ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿಶ್ವ ದರ್ಜೆಯ ಸೇವೆಗೆ ಕಿದ್ವಾಯಿ ಸಜ್ಜು

ಅತ್ಯಾಧುನಿಕ ಹೊರರೋಗಿ ವಿಭಾಗ ಸೇರಿದಂತೆ ವಿವಿಧ ಘಟಕಗಳು ನಿರ್ಮಾಣ
Last Updated 21 ಆಗಸ್ಟ್ 2021, 16:18 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಸಾಲಿನಲ್ಲಿ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯಡಿ ಅತೀ ಹೆಚ್ಚು ಮಂದಿಗೆ ಸೇವೆ ಒದಗಿಸಿದ್ದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಕ್ಕೆ ಅಣಿಗೊಂಡಿದೆ.

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್ಆರ್) ನೆರವಿನಿಂದ ನೂತನ ಹೊರರೋಗಿ ಘಟಕ (ಒಪಿಡಿ) ಹಾಗೂ ವಿವಿಧ ಚಿಕಿತ್ಸಾ ಘಟಕಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಉದ್ಘಾಟನೆಗೆ ಸಜ್ಜಾಗಿವೆ. ಇನ್ಫೊಸಿಸ್ ಪ್ರತಿಷ್ಠಾನದ ನೆರವಿನಿಂದ ₹ 50 ಕೋಟಿ ವೆಚ್ಚದಲ್ಲಿ ಒಪಿಡಿ ಘಟಕ ನಿರ್ಮಿಸಲಾಗಿದೆ. ಇದರಿಂದಾಗಿ ಹಳೆಯ ಕಟ್ಟಡದಲ್ಲಿರುವ ಒಪಿಡಿ ಘಟಕವು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಮಕ್ಕಳಿಗಾಗಿಗೇ 14 ಹಾಸಿಗೆಗಳ ಪ್ರತ್ಯೇಕ ತೀವ್ರ ನಿಗಾ ಘಟಕವನ್ನೂ ನಿರ್ಮಿಸಲಾಗಿದೆ.

ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಕ್‌ ಹಾಗೂ ಆಸ್ಪತ್ರೆಯ ಪ್ರವೇಶ ದ್ವಾರದ ವಿನ್ಯಾಸವನ್ನು ಬದಲಾಯಿಸಲಾಗಿತ್ತು. ಕಟ್ಟಡದ ಒಳಾಂಗಣ ವಿನ್ಯಾಸದಲ್ಲೂ ಮಾರ್ಪಾಡು ಮಾಡಲಾಗಿತ್ತು.

ಅಸ್ಥಿಮಜ್ಜೆ ಘಟಕ: ಕ್ಯಾನ್ಸರ್‌ ರೋಗಿಗಳಿಗೆ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಚಿಕಿತ್ಸೆಗಾಗಿ ಸಂಸ್ಥೆಯ ಆವರಣದಲ್ಲಿ ಅಸ್ಥಿಮಜ್ಜೆ ಘಟಕ ನಿರ್ಮಿಸಲಾಗಿದೆ. ರಾಜ್ಯದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಘಟಕ ಎಂಬ ಗೌರವಕ್ಕೆ ಕೂಡ ಇದು ಭಾಜನವಾಗಲಿದೆ. ₹ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 13 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಘಟಕವು 17 ಹಾಸಿಗೆಗಳನ್ನು ಒಳಗೊಂಡಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಇಲ್ಲಿ ಅಸ್ಥಿಮಜ್ಜೆ ಕಸಿ ಮಾಡಲಾಗುತ್ತದೆ.

ರಾಜ್ಯ ಸರ್ಕಾರವು 2018ರಲ್ಲಿ ಬಿಪಿಎಲ್‌ ಕುಟುಂಬಗಳಿಗಾಗಿ ‘ರಾಜ್ಯ ಅಂಗಾಂಗ ಕಸಿ ಯೋಜನೆ’ ಆರಂಭಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ 2019ರಲ್ಲಿ ಅಸ್ಥಿಮಜ್ಜೆ ಕಸಿಯನ್ನೂ ಸೇರ್ಪಡೆ ಮಾಡಲಾಗಿದ್ದು, ₹ 21 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ಈ ಘಟಕದಲ್ಲಿ ದೊರೆಯಲಿದೆ.

ಉದ್ಘಾಟನೆ ನಾಳೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿಇನ್ಫೊಸಿಸ್ ಪ್ರತಿಷ್ಠಾನದ ನಿರ್ಮಿಸಿರುವ ಹೊರರೋಗಿ ವಿಭಾಗ ಘಟಕ (ಓಪಿಡಿ ಬ್ಲಾಕ್) ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರಡುಚಾರ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಲೋಕಾರ್ಪಣೆಯಾಗುವ ಘಟಕ, ಸೌಲಭ್ಯಗಳು

* ಇನ್ಫೊಸಿಸ್ ಪ್ರತಿಷ್ಠಾನದ ಹೊರರೋಗಿ ವಿಭಾಗ ಘಟಕ

* ಅಸ್ಥಿಮಜ್ಜೆ ಕಸಿ ಘಟಕ

* ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಪೆಟ್‌ಸ್ಕ್ಯಾನ್ ಬಂಕರ್

* ಮಾಲಿಕ್ಯುಲರ್ ಆಂಕಾಲಜಿ ಪ್ರಯೋಗಾಲಯ

* ಮಕ್ಕಳ ಐಸಿಯು ಘಟಕ

* ಬ್ರಾಕಿಥೆರಪಿ

* ಸಿಟಿ ಸಿಮ್ಯುಲೇಟರ್

* ಸೆಂಟ್ರಲ್ ಮೆಡಿಕಲ್ ಸ್ಟೋರ್ಸ್ ಮತ್ತು ನವೀಕೃತ ಶಸ್ತ್ರಚಿಕಿತ್ಸಾ ಘಟಕ

* ನವೀಕೃತ ಡೇ ಕೇರ್ ವಾರ್ಡ್‌

* ನವೀಕೃತ ಸ್ಟೆಪ್‌ ಒನ್ ಐಸಿಯು

* ಸೆಂಟ್ರಲ್ ಸ್ಟೆರಿಲೈಸೇಷನ್ ಘಟಕ

* ಇ–ಆಸ್ಪತ್ರೆ ಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT