ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಚಾಮರಾಜನಗರ ಕ್ಷೇತ್ರ: ಸೋತವರಿಗೆ ಟಿಕೆಟ್‌, ಗೆದ್ದವರಿಗೆ ನಿರಾಸೆ

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಇಬ್ಬರು ಹೊಸಬರು; ಒಬ್ಬರು ಹಳಬರು
Last Updated 23 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಹಿಂದಿನ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್‌ ಲಭಿಸಿದ್ದು, ಗೆದ್ದವರಿಗೆ ನಿರಾಸೆಯಾಗಿದೆ.

2015ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಆರ್‌.ರಘು (ಕೌಟಿಲ್ಯ) ಅವರಿಗೆ ಮತ್ತೆ ಟಿಕೆಟ್‌ ಲಭಿಸಿದೆ. ಆ ಚುನಾವಣೆಯಲ್ಲಿ ಗೆದ್ದಿದ್ದರೂ ಸಂದೇಶ್‌ ನಾಗರಾಜ್‌ (ಜೆಡಿಎಸ್‌) ಹಾಗೂ ಆರ್‌.ಧರ್ಮಸೇನ (ಕಾಂಗ್ರೆಸ್‌) ಟಿಕೆಟ್‌ ವಂಚಿತರಾಗಿದ್ದಾರೆ.

ಸಂದೇಶ್‌ ನಾಗರಾಜ್‌ 2009ರ ಚುನಾವಣೆಯಲ್ಲೂ ಹಾಗೂ ಧರ್ಮಸೇನ 2013ರ ಉಪಚುನಾವಣೆಯಲ್ಲೂ ಗೆದ್ದು ಮೊದಲ ಬಾರಿ ವಿಧಾನ ಪರಿಷತ್‌
ಪ್ರವೇಶಿಸಿದ್ದರು.

ಜೆಡಿಎಸ್‌ನಿಂದ ಸಿ.ಎನ್‌.ಮಂಜೇಗೌಡ ಹಾಗೂ ಕಾಂಗ್ರೆಸ್‌ನಿಂದ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್‌ ನೀಡಿದ್ದು ಇಬ್ಬರೂ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ.

ಸಿದ್ದರಾಮಯ್ಯ ಆಪ‍್ತರಾಗಿದ್ದ ಮೈಸೂರು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜೇಗೌಡ ಅವರು ಕಾಂಗ್ರೆಸ್‌ ತೊರೆದ ದಿನವೇ ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಅವರು ಮೊದಲು ಬಿಜೆಪಿ, ನಂತರ ಜೆಡಿಎಸ್‌, ಬಳಿಕ ಕಾಂಗ್ರೆಸ್‌ ಸುತ್ತಿ ಮತ್ತೆ ಜೆಡಿಎಸ್‌ಗೆ ಬಂದಿದ್ದಾರೆ.

ಆರ್‌.ಧರ್ಮಸೇನ ಅವರ ಸ್ಪರ್ಧೆಗೆ 33 ವರ್ಷಗಳ ಕುಟುಂಬ ರಾಜಕಾರಣ ಅಡ್ಡಿಯಾಯಿತು. ತಿ.ನರಸೀಪುರದ ಎನ್‌.ರಾಚಯ್ಯ ಕುಟುಂಬದವರಿಗೆ 1988ರಿಂದ ಟಿಕೆಟ್‌ ನೀಡಲಾಗಿತ್ತು. ಅದಕ್ಕೆ ಈ ಬಾರಿ ಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗಿದ್ದರಿಂದ ನಿವೃತ್ತ ಆರೋಗ್ಯಾಧಿಕಾರಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ತಿಮ್ಮಯ್ಯ ಅವರಿಗೆ ಟಿಕೆಟ್‌ ಒಲಿದಿದೆ. ಅವರು ಕೂಡ ದಲಿತರಲ್ಲಿ ‘ಎಡಗೈ’ ಸಮುದಾಯಕ್ಕೆ ಸೇರಿದವರು.

ಸಂದೇಶ್‌ ನಾಗರಾಜ್‌ ಜೆಡಿಎಸ್‌ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದು ಬಿಜೆಪಿ ಸಂಪರ್ಕದಲ್ಲಿದ್ದರು. ಕೊನೆಯಲ್ಲಿ ಬಿಜೆಪಿ ಟಿಕೆಟ್‌ ಸಿಗಲಿಲ್ಲ; ಇತ್ತ ಜೆಡಿಎಸ್‌ಗೆ ಮರಳುವ ಪ್ರಯತ್ನವೂ ಈಡೇರಲಿಲ್ಲ. ಹೀಗಾಗಿ, ಅವರು ಈ ಬಾರಿ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಘು ಅವರು ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಮೂಲಕ ಮತ್ತೆ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

‌‘ದೇಶದ ರಾಜಕಾರಣದಲ್ಲಿ ಕುಟುಂಬದ ಹೊರಗೆ, ಒಳಗೆ ಎನ್ನುವುದಕ್ಕೆ ಅರ್ಥವಿಲ್ಲ. ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ಹಾಲಿ ಸದಸ್ಯ ಧರ್ಮಸೇನ ಒಳ್ಳೆಯವರು. ಕಾಂಗ್ರೆಸ್‌ಗೆ ನಿಷ್ಠಾವಂತರು. ಆದರೆ, ಬಹುತೇಕ ಮುಖಂಡರು ಈ ಬಾರಿ ಬದಲಾವಣೆ ಬಯಸಿದರು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಸಮರ್ಥಿಸಿಕೊಂಡರು.

‘ಹಿಂದೆ ನಮ್ಮ ಪಕ್ಷದಲ್ಲೇ ಇದ್ದ ಮಂಜೇಗೌಡ ಮತ್ತೆ ಬಂದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಾ.ತಿಮ್ಮಯ್ಯ ಕೂಡ ನಮ್ಮ ಪಕ್ಷದಲ್ಲಿದ್ದವರೇ. ಸಂದೇಶ್‌ ನಾಗರಾಜ್‌ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಹೇಳಿದರು.

‘ರಘು ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಎಲ್ಲ ಸದಸ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಗೆಲುವಿಗಾಗಿ ಈಗಾಗಲೇ ತಂತ್ರ ರೂಪಿಸಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿಸಚಿವ ಎಸ್‌.ಟಿ.ಸೋಮಶೇಖರ್‌
ಪ್ರತಿಕ್ರಿಯಿಸಿದರು.

***

ನಾನು ಮಾಜಿ ಯೋಧ. ಜೆಡಿಎಸ್‌ ನಲ್ಲಿದ್ದೆ. ಮತ್ತೆ ಅದೇ ಪಕ್ಷ ಸೇರಿರುವೆ. ಕುಮಾರಣ್ಣನನ್ನು ಮತ್ತೊಮ್ಮೆ ಸಿ.ಎಂ ಮಾಡುವುದೇ ನಮ್ಮ ಗುರಿ,

-ಸಿ.ಎನ್‌.ಮಂಜೇಗೌಡ, ಜೆಡಿಎಸ್‌ ಅಭ್ಯರ್ಥಿ

***

ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಆಲಿಸಿ ಪಕ್ಷ ಟಿಕೆಟ್‌ ನೀಡಿದೆ. ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ, ಸಾಮಾಜಿಕ ಕಳಕಳಿ ಇದೆ.

-ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ

***

ಹಿಂದಿನ ಚುನಾವಣೆಯಲ್ಲಿ ಸೋತಿದ್ದರೂ ಕ್ಷೇತ್ರದೊಂದಿಗೆ ಹಾಗೂ ಪಕ್ಷಾತೀತವಾಗಿ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಒಡನಾಟವಿದೆ

-ಆರ್‌.ರಘು (ಕೌಟಿಲ್ಯ), ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT