ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕವಾರು ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪನೆಗೆ ಕ್ರಮ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 23 ಆಗಸ್ಟ್ 2021, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಾದರಿಯಲ್ಲೇ ಪ್ರಾದೇಶಿಕವಾರು ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಿಳಿಸಿದರು.

ಇನ್ಫೊಸಿಸ್‌ ಪ್ರತಿಷ್ಠಾನದ ವತಿಯಿಂದ ಕಿದ್ವಾಯಿ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ಹೊರ ರೋಗಿಗಳ ವಿಭಾಗದ (ಇನ್ಫೊಸಿಸ್‌ ಒಪಿಡಿ) ನೂತನ ಕಟ್ಟಡ ಹಾಗೂ ವಿವಿಧ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಬೀದರ್‌ ಸೇರಿದಂತೆ ಹಲವು ಜಿಲ್ಲೆಗಳ ಬಡ ಜನರು ಕ್ಯಾನ್ಸರ್‌ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಅವರು ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಕಷ್ಟ ಪಡುವುದು ತಪ್ಪಬೇಕು. ಹೀಗಾಗಿ ಪ್ರದೇಶವಾರು ಆಸ್ಪತ್ರೆ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಜೊತೆಗೆ ಬೆಂಗಳೂರಿನ ಉತ್ತರ ಭಾಗದಲ್ಲೂ ಕ್ಯಾನ್ಸರ್‌ ಕೇಂದ್ರ ಆರಂಭಿಸಲು ಚಿಂತಿಸಲಾಗಿದೆ. ಇದರಿಂದ ಕಿದ್ವಾಯಿ ಸಂಸ್ಥೆ ಮೇಲಿನ ಒತ್ತಡ ತಗ್ಗಲಿದೆ’ ಎಂದರು.

‘ಕಲಬುರ್ಗಿಯಲ್ಲಿ ಕಿದ್ವಾಯಿ ಕೇಂದ್ರ ಇದೆ. ಶಿವಮೊಗ್ಗ ಮತ್ತು ಮೈಸೂರಿನಲ್ಲೂ ಆಸ್ಪತ್ರೆ ಸ್ಥಾಪನೆಗೆ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ–ಧಾರವಾಡದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುವ ಅಗತ್ಯ ಹೆಚ್ಚಿದೆ. ಇದಕ್ಕೆ ಬೇಕಿರುವ ಭೂಮಿ ಒದಗಿಸಲು ಹಾಗೂ ಇತರ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

‘ಕ್ಯಾನ್ಸರ್‌ ಪೀಡಿತರು ಔಷಧ ವೆಚ್ಚ ಭರಿಸಲು ಪರದಾಡುವ ಪರಿಸ್ಥಿತಿ ಇದೆ. ಅವರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಸಿಗುವಂತಾಗಬೇಕು. ಇದಕ್ಕಾಗಿ ಸೊಸೈಟಿಯೊಂದನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಸಿಎಸ್‌ಆರ್‌ ಹಾಗೂ ಸರ್ಕಾರಿ ನಿಧಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರದ ಜೊತೆಗೂ ಮಾತನಾಡುತ್ತೇನೆ. ಬೆಂಗಳೂರಿನಲ್ಲಿ ಆರ್‌ ಆ್ಯಂಡ್‌ ಡಿ ಕೇಂದ್ರ ಆರಂಭಿಸುವ ಅಗತ್ಯವೂ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಇ–ಹಾಸ್ಪಿಟಲೈಸೇಷನ್‌ ಸೇವೆ ಹಾಗೂ ಕಿದ್ವಾಯಿ ಸಂಸ್ಥೆಯ ವೆಬ್‌ಸೈಟ್‌ಗೂ ಚಾಲನೆ ನೀಡಲಾಯಿತು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ದಾನಿಗಳಾದ ಸುಧಾ ಹಾಗೂ ಮಜೀದ್‌ ಇದ್ದರು.

‘ಹಣ ಇರುವುದು ಜನರಿಗಾಗಿ’

‘ಹಣ ಇರುವುದು ಎಣಿಸಲಿಕ್ಕಲ್ಲ. ಹಣ ಇರುವುದು ಜನರಿಗಾಗಿ. ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವುದಕ್ಕೆ ಅದನ್ನು ಬಳಸಬೇಕು’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

‘ನಮ್ಮ ಪ್ರತಿಷ್ಠಾನವು ಬಡಜನರ ಹಿತಕ್ಕಾಗಿ ಕೆಲಸ ಮಾಡುತ್ತದೆ. ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಕಿದ್ವಾಯಿಯಲ್ಲಿ ಸುಮಾರು ₹70 ಕೋಟಿ ವೆಚ್ಚದಲ್ಲಿ ಒಪಿಡಿ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT