ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಆರ್ಥಿಕ ಅಸಮಾನತೆ: ಕಳವಳ

Last Updated 15 ಏಪ್ರಿಲ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು:‘ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಸಮಾನತೆಯ ಸಿದ್ಧಾಂತವನ್ನು ಸಮಾಜ ಇಂದಿಗೂ ತಿರಸ್ಕಾರದಿಂದಲೇ ನೋಡುತ್ತಿದೆ.ಸಮಾಜದಲ್ಲಿ ಸಮಾನ ಅವಕಾಶ ಸಿಕ್ಕಾಗ ಮಾತ್ರ ಅಂಬೇಡ್ಕರ್ ಜಯಂತಿ ಅರ್ಥಪೂರ್ಣ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಎಸ್.ಆರ್.ಕೇಶವ ಹೇಳಿದರು.

ನಾಗರಬಾವಿಯ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಶೇ 33ರಷ್ಟು ಆಸ್ತಿಯು ಶೇ 1ರಷ್ಟು ಜನರ ಬಳಿ ಕ್ರೋಡೀಕರಣಗೊಂಡಿದೆ.ದೇಶ ಆರ್ಥಿಕ ಅಸಮಾನತೆಯಿಂದ ಬಳಲುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಅವರ ಹೆಸರಿನಲ್ಲಿ ಲಾಭ ಪಡೆಯುವ ರಾಜಕೀಯ ಪಕ್ಷಗಳು ಅವರ ಆಶಯಗಳನ್ನು ಕಾರ್ಯಗತಗೊಳಿಸುವತ್ತ ಗಮನ ನೀಡಿದರೆ ಸಮಾಜಕ್ಕೆ ಒಳಿತಾಗುತ್ತದೆ. ಸಂವಿಧಾನ ರಚನೆಯಾಗಿರುವುದು ಸಮಾಜ ಹಾಗೂ ಎಲ್ಲ ಧರ್ಮದವರ ಅಭ್ಯುದಯಕ್ಕಾಗಿಯೇ ಹೊರತು ನಿರ್ದಿಷ್ಟ ಜಾತಿ, ಧರ್ಮಕ್ಕಲ್ಲ. ಹೆಚ್ಚು ವಿಷಯಗಳಲ್ಲಿ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಅವರನ್ನು ದಲಿತ ನಾಯಕನೆಂದು ಸೀಮಿತಗೊಳಿಸುವುದು ಸರಿಯಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದರು.

ಪಾಂಚಜನ್ಯ ವಿದ್ಯಾಪೀಠ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಟ್ರಸ್ಟಿ ಶಿವಮಲ್ಲು,‘ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜನರ ಅಭಿವೃದ್ಧಿ, ಸಮಾಜದ ಮುಖ್ಯ ವಾಹಿನಿಗೆ ತರಲು ಜನಸಂಖ್ಯೆಗೆ ಅನುಗುಣವಾಗಿ ನೀಡಿರುವ ಪ್ರಾತಿನಿಧ್ಯ’ ಎಂದರು.

‘ಆಳುವ ವರ್ಗದ ಹುನ್ನಾರದಿಂದ ಜಾತೀಯತೆ ಸೃಷ್ಟಿಯಾಯಿತು. ಸಾಮಾಜಿಕ ಸ್ವಾಸ್ಥ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾದ ಅಸ್ಪೃಶ್ಯತೆಯನ್ನು ಬುಡ ಸಮೇತ ಕಿತ್ತೊಗೆದರೆ, ದೇಶದ ಬೆಳವಣಿಗೆಯ ವೇಗ ಹೆಚ್ಚಾಗಲಿದೆ’ ಎಂದು ಹೇಳಿದರು.

ಟ್ರಸ್ಟ್‌ನ ಕಾರ್ಯದರ್ಶಿ ಎ.ಆರ್.ಕೃಷ್ಣಮೂರ್ತಿ,‘ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಅದರಂತೆ ಶಿಕ್ಷಣ ದಾಸೋಹದ ಉದ್ದೇಶದೊಂದಿಗೆ ಆರಂಭಗೊಂಡಿರುವ ಟ್ರಸ್ಟ್ ಸಾವಿರಾರು ವಿದ್ಯಾವಂತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ’ ಎಂದರು.

ಖಜಾಂಚಿ ಬಿ.ಎನ್.ಉಮೇಶ್, ಕಾಲೇಜಿನ ಪ್ರಾಂಶುಪಾಲರಾದ ಮೀನಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT