ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿ: 8 ವರ್ಷದ ಬಾಲಕನಿಗೆ ಅಸ್ಥಿಮಜ್ಜೆ ಕಸಿ ಯಶಸ್ವಿ

ಸಂಸ್ಥೆಯ ಸರ್ಕಾರಿ ಘಟಕದಲ್ಲಿ ನಡೆದ ಮೊದಲ ಕಸಿ
Last Updated 17 ಮೇ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು:ಲಿಂಫೋಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 8 ವರ್ಷದ ಬಾಲಕನಿಗೆಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಸ್ಥಿಮಜ್ಜೆ ಚಿಕಿತ್ಸಾ ಘಟಕದಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಸರ್ಕಾರಿ ಘಟಕದಲ್ಲಿ ನಡೆದ ಮೊದಲ ಕಸಿ ಇದಾಗಿದೆ.

ಸಂಸ್ಥೆಯಲ್ಲಿನ ಈ ಘಟಕಕ್ಕೆ ಕಳೆದ ಫೆಬ್ರವರಿಯಲ್ಲಿ ಚಾಲನೆ ನೀಡಲಾಗಿತ್ತು.ಖಾಸಗಿ ಆಸ್ಪತ್ರೆಗಳಲ್ಲಿ ₹ 50 ಲಕ್ಷದವರೆಗೂ ವೆಚ್ಚವಾಗುವ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆಯನ್ನುಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬದವರಿಗೆ ಈ ಘಟಕದ ಮೂಲಕ ಬಹುತೇಕ ಉಚಿತವಾಗಿ ಒದಗಿಸಲಾಗುತ್ತಿದೆ. ಈ ಕಸಿಗೆ ಈಗಾಗಲೇ 25 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ತುಮಕೂರಿನ ಜೀವನ್ ಕುಮಾರ್ ಎಂಬ ಬಾಲಕ ಈ ಘಟಕದಲ್ಲಿ ಕಸಿಗೆ ಒಳಪಟ್ಟಿದ್ದಾನೆ.ಸಂಸ್ಥೆಯ ನಿರ್ದೆಶಕ ಡಾ.ಸಿ.ರಾಮಚಂದ್ರ ಅವರ ನೇತೃತ್ವದಲ್ಲಿ ಲೀನು ಜಾಕೋಬ್, ಡಾ. ಸ್ಮಿತಾ ಸಲ್ಡಾನಾ ಹಾಗೂ ಡಾ. ವಸುಂಧರಾ ಅಸ್ಥಿಮಜ್ಜೆ ಕಸಿ ನಡೆಸಿದ್ದಾರೆ.

‘ಅಸ್ಥಿಮಜ್ಜೆ ಕಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಂಸ್ಥೆಯ ನಿಯಮಗಳ ಪ್ರಕಾರ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ, ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತ್ಯೇಕ ಘಟಕ ಪ್ರಾರಂಭಿಸಿ, ಕಸಿ ನಡೆಸಲಾಗುತ್ತಿದೆ’ ಎಂದು ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರವು 2018 ರಲ್ಲಿ ಬಿಪಿಎಲ್ ಕುಟುಂಬಗಳಿಗಾಗಿ ರಾಜ್ಯ ಅಂಗಾಂಗ ಕಸಿ ಯೋಜನೆ ಆರಂಭಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯಡಿ ಹಾಗೂ ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ಸದ್ಯಕ್ಕೆ ಎಲ್ಲ ತರಹದ ಅಸ್ಥಿಮಜ್ಜೆ ಚಿಕಿತ್ಸೆ ಉಚಿತವಾಗಿ ಲಭ್ಯವಾಗುತ್ತಿದೆ’ ಎಂದು ಹೇಳಿದ್ದಾರೆ.

ಎರಡು ವಿಧದ ಕಸಿ

‘ರೋಗಿಯ ದೇಹದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್ ಕಣಗಳನ್ನು ನಾಶಗೊಳಿಸಿ, ಅವರದೇ ದೇಹದ ಆರೋಗ್ಯ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆಯಲಾಗುತ್ತದೆ. ಕ್ಯಾನ್ಸರ್ ಕಣಗಳು ನಾಶವಾದ ಜಾಗದಲ್ಲಿ ಕಸಿ ಮಾಡಲಾಗುತ್ತದೆ. ₹ 7 ಲಕ್ಷದವರೆಗೆ ಈ ಮಾದರಿ ಕಸಿಯ ವೆಚ್ಚ ಭರಿಸಲಾಗುತ್ತದೆ.ಕ್ಯಾನ್ಸರ್ ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು ನಡೆಸುವ ಕಸಿಯಲ್ಲಿ ₹ 21 ಲಕ್ಷದವರೆಗೂ ಧನಸಹಾಯ ಸಿಗಲಿದೆ’ ಎಂದು ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.

‘ವಯಸ್ಕರ ಜತೆಗೆ ಮಕ್ಕಳಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಈ ರೋಗ ಹಾಗೂ ತಪಾಸಣೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಕ್ಯಾನ್ಸರ್ ಕೋಶಗಳನ್ನು ಎಷ್ಟು ಬೇಗ ಪತ್ತೆ ಮಾಡುತ್ತೇವೆಯೋ ಅಷ್ಟು ಬೇಗ ಗುಣಪಡಿಸಲು ಸಾಧ್ಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT