ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಕೊಡವ ಸಮುದಾಯ ಪ್ರತಿಭಟನೆ

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹ
Last Updated 21 ಡಿಸೆಂಬರ್ 2020, 11:11 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡವರೂ ಬೀಫ್‌ ತಿನ್ನುತ್ತಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ, ವಿವಿಧ ಕೊಡವ ಒಕ್ಕೂಟಗಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಸಿದ್ದರಾಮಯ್ಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಮಹಿಳಾ ಮೋರ್ಚಾದ ಮಾಜಿ ಜಿಲ್ಲಾ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ‘ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಕೊಡಗು ಬಂದ್‌ಗೂ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

‘ಕೊಡವರೂ ಗೋಮಾಂಸ ಸೇವಿಸುತ್ತಾರೆಂದು ಹೇಳಿ ಜಾತಿ ನಿಂದನೆ ಮಾಡಿದ್ದಾರೆ. ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನೂ ದಾಖಲು ಮಾಡಲಾಗುವುದು. ಕೊಡಗು ಭೇಟಿ ವೇಳೆ ಜಿಲ್ಲೆಯ ಗಡಿಯಾದ ಕೊಪ್ಪ ಗೇಟ್‌ನಲ್ಲೇ ಸಿದ್ದರಾಮಯ್ಯ ಅವರನ್ನು ತಡೆಯಲಾಗುವುದು. ಕೊಡಗಿಗೆ ಬರಲು ಬಿಡುವುದಿಲ್ಲ. ಪದೇ ಪದೇ ಕೊಡವರ ಬಗ್ಗೆ ಕೀಳಾಗಿ ಹೇಳಿಕೆ ನೀಡುತ್ತಾರೆ. ಕೊಡವ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಹೇಳಿದರು.

‘ಕೊಡವರು ಹಬ್ಬಗಳಲ್ಲಿ ಗೋವು ಪೂಜಿಸುತ್ತಾರೆ. ಸಿದ್ದರಾಮಯ್ಯ ಅವರ ವಿಲಕ್ಷಣ ಹೇಳಿಕೆಯಿಂದ ಇಡೀ ಸಮುದಾಯಕ್ಕೆ ನೋವಾಗಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು’ ಎಂದು ಕಾಂತಿ ಸತೀಶ್‌ ಆಗ್ರಹಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್‌.ದೇವಯ್ಯ ಮಾತನಾಡಿ, ‘ಸ್ವಾಭಿಮಾನಿ ಕೊಡವ ಸಮುದಾಯದ ಬಗ್ಗೆ ನೀಚ ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

ಸಮಾಜದ ಮುಖಂಡರಾದ ರೀನಾ ಪ್ರಕಾಶ್‌ ಮಾತನಾಡಿ, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಕೊಡವ ಸಮುದಾಯದ ಬಗ್ಗೆ ಅರಿವು ಇಲ್ಲದಿದ್ದರೆ ಓದಿ ತಿಳಿದುಕೊಳ್ಳಲಿ. ನಾವು ಗೋವಿಗೆ ತಾಯಿ ಸ್ಥಾನ ನೀಡಿದ್ದೇವೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ನಂತೆಯೇ ಕ್ರೂರಿ. ಅವರ ಹೇಳಿಕೆ ಖಂಡಿಸಿ ಕಾನೂನು ಹೋರಾಟ ಸಹ ನಡೆಸಲಾಗುವುದು. ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿರುವ ಕೊಡವ ಸಮಾಜದಿಂದಲೂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು ಮಾಡಲಾಗುವುದು’ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಎಚ್ಚರಿಸಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್‌ ದೇವಯ್ಯ ಅವರು, ‘ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದರೆ ಸಾಲದು. ಕೊಡಗಿಗೆ ಬಂದು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಬಾಳಗೋಡು ಫೆಡರೇಷನ್‌ ಆಫ್‌ ಕೊಡವ ಸಮಾಜದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸಿದ್ದು ಅದನ್ನು ತೆರವು ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್‌ ಬೋಪಯ್ಯ, ಪವನ್‌ ಪೆಮ್ಮಯ್ಯ, ಜಯ ಚಿಣ್ಣಪ್ಪ, ಅನಿತಾ ಪೂವಯ್ಯ ಪ್ರತಿಭಟನೆಯಲ್ಲಿ ಹಾಜರಿದ್ದರು.

ಸಿದ್ದರಾಮಯ್ಯ ವಿರುದ್ಧ ಪೊಲೀಸರಿಗೆ ದೂರು

‘ಕೊಡವರು ಗೋಮಾಂಸ ಸೇವಿಸುತ್ತಾರೆ’ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ವಿರುದ್ಧ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ. ‘ಕೊಡವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದಾರೆ. ಅವರು ವಿರುದ್ಧ ಪ್ರಕರಣ ದಾಖಲು ಮಾಡಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT