ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮೊರೆ ಹೋಗಲು ನಿರ್ಧಾರ

ಕಸ್ತೂರಿರಂಗನ್‌ ವರದಿ: ರಾಜ್ಯ ಸರ್ಕಾರದ ತೀರ್ಮಾನ
Last Updated 13 ಡಿಸೆಂಬರ್ 2020, 2:56 IST
ಅಕ್ಷರ ಗಾತ್ರ

ಬೆಂಗಳೂರು: ಕಸ್ತೂರಿರಂಗನ್‌ ಸಮಿತಿ ಮಾಡಿದ ಶಿಫಾರಸಿನಿಂದ ಎದುರಾಗಿರುವ ಸಮಸ್ಯೆಗಳು ಮತ್ತು ತನ್ನ ಕಾಳಜಿಯನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಬಿಚ್ಚಿಡಲು ನಿರ್ಧರಿಸಿದೆ. ಆ ಮೂಲಕ, ಆತಂಕದಲ್ಲಿರುವ ಮಲೆನಾಡು ಭಾಗದ ಜನರ ಅಳಲಿಗೆ, ಜನಪ್ರತಿನಿಧಿಗಳ ಅಹವಾಲಿಗೆ ‘ನ್ಯಾಯ’ ಕಲ್ಪಿಸಲು ಮುಂದಾಗಿದೆ.

ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿರುವ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ‘ಪರಿಸರ ಸೂಕ್ಷ್ಮ ಪ್ರದೇಶ’ದೊಳಗೆ ಸೇರಿರುವ ಗ್ರಾಮಸ್ಥರ ಹಿತಾಸಕ್ತಿ ಕಾಪಾಡಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ವರದಿಯಲ್ಲಿ ಗುರುತಿಸಿದ ರಾಜ್ಯದ ಅರಣ್ಯ ಮತ್ತು ಅರಣ್ಯೇತರ ಭೂಮಿಯನ್ನೊಳಗೊಂಡ 1,533 ಗ್ರಾಮಗಳಿರುವ 20,668 ಚದರ ಕಿ.ಮೀ ಪ್ರದೇಶವನ್ನು ಕಡಿಮೆಗೊಳಿಸುವಲ್ಲಿ ಈ ಯಾವ ಕ್ರಮಗಳೂ ಫಲ ನೀಡಿಲ್ಲ. ಹೀಗಾಗಿ, ಮುಂದೆ ಯಾವುದೇ ತೀರ್ಮಾನ ಕೈಕೊಳ್ಳದಿರಲು ನಿರ್ಧರಿಸಿರುವ ಸರ್ಕಾರ, ಹಸಿರು ನ್ಯಾಯಮಂಡಳಿಗೆ ವಿಷಯ ಒಯ್ಯಲಿದೆ.

‘ರಾಷ್ಟ್ರೀಯ ಹಸಿರು ನ್ಯಾಯ ಮಂಡ ಳಿಯು ರಾಜ್ಯದ ನೈಜ ಕಾಳಜಿಯನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಈ ವಿಷಯವನ್ನು ನಿರಂತರವಾಗಿ ಮುಂದೂಡುತ್ತಲೇ ಬಂದಿದೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಕೇಂದ್ರ ಸರ್ಕಾರ ತಾನಾಗಿಯೇ ನಿರ್ಧಾರ ತೆಗೆದು ಕೊಂಡು, ‘ಪರಿಸರ ಸೂಕ್ಷ್ಮ ಪ್ರದೇಶ’ಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಅಂತಿಮಗೊಳಿಸಬಹುದು’ ಎಂಬ ಆತಂಕ ರಾಜ್ಯ ಸರ್ಕಾರಕ್ಕಿದೆ.

ಕೇಂದ್ರ ಸರ್ಕಾರ 2014ರಿಂದ ಈ ವಿಷಯದಲ್ಲಿ ನಾಲ್ಕು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಈ ಎಲ್ಲ ಅಧಿಸೂಚನೆಗಳಿಗೆ ರಾಜ್ಯಗಳಿಂದ ಆಕ್ಷೇಪಣೆ ಆಹ್ವಾನಿಸಿದ್ದು, ರಾಜ್ಯ ಸರ್ಕಾರ ಕೂಡ ಆಕ್ಷೇಪಣೆ ಸಲ್ಲಿಸಿದೆ. ಈ ಅಧಿಸೂಚನೆಗಳು 18 ತಿಂಗಳು ಮಾತ್ರ ಚಾಲ್ತಿಯಲ್ಲಿರುತ್ತವೆ. ಹೀಗಾಗಿ ಅಧಿಸೂಚನೆಗಳ ಅವಧಿ ಮುಕ್ತಾಯಗೊಂಡಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಸಾರ್ವ ಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಆಧರಿಸಿ ಕಸ್ತೂರಿರಂಗನ್‌ ವರದಿಯಲ್ಲಿರುವ ವಿಷಯವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೈಗೆತ್ತಿಕೊಂಡಿದೆ. ಈ ವರದಿಯನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿ ರುವ ನ್ಯಾಯ ಮಂಡಳಿ, ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿದ್ದರೆ ಕೇಂದ್ರದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ಈ ಹಿಂದಿನ ಕರಡು ಅಧಿಸೂಚ ನೆಗಳ ಅವಧಿ ಮುಕ್ತಾಯಗೊಂಡಿರುವುದರಿಂದ, ಕೇಂದ್ರ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಅಭಿಮತ ಪಡೆದರೆ ಮುಂದೆ ಸಮಸ್ಯೆ ಉದ್ಭವಿಸದು.

ವರದಿ ಅನುಷ್ಠಾನಗೊಂಡಿಲ್ಲ ಎಂದು ಸಲ್ಲಿಕೆಯಾಗಿದ್ದ ಮೂಲ ಅರ್ಜಿ ಯನ್ನು ನವೆಂಬರ್‌ 22ರಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ,ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. 2020ರ ಮಾರ್ಚ್‌ 31ರ ಒಳಗೆ ಕರಡು ಅಧಿಸೂ ಚನೆ ಅಂತಿಮಗೊಳಿಸದಿದ್ದರೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್‌) ವಿಭಾ ಗದ ಸಲಹೆಗಾರರ ವೇತನವನ್ನು ಬಿಡುಗಡೆ ಮಾಡಬಾರದು ಎಂದು ಆದೇಶಿಸಿತ್ತು.

ಅಧಿಕಾರಿಯು 2020ರ ಡಿಸೆಂಬರ್‌ 31ರ ಒಳಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಕು. ಅಂತಿಮಗೊಳಿಸದಿದ್ದರೆ ಅಧಿಕಾರಿಯ ವೇತನವನ್ನು ಹಸಿರು ನ್ಯಾಯ ಮಂಡಳಿಯ ನಿಯಮ ಗಳ ಪ್ರಕಾರ ಬಿಡುಗಡೆಗೊಳಿಸುವುದಿಲ್ಲ ಎಂದು 2020ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿದೆ. ಆ ಗಡುವಿನ ಒಳಗೆ, ವರದಿಯಲ್ಲಿರುವ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ವರದಿಗೆ ರಾಜ್ಯದ ಪ್ರತಿಕ್ರಿಯೆ ಏನು?

- ಅರಣ್ಯ ಪ್ರದೇಶ, ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶದ ಪಕ್ಕದ ಪರಿಸರ ಸೂಕ್ಷ್ಮ ವಲಯವನ್ನು ಮಾತ್ರ ‘ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಬೇಕು

- ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ನಗರಾಭಿವೃದ್ಧಿಯನ್ನು ನಿಯಂತ್ರಿಸಬೇಕು. ಆದರೆ, ಅದನ್ನು ನಿಷೇಧಿಸಬಾರದು.

- ಚಾಲ್ತಿಯಲ್ಲಿರುವ ಜಲ ವಿದ್ಯುತ್‌ ಯೋಜನೆಗಳ ವಿಸ್ತರಣೆಯನ್ನು ಉದಾರೀಕರಣಗೊಳಿಸಬೇಕು

- ನಗರಪ್ರದೇಶವನ್ನು ಹೊರತುಪಡಿಸಬೇಕು

- ಎ– ವರ್ಗದ ಆಸ್ಪತ್ರೆ, ಉದ್ಯಮಗಳನ್ನು ನಿಷೇಧಿಸಬಾರದು (ನಿಯಂತ್ರಣ ವಿಧಿಸಿ ಅನುಮತಿ ನೀಡಬೇಕು)

- ವರದಿಯಲ್ಲಿ ಪ್ರಸ್ತಾಪಿಸಿರುವ ಆರ್ಥಿಕ ಪ್ರೋತ್ಸಾಹವನ್ನು ಅಕ್ಷರಶಃ ಕಾರ್ಯರೂಪಕ್ಕೆ ತರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT