ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರತೀರ್ಥ ಸಮಿತಿಯೇ ತುಕ್ಡೆ ತುಕ್ಡೆ ಗ್ಯಾಂಗ್: ರಾಜಶೇಖರಮೂರ್ತಿ

Last Updated 15 ಜೂನ್ 2022, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಸಮಿತಿಯು ಪಾಲಿಸಿದ ಸಂವಿಧಾನಾತ್ಮಕ ಆಶಯಗಳನ್ನು ತುಂಡರಿಸಿದ ರೋಹಿತ್ ಚಕ್ರತೀರ್ಥ ಸಮಿತಿಯು ತಾನೇ ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ತೋರಿಸಿಕೊಂಡಿದೆ ಎಂದು ದಲಿತ ಹಕ್ಕುಗಳ ಸಮಿತಿ–ಕರ್ನಾಟಕದ ಸಂಚಾಲಕ ಬಿ. ರಾಜಶೇಖರಮೂರ್ತಿ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಸರ್ಕಾರವು ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಮಾಡಿದ ಮೇಲೆ ರಾಜ್ಯದಾದ್ಯಂತ ಪ್ರತಿರೋಧ ವ್ಯಾಪಕವಾಗುತ್ತಿದೆ. ಇದನ್ನು ಪ್ರಜಾಸತ್ತಾತ್ಮಕವಾಗಿ ಪರಿಗಣಿಸದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇ‌ಶ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬರಗೂರು ನೇತೃತ್ವದ ಸಮಿತಿಗಳು ಮಾಡಿದ ಪರಿಷ್ಕರಣೆಯ ಹಿಂದೆ ಜೆಎನ್‌ಯುಗೆ ಸಂಬಂಧಿಸಿದ ತುಕ್ಡೆ ತುಕ್ಡೆ ಗ್ಯಾಂಗ್ ಇತ್ತು ಎಂದು ಅವರು ಹೇಳಿರುವುದೇ ಮಿಥ್ಯಾರೋಪ ಎಂದು ಅವರು ದೂರಿದ್ದಾರೆ.

ಬರಗೂರು ಸಮಿತಿಯುಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆದಿತ್ತು. ಚಕ್ರತೀರ್ಥ ಸಮಿತಿ ಅದನ್ನು ಕಿತ್ತುಹಾಕಿದೆ. ಬದಲಾಗಿ ಬಿ.ಎನ್. ರಾವ್ ಅವರು ಸಂವಿಧಾನ ರಚನಾ ಚೌಕಟ್ಟು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಪ್ರತ್ಯೇಕವಾಗಿ ಬರೆದು, ಅಂಬೇಡ್ಕರ್‌ ಅವರ ಪಾತ್ರವನ್ನು ಗೌಣಗೊಳಿಸಲಾಗಿದೆ. ಅಂಬೇಡ್ಕರ್‌ ತಾಯಿ–ತಂದೆ ಇತ್ಯಾದಿ ವಿವರ ಕೈಬಿಡಲಾಗಿದೆ.
ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿಚಿತ್ರವನ್ನು ಕಿತ್ತುಹಾಕಿದ್ದೂ ಇದೇ ಚಕ್ರತೀರ್ಥ ಸಮಿತಿ. ಅಂಬೇಡ್ಕರ್, ಬುದ್ಧ ಗುರುವಿನ ಬಗ್ಗೆ ಇದ್ದ ಪದ್ಯಗಳಿಗೆ ಸಂಪೂರ್ಣ ಕತ್ತರಿ ಹಾಕಲಾಗಿದೆ. 6ನೇ ತರಗತಿ ಪಠ್ಯದಿಂದ ಬೌದ್ಧ ಧರ್ಮದ ಪಾಠ ತೆಗೆಯಲಾಗಿದೆ. ದಲಿತ ಲೇಖಕರ ಪಾಠಗಳನ್ನು ತೆಗೆದುಹಾಕಲಾಗಿದೆ. ಇಂತಹ ಕೃತ್ಯವನ್ನು ಸಮರ್ಥಿಸುವ ಶಿಕ್ಷಣ ಸಚಿವರೂ ದಲಿತ ವಿರೋಧಿ ಎಂದು ಆರೋಪಿಸಿದ್ದಾರೆ.‌

ಬರಗೂರು ಸಮಿತಿಯ ಪಠ್ಯಗಳನ್ನೇ ಈ ವರ್ಷ ಮುಂದುವರಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT