ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಕನ್ನಡಿಗರಿಗಾದ ಅಪಮಾನವೆಂದ ಸಿದ್ದರಾಮಯ್ಯ

Last Updated 8 ಜನವರಿ 2023, 2:43 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡಿರುವ ಅವಮಾನ ಎಂದು ಅವರು ಹೇಳಿದ್ದಾರೆ.

ದೇಶದ ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರವನ್ನು ಪರಿಗಣಿಸಿಲ್ಲ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿದೆ.

ಇದರ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡಿರುವ ಅವಮಾನ. ಕನ್ನಡಿಗರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು. ಸತತ ಹದಿಮೂರು ವರ್ಷಗಳ ಕಾಲ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಗಳು ನಮ್ಮ ಇತಿಹಾಸ ಸಂಸ್ಕೃತಿ ಮತ್ತು ಪ್ರಕೃತಿಯ ಹಿರಿಮೆಗಳನ್ನು ಪ್ರದರ್ಶಿಸಿ ಇಡೀ ದೇಶದ ಶ್ಲಾಘನೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿ ಕೇಂದ್ರ ಸರ್ಕಾರ ಈ ಗೌರವಕ್ಕೆ ಧಕ್ಕೆ ತಂದಿದೆ’ ಎಂದು ಆಕ್ರೋಶಗೊಂಡಿದ್ದಾರೆ.

‘ಕೇಂದ್ರ ಬಿಜೆಪಿ ಸರ್ಕಾರದ ಎದುರು ಮಾಂಡಲೀಕರಂತೆ ವರ್ತಿಸುತ್ತಿರುವ ಕರ್ನಾಟಕದ ಬಿಜೆಪಿ ನಾಯಕರು ರಾಜ್ಯದ ಘನತೆ-ಗೌರವಗಳನ್ನು ದೆಹಲಿ ನಾಯಕರಿಗೆ ಅಡ ಇಟ್ಟಿರುವುದು ದುರದೃಷ್ಟಕರ. ಮಾತು ಮಾತಿಗೆ ಡಬಲ್ ಎಂಜಿನ್ ಸರ್ಕಾರ ಎಂದು ರಾಜ್ಯದ ಬಿಜೆಪಿ ನಾಯಕರು ಎದೆ ಬಡಿದುಕೊಳ್ಳುತ್ತಿದ್ದಾರೆ. ರಾಜ್ಯದ ಹಕ್ಕು ಮತ್ತು ಗೌರವದ ಪ್ರಶ್ನೆ ಎದುರಾದಾಗ ಮಾತ್ರ ಕರ್ನಾಟಕದ ಎಂಜಿನ್ ಗುಜರಿ ಆಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಹಿಂದಿನ ಸಲ ಪ್ರಶಸ್ತಿ ಪಡೆದ ರಾಜ್ಯಗಳಿಗೆ ಅವಕಾಶ ನಿರಾಕರಣೆ

ರಕ್ಷಣಾ ಸಚಿವಾಲಯ ಸೆ.1ರಂದು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ತಬ್ಧಚಿತ್ರದ ವಿಷಯಗಳ ಕುರಿತು ಟಿಪ್ಪಣಿ ಕಳುಹಿಸುವಂತೆ ಕೋರಿತ್ತು. ನ. 24ರಂದು ನಡೆದ ಮೊದಲ ಆಯ್ಕೆ ಸಮಿತಿ ಸಭೆಯಲ್ಲಿ ಕರ್ನಾಟಕವೂ ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 23 ರಾಜ್ಯಗಳು ಭಾಗವಹಿಸಿದ್ದವು. ಡಿ. 1ರಂದು ನಡೆದ ಎರಡನೇ ಸಭೆಯಲ್ಲಿ ಕರ್ನಾಟಕದ ‘ನಾರಿಶಕ್ತಿ’ ವಿಷಯ ಅಂತಿಮಗೊಂಡಿತ್ತು. ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಕ್ಕೆ ಆಯ್ಕೆ ಸಮಿತಿ ಸಮ್ಮತಿ ಸೂಚಿಸಿತ್ತು.

ಎರಡನೇ ಸಭೆಯಲ್ಲಿ ಒಟ್ಟು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ಮೂರನೇ ಸುತ್ತಿನ ಆಯ್ಕೆ ಸಭೆಯಲ್ಲಿ ಕರ್ನಾಟಕದ ಮಾದರಿಗೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, ಕರ್ನಾಟಕವೂ ಸೇರಿ 20 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿದ್ದವು. ನಾಲ್ಕನೇ ಸಭೆಯಲ್ಲಿ ಕರ್ನಾಟಕದ ಕೀ-ಮಾಡಲ್‌ ಮತ್ತು ಸಂಗೀತಕ್ಕೆ ಒಪ್ಪಿಗೆ ಸೂಚಿಸಿ, ಕೆಲವು ಮಾರ್ಪಾಟು ಮಾಡುವಂತೆ ತಿಳಿಸಿತ್ತು. ಆದರೆ, ಐದನೇ ಸುತ್ತಿನ ಸಭೆಗೆ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಭಾ ಸೂಚನಾ ಪತ್ರ ಕಳುಹಿಸಲಾಗಿತ್ತು. ಈ ಪಟ್ಟಿಯಲ್ಲಿ ಕರ್ನಾಟಕ ಹೆಸರು ಇರಲಿಲ್ಲ.

ಕರ್ನಾಟಕವು 2022ರಲ್ಲಿ ಪ್ರಸ್ತುತ ಪಡಿಸಿದ್ದ ‘ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು’ ಸ್ತಬ್ಧಚಿತ್ರಕ್ಕೆ ಎರಡನೇ ಅತ್ಯುತ್ತಮ ಪ್ರಶಸ್ತಿ ಬಂದಿತ್ತು. ಉತ್ತರ ಪ್ರದೇಶಕ್ಕೆ ಪ್ರಥಮ ಮತ್ತು ಮೇಘಾಲಯಕ್ಕೆ ಮೂರನೇ ಪ್ರಶಸ್ತಿ ಬಂದಿತ್ತು. ಕಳೆದ ವರ್ಷ ಪ್ರಶಸ್ತಿ ಪಡೆದಿದ್ದ ಮೂರು ರಾಜ್ಯಗಳು ಈ ಬಾರಿ ಪರೇಡ್‌ಗೆ ಆಯ್ಕೆಯಾಗಿಲ್ಲ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT