷ್ಟು ಫಲಿತಾಂಶ ಪಡೆದ ಜಿಲ್ಲೆಗಳನ್ನು ಎ ಗ್ರೇಡ್‌ಗೆ ಹಾಗೂ ಶೇ 60ರಿಂದ ಶೇ 75ರಷ್ಟು ಫಲಿತಾಂಶ ಪಡೆದ ಜಿಲ್ಲೆಗಳನ್ನು ಬಿ ಗ್ರೇಡ್‌ಗೆ ಸೇರಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

‘ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪೈಕಿ 3,920 ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ100ರಷ್ಟು ಬಂದಿದೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಶೂನ್ಯ ಫಲಿತಾಂಶ ಬಂದಿರುವ ಶಾಲೆಗಳು ಹಾಗೂ ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಶಾಲೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರೋಪಾಯಗಳನ್ನು ರೂಪಿಸಲಾಗುವುದು’ ಎಂದರು.

‘ಒಟ್ಟು 41,061 ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ಕೃಪಾಂಕ ನೀಡಲಾಗಿದೆ. 35,931 ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ, 3940 ಮಂದಿಗೆ ಎರಡು ವಿಷಯಕ್ಕೆ ಹಾಗೂ ಉಳಿದವರಿಗೆ ಮೂರು ವಿಷಯಕ್ಕೆ ಕೃಪಾಂಕ ನೀಡಲಾಗಿದೆ’ ಎಂದರು.

ಫಲಿತಾಂಶ ಸೋರಿಕೆ: ಸಚಿವರು ಫಲಿತಾಂಶ ಪ್ರಕಟವಾಗುವ ಮುನ್ನವೇ ಕೆಲ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎನ್ನುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಫಲಿತಾಂಶ ಸೋರಿಕೆಯಾಗಲು ಸಾಧ್ಯವಿಲ್ಲ. ಒಂದು ವೇಳೆ ಫಲಿತಾಂಶ ಸೋರಿಕೆಯಾಗಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದರು.

ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ಉತ್ತಮ ಸಾಧನೆ: ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಶೇ 80.61ರಷ್ಟು ಫಲಿತಾಂಶ ದೊರೆತಿದೆ.

ಒಟ್ಟು 4667 ವಿದ್ಯಾರ್ಥಿಗಳಲ್ಲಿ 3762 ಮಂದಿ ಉತ್ತೀರ್ಣರಾಗಿದ್ದಾರೆ.

ಜೂನ್‌ 27ರಿಂದ ಪೂರಕ ಪರೀಕ್ಷೆ

ಜೂನ್ 27ರಿಂದ ಪೂರಕ ಪರೀಕ್ಷೆ ನಡೆಯಲಿದ್ದು, ಜುಲೈ 4ರಂದು ಮುಕ್ತಾಯವಾಗಲಿದೆ. ಪೂರಕ ಪರೀಕ್ಷೆಗೆ ಅನುತ್ತೀರ್ಣ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನೋಂದಾಯಿಸಿಕೊಳ್ಳಲು ಮೇ 20ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.

‘ಇಲಾಖೆಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವೇಳಾಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸೂಚನೆಗಳು

* ಮೌಲ್ಯಮಾಪನದ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 20ರಿಂದ 30ರವರೆಗೆ ಅವಕಾಶ
* ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24ರಿಂದ ಜೂನ್‌ 6ರವರೆಗೆ ಅವಕಾಶ
* ಮರು ಎಣಿಕೆ, ಸ್ಕ್ಯಾನ್‌ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ.
* ಸಹಾಯವಾಣಿ: 080–23310075, 080–23310076, 080–23562267, 080–23561271

ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ಉತ್ತಮ ಸಾಧನೆ

ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಶೇ 80.61ರಷ್ಟು ಫಲಿತಾಂಶ ದೊರೆತಿದೆ.

ಒಟ್ಟು 4667 ವಿದ್ಯಾರ್ಥಿಗಳಲ್ಲಿ 3762 ಮಂದಿ ಉತ್ತೀರ್ಣರಾಗಿದ್ದಾರೆ.

* ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳು ಎದೆಗುಂದಬೇಕಿಲ್ಲ. ಧೈರ್ಯದಿಂದ ಇರಬೇಕು. ಪರೀಕ್ಷೆಗಿಂತ ಜೀವನ ಮುಖ್ಯ.

-ಬಿ.ಸಿ. ನಾಗೇಶ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT