ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಾಯಿಗ್ ಸುಣ್ಣ ಹಾಕಬ್ಯಾಡ್ರಿ: ಬೀಜ ಸಂರಕ್ಷಕಿ ‍ಪಾಪಮ್ಮ

ದೇಶದ 2,200ಕ್ಕೂ ಹೆಚ್ಚು ಮಂದಿ ಭಾಗಿ
Last Updated 11 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಮೈಸೂರು: ಸಂಜೆ ಐದಾದರೂ ಮಂಜು ಮುಸುಕಿದ ಚಳಿಯ ವಾತಾವರಣ ಹೊರಗಿದ್ದರೆ; ಜಾಗತಿಕ ತಾಪಮಾನ ಏರಿಕೆ, ಸಾವಯವ ಕೃಷಿ ಚರ್ಚೆಯ ಕಾವು ಒಳಗೆ. ಜೊತೆಗೆ ದೇಸಿ ಬೀಜ ಸಂರಕ್ಷಕರ ಜಾತ್ರೆ, ವಿವಿಧ ರಾಜ್ಯಗಳ ವೈವಿಧ್ಯಮಯ ಭೋಜನದ ಸವಿ!

–ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಗರಿ ಬಿಚ್ಚಿದ 5ನೇ ಆವೃತ್ತಿಯ ‘ಕಿಸಾನ್‌ ಸ್ವರಾಜ್‌ ಸಮ್ಮೇಳನ’ದಲ್ಲಿ ಕಂಡ ಗ್ರಾಮ್ಯ ಭಾರತದ ವೈವಿಧ್ಯಮಯ ಚಿತ್ರಣವಿದು.

‘ಆಶಾ (ಅಲಯನ್ಸ್‌ ಫಾರ್‌ ಸಸ್ಟೈನಬಲ್ ಆ್ಯಂಡ್‌ ಹೋಲಿಸ್ಟಿಕ್‌ ಅಗ್ರಿಕಲ್ಚರ್‌) ಕಿಸಾನ್‌ ಸ್ವರಾಜ್‌’ ಸಂಸ್ಥೆ ಆಯೋಜಿಸಿದ್ದ ಸಮ್ಮೇಳನಕ್ಕೆ ಕೋಲಾರದ ಬೀಜ ಸಂರಕ್ಷಕಿ ಪಾಪಮ್ಮ ಚಾಲನೆ ನೀಡಿದರು. ಕೇರಳದ ಕೃಷಿ ಸಚಿವ ಪಿ.ಪ್ರಸಾದ್‌, ‘ಆಶಾ’ ರಾಷ್ಟ್ರೀಯ ಸಂಚಾಲಕ ಕಪಿಲ್‌ ಶಾ, ಮಾನವಶಾಸ್ತ್ರಜ್ಞೆ ಡಾ.ಎ.ಆರ್‌.ವಾಸವಿ ಸಾಕ್ಷಿಯಾದರು.

‘ಜನರ ಬಾಯಿಗ್ ಸುಣ್ಣ ಹಾಕಬ್ಯಾಡ್ರಿ’: ಉತ್ಸವ ಉದ್ಘಾಟಿಸಿ ಮಾತನಾಡಿದಪಾಪಮ್ಮ, ‘ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಜನರ ಬಾಯಿಗ್ ಸುಣ್ಣ ಹಾಕಬ್ಯಾಡ್ರಿ. ಬದುಕ ಬರಡು ಮಾಡಬ್ಯಾಡ್ರಿ’ ಎಂದು ಕೈ ಮುಗಿದು ಮನವಿ ಮಾಡಿದರು.

‘35 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. 50 ಜಾತಿಯ ಬೀಜಗಳನ್ನು ಉಳಿಸಿದ್ದೇನೆ. ನೀವೂ ಉಳಿಸಿ. ನಮ್ಮ ಮಕ್ಕಳನ್ನ ಬೆಳೆಸೋದು ಅದೇನೆ’ ಎಂದರು.

ಕೇರಳದ ಸಚಿವ ಪ್ರಸಾದ್ ಮಾತನಾಡಿ, ‘ಜಾಗತಿಕ ತಾಪಮಾನ ಏರಿಕೆಯಲ್ಲಿ ಕೃಷಿ ವಲಯದ ಕಾಣಿಕೆಯಿದೆ. ಪರಿಸರ ಕೇಂದ್ರಿತ ಕೃಷಿ ಮರೆಯಾಗಿದೆ. ಹೀಗಾಗಿ ನಮ್ಮ ಸರ್ಕಾರವು ‘ಸಾವಯವ ಕೃಷಿ ಮಿಷನ್‌– 2022’ ಯೋಜನೆ ಜಾರಿಗೊಳಿಸಿದೆ. ಕುಲಾಂತರಿ ಬೀಜಕ್ಕೆ ಬೆಂಬಲವಿಲ್ಲ’ ಎಂದರು.

ಮಾನವಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ, ‘ಎಲ್ಲ ದೇಶಗಳ ಆಹಾರ ಭದ್ರತೆಗೆ ಜಾಗತಿಕ ತಾಪಮಾನ ಏರಿಕೆ ಸವಾಲನ್ನು ಒಡ್ಡಿದೆ. ಕೃಷಿ ವೈವಿಧ್ಯ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಆಯ್ಕೆ’ ಎಂದರು.

ಆಶಾ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ ಮಾತನಾಡಿ, ‘1980ಕ್ಕೂ ಮುಂಚೆಯೇ ಸಾವಯವ ಕೃಷಿ ಪದ್ಧತಿ ಕರ್ನಾಟಕದಲ್ಲಿ
ಪ್ರವರ್ಧಮಾನಕ್ಕೆ ಬಂದಿತು. ದೇಶಕ್ಕೆ ಸಾವಯವ ಪಾಠಗಳನ್ನು ಹೇಳಿಕೊಟ್ಟಿದೆ. ಸಾವಯವ ಕೃಷಿ‌ನೀತಿಯನ್ನು ಮೊದಲು ಜಾರಿಗೊಳಿಸಿದೆ’ ಎಂದರು.

ಪರಿಸರ ತಜ್ಞ ಯು.ಎನ್.ರವಿಕುಮಾರ್, ಕೆಎಸ್ಒಯು ಪ್ರಭಾರ ಕುಲಪತಿ ಖಾದರ್ ಪಾಷಾ, ಕೃಷ್ಣಪ್ರಸಾದ್‌, ನಿವೃತ್ತ ಮೇಜರ್ ಜನರಲ್ ಎಸ್‌.ಜಿ.ಒಂಬತ್ಕೆರೆ,ನಚಿಕೇತ್‌ ಉಡುಪ ಇದ್ದರು.

23 ರಾಜ್ಯಗಳಿಂದ 2,200ಕ್ಕೂ ಹೆಚ್ಚು ಸಾವಯವ ಕೃಷಿಕರು ಭಾಗವಹಿಸಿರುವ ಸಮ್ಮೇಳನದಲ್ಲಿ ಬೀಜ ಉತ್ಸವ, ಸಾಕ್ಷ್ಯಚಿತ್ರ ಪ್ರದರ್ಶನ, ಕೃಷಿಗೋಷ್ಠಿ, 500ಕ್ಕೂ ಹೆಚ್ಚು ತಳಿಯ ಬಾಳೆ ಮೇಳ, ಗೆಡ್ಡೆಗೆಣಸು ಮೇಳ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT