ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣ: ವಿಧಾನ ಪರಿಷತ್‌ನಲ್ಲಿ ಬಿಟ್ ಕಾಯಿನ್ ಸದ್ದು

ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್‌: ದೋಷಾರೋಪ ಪಟ್ಟಿ ಸಲ್ಲಿಕೆ– ಜ್ಞಾನೇಂದ್ರ
Last Updated 16 ಡಿಸೆಂಬರ್ 2021, 22:12 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ್ದ ಬಿಟ್‌ ಕಾಯಿನ್‌ ಹಗರಣ ಗುರುವಾರ ವಿಧಾನ ಪರಿಷತ್‌ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಗೊಂಡು ಕೆಲಹೊತ್ತು ಸದ್ದು ಮಾಡಿತು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಈ ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿವೆ. ತನಿಖೆಯಲ್ಲಿ ಯಾವುದೇ ಲೋಪ ಆಗಿಲ್ಲ. ಸರ್ಕಾರದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಸುವ ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿ ಶ್ರೀಕೃಷ್ಣ (ಶ್ರೀಕಿ)ಯನ್ನು ರಕ್ಷಣೆ ಮಾಡಿಲ್ಲ’ ಎಂದರು.

‘ವಿಚಾರಣೆ ವೇಳೆ ಶ್ರೀಕಿಗೆ ಪೊಲೀಸರು ಹಿಂಸೆ ನೀಡಿದ್ದಾರೆ’ ಎಂಬ ಆರೋಪಕ್ಕೆ, ‘ಈ ಪ್ರಕರಣಗಳ ಪೈಕಿ ಎರಡರಲ್ಲಿ ಮಾತ್ರ ಶ್ರೀಕಿ ಆರೋಪಿ. ಅವನಿಂದ ಬಲವಂತವಾಗಿ ಹೇಳಿಕೆ ಪಡೆದಿಲ್ಲ. ತನಿಖೆ ಸಮರ್ಪಕವಾಗಿ, ಪಾರದರ್ಶಕವಾಗಿ ನಡೆದಿದೆ. ಬಿಟ್ ಕಾಯಿನ್ ಕದಿಯಲು ಪೊಲೀಸರು ಶ್ರೀಕಿಯನ್ನು ಬಳಸಿಕೊಂಡಿದ್ದಾರೆ. ಅವನಿಗೆ ಡ್ರಗ್ಸ್ ನೀಡಿದ್ದಾರೆ ಎನ್ನುವುದು ಆಧಾರರಹಿತ ಆರೋಪ. ಬೆಂಗಳೂರು ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಶ್ರೀಕಿ ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದು, ಆತನನ್ನು ಯಾರು ಬೇಕಾದರೂ ಸಂಪರ್ಕಿಸಿ ಮಾಹಿತಿ ಪಡೆಯಬಹುದು’ ಎಂದರು.

ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ವೆಂಕಟೇಶ್, ‘ಮಗನಿಗೆ ಡ್ರಗ್ಸ್ ನೀಡಲಾಗಿದೆ ಎಂದು ಶ್ರೀಕಿ ಅವರ ತಂದೆ ಆರೋಪಿಸಿದ್ದಾರೆ. ಪೊಲೀಸರು ಹಿಂಸೆ ನೀಡಿದ್ದಾರೆ ಎಂದೂ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು, ರಾಜಕೀಯ ನಾಯಕರು ಭಾಗಿಯಾಗಿರುವ ಆರೋಪವೂ ಇದೆ. ಇದರಿಂದಾಗಿ ಪ್ರಕರಣದ ಸೂಕ್ತ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದರು.

’ಶ್ರೀಕಿಗೆ ಡ್ರಗ್ಸ್‌ ನೀಡಿರುವ ಬಗ್ಗೆ ಪೊಲೀಸರು ಸಮರ್ಪಕವಾಗಿ ವೈದ್ಯಕೀಯ ತಪಾಸಣೆ ಮಾಡಿಲ್ಲ. ಮೊದಲು ಹೊಟ್ಟೆಯನ್ನು ಸ್ವಚ್ಛಗೊಳಿಸಿ, ಬಳಿಕ ಎಫ್ಎಸ್ಎಲ್ ವರದಿಗೆ ಕಳುಹಿಸಿಕೊಡಲಾಗಿದೆ. ಇದು ಸರಿಯಲ್ಲ’ ಎಂದರು.

ಆಗ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ವೈದ್ಯಕೀಯ ತಪಾಸಣೆಯಲ್ಲಿ ಯಾವುದೇ ಲೋಪ ಆಗಿಲ್ಲ. ಸರ್ಕಾರ ವ್ಯವಸ್ಥಿತವಾಗಿಯೇ ತಪಾಸಣೆ ನಡೆಸಿದೆ. ಎಫ್ಎಸ್ಎಲ್ ವರದಿಗೆ ಕಳುಹಿಸುವ ಮೊದಲು ಬೌರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ನಡೆಸಲಾಗಿದೆ ಅಷ್ಟೇ’ ಎಂದು ಸಮಜಾಯಿಷಿ ನೀಡಿದರು.

‘ಇದೊಂದು ಗಂಭೀರ ಪ್ರಕರಣ. ಈ ವಿಚಾರದಲ್ಲಿ ಅರ್ಧ ಗಂಟೆ ಚರ್ಚೆಗೆ ನೀಡಬೇಕು’ ಎಂದು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ, ಪ್ರತ್ಯೇಕ ಪತ್ರವನ್ನು ನೀಡಿದರೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

'ಎತ್ತಿನಹೊಳೆ ಯೋಜನೆ; ಅಡೆತಡೆ ನಿವಾರಣೆ'
‘ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಅಡೆತಡೆಗಳನ್ನು ನಿವಾರಿಸಿ, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಗುರುವಾರ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಎಂ.ಎ. ಗೋಪಾಲಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಎತ್ತಿನಹೊಳೆ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು, ಎರಡನೇ ಹಂತದಲ್ಲಿ ಎತ್ತಿನಹೊಳೆ ಗುರುತ್ವ ಕಾಲುವೆ (260.00 ಕಿ.ಮೀ), ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್ ಕಾಲುವೆ, ಮಧುಗಿರಿ ಫೀಡರ್ ಕಾಲುವೆ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿ’ ಎಂದರು.

‘ಮೊದಲನೇ ಹಂತದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತಿವೆ. ಈ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮಾರ್ಚ್ 2022ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಮುಂಗಾರಿನ ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ನೀರು ಎತ್ತಲು ಯೋಜಿಸಲಾಗಿದೆ’ ಎಂದು ಸಚಿವರು ವಿವರಿಸಿದರು.

ಅತ್ಯಾಚಾರ: ರಮೇಶ್‌ ಕುಮಾರ್ ಮಾತಿಗೆ ಟೀಕೆ
ಅತ್ಯಾಚಾರದ ಕುರಿತು ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಅವರು ಗುರುವಾರ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಟೀಕೆಗೆ ಗುರಿಯಾಗಿದೆ.

ರಮೇಶ್ ಕುಮಾರ್‌ ಹೇಳಿದ್ದು ಇಷ್ಟು– ‘ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದರು.

ಅತಿವೃಷ್ಟಿಯ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಮಾತನಾಡಬೇಕು ಎಂದು ಸಭಾಧ್ಯಕ್ಷರ ದುಂಬಾಲು ಬಿದ್ದರು. ವಿರೋಧಪಕ್ಷ ಮತ್ತು ಆಡಳಿತ ಪಕ್ಷದವರು ಮಾತನಾಡುವ ಸದಸ್ಯರ ಸಂಖ್ಯೆಯನ್ನು ಮಿತಿಗೊಳಿಸದೇ ಸುಮ್ಮನಾದರು.

ಆಗ ಸಭ್ಯಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಾಲ್ಕು ದಿನಗಳಿಂದ ಚರ್ಚೆ ನಡೆಯುತ್ತಿದೆ. ಸರ್ಕಾರ ಉತ್ತರ ಕೊಡಬೇಕು. ಈ ರೀತಿ ಆದರೆ ಯಾವುದೇ ಕಾರ್ಯಕಲಾಪ ನಡೆಸಲು ಆಗುವುದಿಲ್ಲ. ಈಗಾಗಲೇ 25 ಶಾಸಕರು ಮಾತನಾಡಿದ್ದಾರೆ’ ಎಂದರು.

ಆಗಲೂ ಶಾಸಕರು ಮಾತನಾಡುವುದಕ್ಕಾಗಿ ಕೈ ಎತ್ತುವುದನ್ನು ಮುಂದುವರಿಸಿದರು. ಇದರಿಂದ ಬೇಸತ್ತ ಸಭಾಧ್ಯಕ್ಷರು, ಎಷ್ಟು ಶಾಸಕರು ಬೇಕಾದರೂ ಮಾತನಾಡಲಿ, ನಾನು ಕೇಳುತ್ತಾ ಆನಂದಿಸುವುದನ್ನು ಬಿಟ್ಟರೆ ಇನ್ನೇನು ಮಾಡಲಿ. ಅಜೆಂಡಾದಲ್ಲಿರುವ ಬೇರೆ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ.’ ಎಂದರು.

ಅದೊಂದು ಮಾತಿದೆಯಲ್ಲ ರಮೇಶ್‌ ಕುಮಾರ್ ಅವರೇ ಎಂದು ಕಾಗೇರಿ ಹೇಳಿದರು. ಆಗ ಸಾಂದರ್ಭಿಕವಾಗಿ ರಮೇಶ್‌ಕುಮಾರ್‌ ಮೇಲಿನಂತೆ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT