ಸೋಮವಾರ, ಅಕ್ಟೋಬರ್ 26, 2020
26 °C

ಕೊಡಗು: ಮೂರ್ನಾಡು–ನಾಪೋಕ್ಲು ಸಂಪರ್ಕ ಕಡಿತ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಮತ್ತೆ ಧಾರಾಕಾರವಾಗಿ ಮಳೆಯಾಗುತ್ತಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ತಲಕಾವೇರಿ, ಭಾಗಮಂಡಲ, ಸಂಪಾಜೆ, ಶಾಂತಳ್ಳಿ ಹಾಗೂ ನಾಪೋಕ್ಲು ಭಾಗದಲ್ಲಿ ಭಾನುವಾರ ರಾತ್ರಿಯೂ ಧಾರಾಕಾರ ಮಳೆಯಾಗಿತ್ತು. ಕಾವೇರಿ ನದಿಯ ಪ್ರವಾಹದಿಂದ ಮೂರ್ನಾಡು –ನಾಪೋಕ್ಲು ಹಾಗೂ ಅಯ್ಯಂಗೇರಿ –ಭಾಗಮಂಡಲ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಆಗಿದೆ.

ಗಾಳಿಗೆ, ಶನಿವಾರಸಂತೆ ಮಾರ್ಗದಲ್ಲಿ ಬೃಹತ್‌ ಮರವೊಂದು ಬಿದ್ದು ಕೆಲಕಾಲ ವಾಹನ ಸಂಚಾರ ಬಂದ್‌ ಆಗಿತ್ತು. ಹಾರಂಗಿ ಜಲಾಶಯ ಹೊರಹರಿವು ಹೆಚ್ಚಿಸಲಾಗಿದೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರಿ ದಿದೆ. ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಭಾರಿ ಗಾಳಿ ಜತೆ ಬಿರುಸಿನ ಮಳೆ ಸುರಿಯುತ್ತಿದ್ದು, 5 ಮನೆಗಳು ಹಾನಿಯಾಗಿವೆ. 

ಮಂಡ್ಯ ಸೇರಿದಂತೆ ಜಿಲ್ಲೆಯ ಶ್ರೀರಂಗಪಟ್ಟಣ, ಮಳವಳ್ಳಿ, ಮದ್ದೂರು ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ನಗರದ ವಿ.ವಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದು, ಏಳೆಂಟು ಬೈಕ್‌ಗಳು ಹಾಗೂ ಒಂದು ಕಾರು ಜಖಂಗೊಂಡಿವೆ.

ಧರೆ ಕುಸಿತದ ಭೀತಿ
(ಶಿವಮೊಗ್ಗ ವರದಿ): 
ಕಳೆದೆರಡು ದಿನಗಳಿಂದ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸೇರಿ ಉಳಿದೆಡೆ ಉತ್ತಮ ಮಳೆಯಾಗುತ್ತಿದೆ. ಕೆಲವು ಭಾಗಗಳಲ್ಲಿ ಮಳೆ, ಗಾಳಿಯಿಂದಾಗಿ ಅನಾಹುತ ಸಂಭವಿಸಿವೆ. 

ದ್ರಾ ಜಲಾಶಯಕ್ಕೆ 46 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, 55 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯಕ್ಕೆ 65 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ಭದ್ರಾವತಿಯ ಒಕ್ಕಲಿಗ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 32 ಕುಟುಂಬಗಳ 100ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಮೊತ್ತಮ್ಮೆ ಮುಳುಗಡೆಯಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಶೀತಗಾಳಿ ಜತೆ ಮಳೆ ಮುಂದುವರಿದಿದೆ. ಹುಲಿಕಲ್ ಮತ್ತು ನಾಗೋಡಿ ಘಾಟ್ ಪ್ರದೇಶದಲ್ಲಿ ಮಂಜು ಮುಸುಕಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭಾರಿ ಮಳೆ ಹಿನ್ನಲೆಯಲ್ಲಿ ಧರೆ ಕುಸಿತದ ಭೀತಿ ಆವರಿಸಿದೆ.

ರಸ್ತೆ ಸಂಪರ್ಕ ಸ್ಥಗಿತ: ಮಲೇಬೆನ್ನೂರು ಸಮೀಪ ತುಂಗಭದ್ರಾ ನದಿಯಲ್ಲಿ ಸೋಮವಾರ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿಗೆ ಫತ್ಯಾಪುರ ಮೂಲಕ ರಸ್ತೆ ಸಂಪರ್ಕ ಸ್ಥಗಿತವಾಗಿದೆ. ತುಮ್ಮಿನಕಟ್ಟೆ ಮೂಲಕ ವಾಹನ ಸಂಚರಿಸುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು