ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ: ‘ಕಳಂಕ ಉಂಟಾದರೆ ಅಧಿಕಾರಿಗಳು ಹೊಣೆ’

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ 12ರಿಂದ ಪರೀಕ್ಷೆ
Last Updated 9 ಮಾರ್ಚ್ 2022, 20:28 IST
ಅಕ್ಷರ ಗಾತ್ರ

ಬೆಂಗಳೂರು:‘ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಇದೇ 12ರಿಂದ ನಡೆಯಲಿರುವ ಪರೀಕ್ಷೆಗೆ ವಿಚ್ಛಿದ್ರಕಾರಿ ಶಕ್ತಿಗಳು ಕಳಂಕ ತರಲು ಯತ್ನಿಸಿದರೆ, ಪರೀಕ್ಷಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠರನ್ನೇ ಹೊಣೆಗಾರರಾಗಿ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯ ಪರೀಕ್ಷಾ ಕೇಂದ್ರಗಳಿರುವ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಕಮಿಷನರ್ ಜೊತೆ ಬುಧವಾರ ಅವರು ವಿಡಿಯೊ ಸಂವಾದ ನಡೆಸಿದರು. ಇದೇ 12ರಿಂದ 16ರವರೆಗೆ ಪರೀಕ್ಷೆಗಳು ನಡೆಯಲಿವೆ.

‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹೊಡೆಯುವುದು ಸೇರಿದಂತೆ ಯಾವುದೇ ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದು. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು’ ಎಂದು ಸೂಚಿಸಿದರು.

‘33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಳು ಬೆಂಗಳೂರು ನಗರ, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿವೆ. ಇದಕ್ಕಾಗಿ 1,409 ಕೊಠಡಿ ಮೇಲ್ವಿಚಾರಕರು, 82 ವೀಕ್ಷಕರು, 82 ಕಸ್ಟೋಡಿಯನ್ಸ್ ಮತ್ತು 164 ಮಂದಿಯ ವಿಶೇಷ ಜಾಗೃತ ದಳ ರಚಿಸಲಾಗಿದೆ’ ಎಂದರು.

‘12 ಮತ್ತು 13ರಂದು 82 ಪರೀಕ್ಷಾ ಕೇಂದ್ರಗಳಲ್ಲಿ, 14ರಂದು 22, 15ರಂದು 24 ಮತ್ತು 16ರಂದು 8 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ಸೂಚಿತ ವಸ್ತ್ರಸಂಹಿತೆ ಪಾಲಿಸಬೇಕು. ಜತೆಗೆ, ಅಕ್ರಮ ತಡೆಗೆ ಸಹಾಯವಾಣಿ‌ (ಮೊಬೈಲ್ 99015-81708) ರಚಿಸಲಾಗಿದೆ’ ಎಂದೂ ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜುಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕನಿರ್ದೇಶಕಿ ರಮ್ಯಾ ಮತ್ತಿತರರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT