ಶನಿವಾರ, ಸೆಪ್ಟೆಂಬರ್ 25, 2021
30 °C
ಮೈಸೂರು, ಕೊಡಗು ಗಡಿಯಲ್ಲಿ ತಪಾಸಣೆ ಚುರುಕು

ಕೇರಳ ಗಡಿ: ಹೆಚ್ಚಿದ ತಪಾಸಣೆ- ದಕ್ಷಿಣ ಕನ್ನಡ: ಪ್ರತ್ಯೇಕ ಮಾರ್ಗಸೂಚಿಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು/ಮಡಿಕೇರಿ/ಚಾಮರಾಜನಗರ: ಕೇರಳ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದಂತೆ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು, ತಪಾಸಣೆಯನ್ನು ಚುರುಕುಗೊಳಿಸಲಾಗಿದೆ.

ಕೊಡಗು ಜಿಲ್ಲೆಯ ಕರಿಕೆ, ಮಾಕುಟ್ಟ ಹಾಗೂ ಕುಟ್ಟ ಗಡಿ ಪ್ರದೇಶ, ಮೈಸೂರು ಜಿಲ್ಲೆಯ ಬಾವಲಿ ಚೆಕ್‌ಪೋಸ್ಟ್‌ ಹಾಗೂ ಚಾಮರಾಜನಗರ ಜಿಲ್ಲೆಯ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ತಪಾಸಣಾ ಕೇಂದ್ರವನ್ನು ತೆರೆದು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಭಾಗದಲ್ಲಿ ಶನಿವಾರ ವಾಹನಗಳನ್ನು ತಡೆದ ಸಿಬ್ಬಂದಿಯು ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಆರ್‌ಟಿ–ಪಿಸಿಆರ್‌ ವರದಿ ಕಡ್ಡಾಯಗೊಳಿಸಿರುವ ಕುರಿತು ವಾಗ್ವಾದ ನಡೆಯಿತು. 

‘ಕೇರಳದಿಂದ ಬರುವವರು ಎರಡು ಡೋಸ್ ಲಸಿಕೆ ಪಡೆದಿದ್ದರೂ, ಕಳೆದ 72 ಗಂಟೆಗಳ ಅವಧಿಯಲ್ಲಿ ಪಡೆದಿರುವ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ತೋರಿಸುವುದನ್ನು ಕಡ್ಡಾಯಮಾಡಲಾಗಿದೆ. ವರದಿ ಇಲ್ಲದವರನ್ನು ವಾಪಸು ಕಳುಹಿಸಲಾಗುತ್ತಿದೆ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್‌ ತಿಳಿಸಿದರು.

ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರೂ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಿಂಗಳಿಂದ ಈಚೆಗೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿದ್ದವು. ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ.

ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಶುಕ್ರವಾರವೇ ಎಚ್‌.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್‌.ರವಿ ಶನಿವಾರ ಚೆಕ್‌ಪೋಸ್ಟ್‌ಗೆ ತೆರಳಿ ವೀಕ್ಷಿಸಿದರು.

ಗಡಿ ಭಾಗದಿಂದ ನಿತ್ಯವೂ 120ಕ್ಕೂ ಅಧಿಕ ದ್ವಿಚಕ್ರ ವಾಹನಗಳು. ತರಕಾರಿ ವಾಹನಗಳು ಜಿಲ್ಲೆಯೊಳಗೆ ಬರುತ್ತಿವೆ. ಬಸ್‌ಗಳ ಸಂಚಾರ ಕಡಿಮೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು