ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ಸಮಿತಿ ಪರಿಷ್ಕರಿಸಿದ್ದ ಪಠ್ಯ ಮುಂದುವರೆಸದಿದ್ದರೆ ಹೋರಾಟ: ಸಿದ್ದರಾಮಯ್ಯ

Last Updated 9 ಜೂನ್ 2022, 7:55 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕೃರಿಸಿರುವ ಪಠ್ಯವನ್ನು ವಾಪಾಸು ಪಡೆಯಬೇಕು. ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯವನ್ನೇ ಮುಂದುವರೆಸಬೇಕು. ಈ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ ನಾವು ಮುಂದಿನ ಹೋರಾಟದ ರೂಪುರೇಷಗಳನ್ನು ಶೀಘ್ರದಲ್ಲಿ ಚರ್ಚಿಸಿ, ತೀರ್ಮಾನಿಸುತ್ತೇವೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

‘ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸಬೇಕು’ ಎಂದು ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಕೆಪಿಸಿಸಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಎರಡೂ ಜಂಟಿಯಾಗಿ ರೋಹಿತ್‌ ಚಕ್ರತೀರ್ಥ ಅವರು ಪರಿಷ್ಕರಣೆ ಮಾಡಿರುವ ಪಠ್ಯಕ್ರಮವನ್ನು ವಿರೋಧಿಸಿ ಸಾಂಕೇತಿಕವಾಗಿ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ರೋಹಿತ್‌ ಚಕ್ರತೀರ್ಥ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದೆ. ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಶಿಕ್ಷಣ ತಜ್ಞರು, ರಾಜಕಾರಣಿಗಳಿಂದ ತೀವ್ರವಾದ ವಿರೋಧ ವ್ಯಕ್ತವಾದದ್ದು ಇದಕ್ಕೆ ಕಾರಣ’ ಎಂದರು.

‘ಸಮಿತಿ ವಿಸರ್ಜನೆ ಮಾಡಿದರೂ ಆ ಸಮಿತಿ ಶಿಫಾರಸು ಮಾಡಿದ ಪಠ್ಯವನ್ನು ಇಟ್ಟುಕೊಂಡಿದೆ. ಸಮಿತಿ ವಜಾ ಆಗಿರುವುದರಿಂದ ಆ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯವನ್ನು ಮಕ್ಕಳಿಗೆ ಬೋಧನೆ ಮಾಡಬಾರದು ಎಂದು ನಾವು ಒತ್ತಾಯಿಸಿದ್ದೇವೆ. ಪರಿಷ್ಕರಣೆಗೊಂಡ ಪಠ್ಯದಲ್ಲಿ ಇತಿಹಾಸ ತಿರುಚುವ ಕೆಲಸ ಆಗಿದೆ, ಬಸವಣ್ಣ, ಅಂಬೇಡ್ಕರ್‌, ನಾರಾಯಣ ಗುರು, ಕುವೆಂಪು, ಭಗತ್‌ ಸಿಂಗ್‌, ಇನ್ನೂ ಅನೇಕ ಸಂತರು, ದಾರ್ಶನಿಕರ ಚರಿತ್ರೆಗಳನ್ನು ತಿರುಚಲಾಗಿದೆ. ಉದಾಹರಣೆಗೆ 9ನೇ ತರಗತಿ ಪಠ್ಯದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿತ್ತು, ಈಗ ಅದನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ತೆಗೆದುಹಾಕಲಾಗಿದೆ. ಹೀಗೆ ದೇಶಭಕ್ತರು, ದಾರ್ಶನಿಕರ ವಿಚಾರಗಳನ್ನು ತಿರುಚಿ ಕೇಸರಿಕರಣಗೊಳಿಸಲಾಗಿದೆ’ ಎಂದರು.

‘ಶಿಕ್ಷಣ ಸಚಿವ ನಾಗೇಶ್‌ ಅವರು ಮೊದಲು ಪರಿಷ್ಕರಣೆಗೊಂಡ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಗಣ್ಯ ವ್ಯಕ್ತಿಗಳಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾದ ಮೇಲೆ ಕೆಲವು ವಿಚಾರಗಳನ್ನು ಪುನರ್‌ ಪರಿಶೀಲನೆ ಮಾಡುತ್ತೇವೆ, ಇನ್ನೊಂದು ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಮಕ್ಕಳಿಗೆ ಹಂಚುತ್ತೇವೆ ಎಂದಿದ್ದಾರೆ. ಇದರರ್ಥ ತಾವು ಚರಿತ್ರೆ ತಿರುಚಿರುವುದು ಸತ್ಯ, ಆರ್.ಎಸ್.ಎಸ್‌ ನಿರ್ದೇಶನದಂತೆ ಪಠ್ಯ ರಚನೆ ಮಾಡಿದ್ದಾರೆ ಎಂದು ಒಪ್ಪಿಕೊಂಡಂತೆ’ ಎಂದೂ ಹೇಳಿದರು.

‘ನಾವು ರಾಷ್ಟ್ರೀಯ ಪಕ್ಷವಾಗಿ ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ, ನೈಜ ಇತಿಹಾಸವನ್ನು ತಿಳಿಸುವ ಕೆಲಸ ಮಾಡಬೇಕು, ಕೇಸರಿಕರಣಗೊಂಡಿರುವ ಪಠ್ಯವನ್ನು ಮಕ್ಕಳಿಗೆ ತಿಳಿಸಬಾರದು. ಆರ್ಎಸ್‌ಎಸ್‌ನಲ್ಲಿ ಮಾಡುವ ಭಾಷಣವನ್ನು ಮಕ್ಕಳಿಗೆ ತಿಳಿಸಿ, ಅವರ ಮನಸನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂಬುದು ನಮ್ಮ ನಿಲುವು. ನಾವು ಆರ್‌ಎಸ್‌ಎಸ್‌ ಮತ್ತು ಕೇಸರಿಕರಣದ ವಿರುದ್ಧ ಇದ್ದೇವೆ, ಅದನ್ನು ಪ್ರಮಾಣಿಕವಾಗಿ ವಿರೋಧಿಸುತ್ತೇವೆ. ಬಿಜೆಪಿ ಅವರು ಮಕ್ಕಳ ಮನಸನ್ನು ಹಾಳು ಮಾಡುವ, ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT