ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ: ‘ವೀರಶೈವ ಜತೆ ಬಸವಣ್ಣ ಸಮೀಕರಣಕ್ಕೆ ಸಹಮತ’

ಮುಖ್ಯಮಂತ್ರಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಪತ್ರ
Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂಬತ್ತನೇ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರನ್ನು ವೀರಶೈವ ಧರ್ಮದೊಂದಿಗೆ ಸಮೀಕರಿಸಿರುವುದಕ್ಕೆ ನಮ್ಮ ಸಹಮತ ಇದೆ’ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಸ್ಥೆಯ ಪರವಾಗಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು ಪತ್ರ ಬರೆದಿದ್ದಾರೆ.

‘ಪರಿಷ್ಕೃತ ಪಠ್ಯದಲ್ಲಿ ಬಸವಣ್ಣನವರು ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಿದರು ಎಂದಿದೆ. ಇಲ್ಲಿ ‘ಅಭಿವೃದ್ಧಿ’ ಶಬ್ದದ ಬದಲಾಗಿ, ‘ಪ್ರಚಾರ ಮಾಡಿದರು’ ಎನ್ನುವ ಶಬ್ದ ಇದ್ದಿದ್ದರೆ ಸರಿಯಾಗಿರುತ್ತಿತ್ತು’ ಎಂದು ಪ್ರತಿಪಾದಿಸಿದ್ದಾರೆ.

‘ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದು ಧ್ಯಾನ ಸಾಧನೆ ಮಾಡಿದರು ಎನ್ನುವುದು ಅರ್ಧ ಸತ್ಯ. ವೀರಶೈವವನ್ನು ಮೊಟಕುಗೊಳಿಸಿ ಕೇವಲ ಶೈವ ಎಂದು ಪರಿಷ್ಕರಿಸಿರುವುದು ಇತಿಹಾಸ ಅಧ್ಯಯನ ಮಾಡದಿರುವುದನ್ನು ಶ್ರುತಪಡಿಸುತ್ತದೆ. ಇಲ್ಲಿ ಶೈವ ಗುರುಗಳು ಎಂಬುದಕ್ಕಿಂತ ಸಾರಂಗ ಮಠದ ಅಂದಿನ ಮಠಾಧಿಪತಿಯಾಗಿದ್ದ ಜಾತವೇದ ಮುನಿಗಳು ಬಸವಣ್ಣನವರಿಗೆ ಲಿಂಗ ದೀಕ್ಷೆ ಮಾಡಿದರು ಎನ್ನುವುದು ಇರಬೇಕಾಗಿತ್ತು’ ಎಂದು ವಿವರಿಸಿದ್ದಾರೆ.

‘ಬಸವಣ್ಣ ಬೋಧಿಸಿದ ತತ್ವವನ್ನು ಶಕ್ತಿ ವಿಶಿಷ್ಟಾದ್ವೈತ ಎನ್ನಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ದೈತ್ವ, ಅದ್ವೈತ, ಶಕ್ತಿ ವಿಶಿಷ್ಟಾದ್ವೈತದಂತಹ ಕ್ಲಿಷ್ಟ ಶಬ್ದ ಮತ್ತು ತತ್ವಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಗಳೇ ಸರಿ. ಅದಕ್ಕಿಂತ ಅವರು ತಮ್ಮ ವಚನಗಳ ಮೂಲಕ ಸಾರಿದ ಸಾಮಾಜಿಕ ಸಂದೇಶಗಳಿಗೆ ಸೀಮಿತವಾಗಿಸಿದ್ದರೆ ಸಾಕಿತ್ತು. ಬಸವಣ್ಣನವರು ಶಕ್ತಿ ವಿಶಿಷ್ಟಾದ್ವೈತವನ್ನು ಬೋಧಿಸಲಿಲ್ಲ. ಅದನ್ನು ಆಚರಿಸಿದರು ಎಂದಿರಬೇಕಿತ್ತು’ ಎಂದು ಹೇಳಿದ್ದಾರೆ.

‘ಕೆಲ ಮಠಾಧೀಶರು, ಮುಖಂಡರು ಹಾಗೂ ತಮ್ಮ ಧರ್ಮದ ಕುರಿತು ಮಾತನಾಡುವ ಧೈರ್ಯ, ಬದ್ಧತೆ ಇಲ್ಲದ ಅನ್ಯಧರ್ಮಿಯರು ಬಸವಣ್ಣನವರನ್ನು ವೀರ ಶೈವ ಬದಲಿಗೆ ಲಿಂಗಾಯತ ಎನ್ನಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಬಸವಣ್ಣನವರು ಉಪನಯನದ ನಂತರ ಕೂಡಲಸಂಗಮಕ್ಕೆ ನಡೆದರು ಎನ್ನುವುದೂ ಸತ್ಯಕ್ಕೆ ದೂರವಾಗಿದೆ’ ಎಂದಿದ್ದಾರೆ.

‘ಪ್ರಖರ ಸತ್ಯವೊಂದರ ತಿಳಿವಳಿಕೆಯನ್ನು ಅತಿ ತುರ್ತಾಗಿ ರಾಜ್ಯ ಸರ್ಕಾರ ಮಾಡಬೇಕಾಗಿದೆ. ಆಗಷ್ಟೇ ರಾಜಕಾರಣದ (ಧರ್ಮ ರಾಜಕಾರಣವನ್ನು ಒಳಗೊಂಡಂತೆ) ಗರ್ಭದಿಂದ ಜನಿಸಿದ ವಿಚಾರವಾಗಿರುವ ಬಸವಣ್ಣನವರು ಲಿಂಗಾಯತ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು ಎಂಬ ಅಪಪ್ರಚಾರಕ್ಕೆ ಅಂತಿಮ ತೆರೆ ಎಳೆಯಬಹುದು’ ಎಂದು ವಿವರಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT