ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದಕ್ಕಿಂತ ಹೆಚ್ಚುವರಿ ವೆಚ್ಚ: ಪೂರಕ ಅಂದಾಜು ಮಂಡನೆ

ಸಿಎಂ ಬೊಮ್ಮಾಯಿ ಕನಸಿನ ರೈತ ವಿದ್ಯಾನಿಧಿಗೆ ₹100 ಕೋಟಿ
Last Updated 17 ಡಿಸೆಂಬರ್ 2021, 21:15 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದಕ್ಕಿಂತ ₹10,265.33 ಕೋಟಿ ಹೆಚ್ಚುವರಿ ವೆಚ್ಚ ಮಾಡಲು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಸದನದ ಒಪ್ಪಿಗೆ ಪಡೆದಿದ್ದ ರಾಜ್ಯ ಸರ್ಕಾರ, ಈಗ ಮತ್ತೆ ₹3,574.67 ಕೋಟಿ ವೆಚ್ಚ ಮಾಡಲು ಈ ವರ್ಷದ ಎರಡನೇ ಪೂರಕ ಅಂದಾಜನ್ನು ಮಂಡಿಸಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪೂರಕ ಅಂದಾಜನ್ನುವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ಯಾವುದಕ್ಕೆ ವೆಚ್ಚ
* ಪಂಚಾಯತ್ ರಾಜ್ ಇಲಾಖೆಯ ಉಸ್ತುವಾರಿಯಲ್ಲಿರುವ ಗ್ರಂಥಾಲಯಗಳ ಮೇಲ್ವಿಚಾರಕರ ಗೌರವ ಸಂಭಾವನೆಗಾಗಿ ₹26.90 ಕೋಟಿ ಅನುದಾನ

* ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸಲಾಗುತ್ತಿರುವ ವೈದ್ಯಕೀಯ ಕಾಲೇಜಿಗೆ ಕೇಂದ್ರದ ಪಾಲು ₹50 ಕೋಟಿ ಹಾಗೂ ರಾಜ್ಯದ ₹33.32 ಕೋಟಿ ಸೇರಿ 83.32 ಕೋಟಿ ಒದಗಿಸಲಾಗಿದೆ. ಈ ಪೈಕಿ ₹10 ಕೋಟಿ ಪರಿಶಿಷ್ಟ ಜಾತಿ ವಿಶೇಷ ಯೋಜನೆ ಹಾಗೂ ಗಿರಿಜನ ಉಪಯೋಜನೆಯಿಂದ ಒದಗಿಸಲಾಗಿದೆ.

* ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಕ್ಕೆ ತಲಾ ₹50 ಸಾವಿರದಂತೆ ಪರಿಹಾರ ಪಾವತಿಸಲು ₹224.73 ಕೋಟಿ

* ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ₹100 ಕೋಟಿ ಹೆಚ್ಚುವರಿ ಅನುದಾನ

* ಅಬಕಾರಿ ಸಬ್‌ ಇನ್ಸ್‌ಪೆಕ್ಟರ್‌ಗಳು ಓಡಾಡಲು 316 ದ್ವಿಚಕ್ರ ವಾಹನ ಖರೀದಿಗೆ ₹2.41 ಕೋಟಿ

* ವಿಧಾನ ಪರಿಷತ್ತಿನ ಚುನಾವಣೆ ವೆಚ್ಚಕ್ಕಾಗಿ ₹7.5 ಕೋಟಿ

* 2021ರಲ್ಲಿ ನಡೆದ ಉಪಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಗಳಾಗಿ ಪಾಲ್ಗೊಂಡು, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ₹2.10 ಕೋಟಿ

* ಮತದಾರರ ಗುರುತಿನ ಚೀಟಿಯನ್ನು ತ್ವರಿತ ಅಂಚೆಸೇವೆ ಮೂಲಕ ಮತದಾರರ ವಿಳಾಸಕ್ಕೆ ಕಳಿಸಲು ₹4.25 ಕೋಟಿ

* ಡಿ.ಜೆ.ಹಳ್ಳಿ–ಕೆ.ಜಿ. ಹಳ್ಳಿ ಗಲಭೆಯಲ್ಲಿ ನಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲು ರಚಿಸಲಾಗಿರುವ ಕ್ಲೇಮ್ ಕಮಿಷನರ್‌ ಕಚೇರಿ ವೆಚ್ಚಕ್ಕೆ ₹50 ಲಕ್ಷ, ಮಹದಾಯಿ ಕ್ಲೇಮ್‌ ಕಮಿಷನರ್‌ ಕಚೇರಿ ವೆಚ್ಚಕ್ಕೆ₹33.87 ಲಕ್ಷ

* ಸಾರಿಗೆ ಸಂಸ್ಥೆಗಳ ನಷ್ಟ ಭರಿಸಲು ಬಿಎಂಟಿಸಿಗೆ ₹51.73 ಕೋಟಿ ಸೇರಿದಂತೆ ಒಟ್ಟು ನಾಲ್ಕು ಸಂಸ್ಥೆಗಳಿಗೆ ₹135.19 ಕೋಟಿ

* ಪರಿಹಾರಾತ್ಮಕ ನೆಡುತೋಪು ನಿರ್ವಹಣೆ ಯೋಜನೆಗಾಗಿ ಅರಣ್ಯ ಇಲಾಖೆಗೆ ₹156 ಕೋಟಿ

* ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲು ₹31.10 ಕೋಟಿ

* ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಕೋವಿಡ್–2 ಪ್ಯಾಕೇಜ್‌ನಡಿ ಒಂದು ಬಾರಿ ತಲಾ ₹2 ಸಾವಿರ ಪರಿಹಾರ ನೀಡಲು ಹೆಚ್ಚುವರಿಯಾಗಿ ₹24.70ಕೋಟಿ

*ವಿಜಯನಗರ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಪೀಠೋಪಕರಣ ಖರೀದಿಗೆ ₹4.76 ಕೋಟಿ, ಹೆಚ್ಚುವರಿ ಮೊತ್ತ ₹3.73 ಕೋಟಿ, ಜಿಲ್ಲಾಡಳಿತ ಭವನ, ಇತರೆ ಕಚೇರಿ, ವಸತಿ ಗೃಹಗಳ ಭೂಮಿ ಖರೀದಿಗೆ ₹10 ಕೋಟಿ ಸೇರಿ ಹೆಚ್ಚುವರಿಯಾಗಿ ₹73.90 ಕೋಟಿ ಹಾಗೂ ವಿವಿಧ ಕಚೇರಿಗಳಿಗಾಗಿ ಗುರುತಿಸಿರುವ ಕಟ್ಟಡಗಳ ದುರಸ್ತಿಗಾಗಿ ₹41.69 ಕೋಟಿ ಸೇರಿ ₹134 ಕೋಟಿ ಒದಗಿಸಲಾಗಿದೆ.

ಮುಖ್ಯಮಂತ್ರಿ ದಾವೋಸ್‌ ಭೇಟಿಗೆ ₹4 ಕೋಟಿ
ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ನಿಯೋಗದ ವೆಚ್ಚಕ್ಕಾಗಿ ₹4 ಕೋಟಿ ಭರಿಸಲು ಪೂರಕ ಅಂದಾಜಿನಲ್ಲಿ ಪ್ರಸ್ತಾವಿಸಲಾಗಿದೆ.

2022ರ ಜನವರಿಯಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳಿರುವ ನಿಯೋಗ ಇದರಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ಹೆಚ್ಚುವರಿ ಮೊತ್ತವನ್ನು ಅಂದಾಜಿನಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT