ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ರೈತ ಸಾವು, ಮೂವರು ನಾಪತ್ತೆ

ಜಮೀನುಗಳು ಜಲಾವೃತ l ಅಪಾರ ಪ್ರಮಾಣದ ಬೆಳೆ ನಷ್ಟ l ಮನೆಗಳಿಗೆ ಹಾನಿ
Last Updated 16 ಅಕ್ಟೋಬರ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ರಾತ್ರಿ ಮತ್ತು ಭಾನುವಾರವೂ ಮಳೆ ಮುಂದುವರಿದಿದ್ದು, ರೈತರೊಬ್ಬರು ಮೃತಪಟ್ಟಿದ್ದಾರೆ.ನೀರಿನ ರಭಸಕ್ಕೆ ಸಿಲುಕಿ ಮೂವರು ನಾಪತ್ತೆಯಾಗಿದ್ದಾರೆ. ಕೆಲವೆಡೆ ಕೆರೆ ಏರಿಗಳು ಒಡೆದಿದ್ದು, ಅಪಾರ ಪ್ರಮಾಣದ ಕೃಷಿ ಜಮೀನು ಜಲಾವೃತವಾಗಿದೆ.ಅನೇಕ ಕಡೆ ಮನೆಗಳಿಗೆ ಹಾನಿ ಉಂಟಾಗಿದೆ.

ಮೈಸೂರು ತಾಲ್ಲೂಕಿನ ಭುಗತಹಳ್ಳಿಯಲ್ಲಿ ಶನಿವಾರ ತಡರಾತ್ರಿ ಮಳೆಯಿಂದ ಜಲಾವೃತವಾಗಿದ್ದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿರೈತ ಪುಟ್ಟಮಾದಪ್ಪ (46) ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರಿನಲ್ಲಿ ಶನಿವಾರ ರಾತ್ರಿ ತೋಟದಿಂದ ಹಿಂತಿರುಗುತ್ತಿದ್ದಾಗ ಕಲ್ಲೂರು ಕೆರೆಯ ಕೋಡಿ ನೀರಿನಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಹನುಮಂತಯ್ಯ (40) ಜಾರಿಬಿದ್ದರು. ಅವರನ್ನು ರಕ್ಷಿಸಲು ನಟರಾಜು (32) ಧಾವಿಸಿದರು. ಆದರೆ, ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿ ಹೋಗಿದ್ದಾರೆ. ಪಾವಗಡ ತಾಲ್ಲೂಕಿನ ಪಳವಳ್ಳಿಗೆ ಹೊರಟಿದ್ದ ಕೆಂಚಗಾನಹಳ್ಳಿಯ ಗಂಗಾಧರ (38) ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ.

‌ಮನೆ, ಬೆಳೆ ಹಾನಿ:ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ 12 ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ಚಿಕ್ಕಮಗಳೂರು ಜಿಲ್ಲೆಯಕಡೂರು ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ಮಳೆಗೆ 6 ಮನೆಗಳು ಹಾನಿಗೀಡಾಗಿವೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಳೆಯಿಂದಾಗಿ ಬಸ್‌ನಿಲ್ದಾಣ ಜಲಾವೃತವಾಗಿತ್ತು.

ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಜಮೀನು ಜಲಾವೃತವಾಗಿದ್ದು, ಬೆಳೆ ಹಾನಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗರಿಕೆಕಂಡಿಯಿಂದ ತಮಿಳುನಾಡಿನ ಹಂದಿಯೂರು ನಡುವೆ ವಿವಿಧೆಡೆ ಗುಡ್ಡ ಕುಸಿದಿದ್ದು, ಭಾನುವಾರದಿಂದ 4 ದಿನಗಳವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಭಾನುವಾರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಮಳೆ ಹಾನಿಗೆ ಸಂಬಂಧಿಸಿದಂತೆ ಶಾಶ್ವತ ಕ್ರಮ ಕೈಗೊಳ್ಳಲಾಗುವುದು. ಸೋಮವಾರ (ಅ.17) ಮತ್ತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆ ಸಭೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.

ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT