ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ರಾಜ್ಯ ನಮ್ಮ ಗುರಿ: ಸ್ವಾತಂತ್ರೋತ್ಸವ ಭಾಷಣದಲ್ಲಿ ‌ಬಿ.ಎಸ್‌. ಯಡಿಯೂರಪ್ಪ

ಕೋವಿಡ್‌ ಆತಂಕ ಬೇಡ; ಜಾಗರೂಕತೆಯಿಂದ ಜೀವನ ನಡೆಸಿ
Last Updated 15 ಆಗಸ್ಟ್ 2020, 5:12 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕಿನ ಬಗ್ಗೆ ಜನರು ಆತಂಕ ಅಥವಾ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಜೀವನ ನಡೆಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳು, ಘೋಷಿಸಿದ ಪ್ಯಾಕೇಜ್‍ಗಳ ಜೊತೆಗೆ ರಾಜ್ಯ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಹಾಗೂ ಪ್ರಕಟಿಸಿದ ಪ್ಯಾಕೇಜ್‍ಗಳು ಈ ಸಾಂಕ್ರಾಮಿಕ ರೋಗ ತಂದೊಡ್ಡಿದ ಸಂಕಷ್ಟಗಳ ತೀವ್ರತೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಆದರೆ, ಜನರು ಜಾಗೃತಿ ವಹಿಸದಿದ್ದರೆ ಸರ್ಕಾರದ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡುವುದಿಲ್ಲ. ಆದ್ದರಿಂದ, ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

‘ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ‘ಕಲ್ಯಾಣ ರಾಜ್ಯ’ ಕಟ್ಟುವುದೇ ನಮ್ಮ ಗುರಿ. ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದ ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜಧರ್ಮ ಪಾಲನೆಗೆ ನಾವು ಮುಂದಾಗಿದ್ದೇವೆ’ ಎಂದರು.

‘ಹೊಸತಾಗಿ ತಂದ ಕೈಗಾರಿಕಾಭಿವೃದ್ಧಿ ಸುಗಮಗೊಳಿಸುವ ಕಾಯ್ದೆ (ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಆಕ್ಟ್) ಮೂಲಕ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯುವ ಜನತೆಯಲ್ಲಿ ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸಲಾಗುತ್ತಿದೆ. ಜೊತೆಗೆ, ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ ಖರೀದಿಸುವುದಕ್ಕೆ ಪ್ರಸ್ತುತ ಇರುವ ನಿಯಮಾವಳಿ ಸರಳೀಕರಿಸಲಾಗಿದೆ. ರೈತರು ಹಾಗೂ ಉದ್ಯಮಿಗಳಿಗೆ ಪರಸ್ಪರ ಲಾಭ ದೊರೆಯುವಂತೆ ಭೂಮಿಯನ್ನು ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ರಾಜ್ಯದಾದ್ಯಂತ ಉದ್ಯೋಗಾವಕಾಶಗಳನ್ನು ಸೃಜಿಸುವತ್ತ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮರಳಿರುವವರಿಗೆ ಅವರು ಇರುವಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಸವಾಲುಗಳ ಎದುರು ಹಿಮ್ಮೆಟ್ಟದೆ, ಪ್ರಗತಿಯತ್ತ ದೃಢ ಹೆಜ್ಜೆಗಳನ್ನು ಇಟ್ಟಿದ್ದೇವೆ’ ಎಂದರು.

‘ದಾಖಲೆಯ ಮಳೆ ಮತ್ತು ಪ್ರವಾಹದ ಜೊತೆಗೆ ಬರ ಹಾಗೂ ಕೋವಿಡ್ ದೊಡ್ಡ ಸವಾಲು ತಂದೊಡ್ಡಿದೆ. ಆರ್ಥಿಕ ಹಿಂಜರಿಕೆ, ಉದ್ಯೋಗ ಕಡಿತ ಹಾಗೂ ಬೊಕ್ಕಸಕ್ಕೆ ರಾಜಸ್ವ ನಷ್ಟ, ಸ್ಥಬ್ಧವಾದ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಸ್ಥಾಪಿಸಲು ಹಾಗೂ ಸಂಕಷ್ಟಕ್ಕೆ ಈಡಾದ ಜನರಲ್ಲಿ ಭರವಸೆ ಮೂಡಿಸಲು ಸರ್ಕಾರ ಹಲವು ಕ್ರಮ ಹಾಗೂ ಉಪಕ್ರಮಗಳನ್ನು ಜಾರಿಗೊಳಿಸಿದೆ’ ಎಂದರು.

‘ಕೋವಿಡ್-19 ನಿರ್ವಹಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಚಿವರ ಕಾರ್ಯಪಡೆ, ಪರಿಣಿತ ವೈದ್ಯರ ಕಾರ್ಯಪಡೆ ಮತ್ತು ಅಧಿಕಾರಿಗಳ ಕಾರ್ಯಪಡೆಗಳನ್ನು ರಚಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ’ ಎಂದರು.

‘ಆಯುಷ್ಮಾನ್ ಭಾರತ ಯೋಜನೆಯಡಿ 1.31 ಕೋಟಿಗಿಂತಲೂ ಹೆಚ್ಚು ಜನರಿಗೆ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿದೆ. ₹ 1694 ಕೋಟಿವೆಚ್ಚದಲ್ಲಿ ಈವರೆಗೆ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ’

‘ಕೊರೊನಾ ಹಿನ್ನೆಲೆಯಲ್ಲಿ ಉದ್ದಿಮೆ, ವ್ಯಾಪಾರ ಮತ್ತು ವಹಿವಾಟು ಸ್ಥಗಿತಗೊಂಡಾಗ ವಲಸೆ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು, ರೈತರು, ಪುಷ್ಪೋದ್ಯಮವನ್ನು ಅವಲಂಬಿಸಿದವರು, ನೇಕಾರರು ಮತ್ತು ಮೀನುಗಾರರು, ನಿರ್ಮಾಣ ವಲಯದ ಕಾರ್ಮಿಕರು, ಕ್ಷೌರಿಕರು ಮತ್ತು ಅಗಸರು, ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರೂ ಒಳಗೊಂಡಂತೆ ವಿವಿಧ ವೃತ್ತಿಗಳನ್ನು ನಂಬಿ ಬದುಕು ನಡೆಸುತ್ತಿದ್ದ ಅಸಂಘಟಿತ ವಲಯದ ದುರ್ಬಲರ ನೆರವಿಗಾಗಿ ಒಟ್ಟು ₹ 3187 ಕೋಟಿ ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ’

‘ಕೋವಿಡ್-19 ರ ಕರ್ತವ್ಯನಿರತ ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಮಿಕರು, ಪೊಲೀಸರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಿ, ಅವರು ಕೋವಿಡ್ ಬಾಧಕರಾದರೆ ಉಚಿತ ಆರೈಕೆಯನ್ನು ಒದಗಿಸಲು ಮತ್ತು ಮೃತಪಟ್ಟಲ್ಲಿ ಕುಟುಂಬಸ್ಥರಿಗೆ ₹ 30 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರದ ವತಿಯಿಂದ ನಿರ್ಧರಿಸಲಾಗಿದೆ. ಈ ಸುಸಂದರ್ಭದಲ್ಲಿ ಇವರೆಲ್ಲರ ಶ್ರಮ ಮತ್ತು ಪರಿಶ್ರಮವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ. ಗಡಿಗಳನ್ನು ಕಾಯುವ ಯೋಧರಷ್ಟೇ ಸಮರ್ಥವಾಗಿ ಕೊರೊನಾ ಸೇನಾನಿಗಳೂ ಶ್ರಮಿಸಿರುವುದು ನಾಡಿನ ಜನರ ಕೃತಜ್ಞತೆಗೂ ಪಾತ್ರವಾಗಿದೆ’ ಎಂದರು.

‘ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೂ ಆನ್‍ಲೈನ್ ಶಿಕ್ಷಣ ಲಭ್ಯವಾಗಿಸಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಮನೆಯಂಗಳಕ್ಕೆ ಶಿಕ್ಷಕರು ಬಂದು ಕಲಿಕೆಗೆ ತೊಂದರೆಯಾಗದಂತೆ ಶ್ರಮ ವಹಿಸುತ್ತಿದ್ದಾರೆ’

‘ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಇಚ್ಚೆಯಂತೆ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನೀತಿಯಲ್ಲಿ ಮಾರ್ಪಾಡು ತರಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಮಾರಾಟ ಕರ (ಶುಲ್ಕ) ವನ್ನು ಶೇಕಡಾ 1.50 ರಿಂದ ಶೇಕಡಾ 0.35 ಕ್ಕೆ ಇಳಿಸಿದ್ದೇವೆ. ಈ ಎರಡೂ ಕ್ರಮಗಳಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಯಲಿದೆ ಹಾಗೂ ಆದಾಯವೂ ಹೆಚ್ಚಾಗಲಿದೆ’ ಎಂದರು.

‘ಅಂತರ್ಜಲ ನೀರಿನ ಸುಸ್ಥಿರ ನಿರ್ವಹಣೆಯಲ್ಲಿ ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗೆ ಸಮುದಾಯ ಸಹಭಾಗಿತ್ವದಲ್ಲಿ ಒತ್ತು ನೀಡುವ ಅಟಲ್ ಭೂ ಜಲ್ ಯೋಜನೆಯನ್ನು ರಾಜ್ಯದಲ್ಲಿ ₹ 1200 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯತಿಗಳಲ್ಲಿ 39,703 ಚದರ ಕಿ.ಮೀ ಪ್ರದೇಶವು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿಗೆ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಕರ್ನಾಟಕ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲು ಪೂರಕವಾಗುವಂತೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘವನ್ನು ಆರಂಭಿಸಲಾಗಿದೆ. ಈ ಸಂಘಕ್ಕೆ ₹ 500 ಕೋಟಿ ಅನುದಾನದ ಯೋಜನೆಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ರಾಜ್ಯದಲ್ಲಿ ಕಲಬುರ್ಗಿ, ಬೀದರ್ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಅಲ್ಲದೆ, ಶಿವಮೊಗ್ಗ ಕಿರು ವಿಮಾನ ನಿಲ್ದಾಣ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕಾರವಾರ ಹಾಗೂ ವಿಜಯಪುರ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಆರಂಭಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಕಾನೂನು ಹಾಗೂ ಸುವ್ಯವಸ್ಥೆಗೆ ಕ್ರಮ ವಹಿಸಲಾಗಿದ್ದು, ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ವಿವಿಧ ಕ್ರಮಗಳನ್ನು ಕೈಗೊಂಡು ಅಪರಾಧ ನಿಯಂತ್ರಣ, ಸೈಬರ್ ಅಪರಾಧಗಳ ತಡೆಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ’

‘ಉದ್ಯಾನನಗರಿ ಬೆಂಗಳೂರಿನ ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಮಾಜಿಕ ಮತ್ತು ಜೈವಿಕ ಮೂಲಸೌಲಭ್ಯಗಳ ಪುನಶ್ಚೇತನಕ್ಕೆ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 400 ಕಿ.ಮೀ ಉದ್ದದ ರಾಜಕಾಲುವೆಗಳಿದ್ದು, ಈ ನೀರ್ಗಾಲುವೆಗಳ ಹಸಿರೀಕರಣ, ಇಕ್ಕೆಲಗಳಲ್ಲಿ ಪಾದಚಾರಿ ಮತ್ತು ಬೈಸಿಕಲ್ ಪಥ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ. ಮೊದಲನೇ ಹಂತದಲ್ಲಿ ಧರ್ಮಾಂಬುಧಿ ಕೆರೆಯಿಂದ (ಪ್ರಸ್ತುತ ಕೆಂಪೇಗೌಡ ಬಸ್ ನಿಲ್ದಾಣ) ಬೆಳ್ಳಂದೂರು ಕೆರೆವರೆಗೆ ಪಾರಂಪರಿಕ ರಾಜ ಕಾಲುವೆಯ ಹಸಿರೀಕರಣ ಮಾಡಿ 36 ಕಿ.ಮೀ. ಉದ್ದದ ಕಾಲ್ನಡಿಗೆ ಹಾಗೂ ಬೈಸಿಕಲ್ ಪಥ ನಿರ್ಮಾಣ ಮಾಡುವ ಮೂಲಕ ನಗರದ ಸಾಮಾಜಿಕ ಮತ್ತು ಸಾಂಸ್ಕøತಿಕ ಸೌಂದರ್ಯಗಳನ್ನು ಉತ್ತಮಪಡಿಸಲು ಉದ್ದೇಶಿಸಲಾಗಿದೆ’ ಎಂದೂ ಹೇಳಿದರು.

‘ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2 ನ್ನು ಒಟ್ಟು ₹ 30,695 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿದ್ದು, 2024ರ ಜೂನ್ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಲು ಕರ್ನಾಟಕವು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಪಿಪಿಇ ಕಿಟ್‍ಗಳ ಉತ್ಪಾದನೆಯಿಂದ ಹಿಡಿದು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡುವುದು, ಸೌರ ವಿದ್ಯುತ್. ಆಟೋ ಮೊಬೈಲ್ ಹೀಗೆ ವಿವಿಧವಲಯಗಳಲ್ಲಿ ಸ್ವಾವಲಂಬಿಯಾಗುವ ಗುರಿ ಸಾಧಿಸುವುದು ಸರ್ಕಾರದ ಮುಖ್ಯ ಉದ್ದೇಶ. ಕೋವಿಡ್-19 ಸಮಯದಲ್ಲೂ ರಾಜ್ಯಮಟ್ಟದಲ್ಲಿ ₹ 27,000 ಕೋಟಿ ಮೊತ್ತದ, 101 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ’ ಎಂದರು.

‘ಕೊಡಗು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಸುಮಾರು 11 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು ₹ 984 ಕೋಟಿ ಅನುದಾನ ಲಭ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿ ಪರಿಸ್ಥಿತಿಯ ಅವಲೋಕನ ಹಾಗೂ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾ ಅಧಿಕಾರಿಗಳು ಮಳೆ ಮತ್ತು ಪ್ರವಾಹದ ಸಂಕಷ್ಟಕೊಳಗಾಗಿರುವ ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ನಾನು ಅವಿರತವಾಗಿ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT