ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ವಲಸೆ ಕಾರ್ಮಿಕರ ‘ಸಂಜೀವಿನಿ ಬ್ರಿಗೇಡ್’

Last Updated 29 ಆಗಸ್ಟ್ 2020, 18:24 IST
ಅಕ್ಷರ ಗಾತ್ರ

ಕೊಪ್ಪಳ: ಸತತ ಬರ, ಬಡತನದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರ, ದೂರದ ಊರಿಗೆ ದುಡಿಯಲು ಹೋಗುವ ಜಿಲ್ಲೆಯ ವಲಸೆ ಕಾರ್ಮಿಕರಿಗೆ ಕಷ್ಟ, ಕೋಟಲೆಗಳು ಹೊಸದೇನಲ್ಲ. ಆದರೆ ತಿಂಗಳಾನುಗಟ್ಟಲೆ ಲಾಕ್‌ಡೌನ್ ಆಗಿದ್ದರಿಂದ ಇದ್ದ ಕೆಲಸ ಬಿಟ್ಟು ಮರಳಿ ಊರಿಗೆ ಬಂದು ಗ್ರಾಮದ ಸೇವೆ ಮಾಡಿ, ಸಾರ್ಥಕತೆ ಕಂಡಿರುವುದು ಅನನ್ಯ.

ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದಿಂದ ವಲಸೆ ಹೋಗಿದ್ದ ಕಾರ್ಮಿಕರೆಲ್ಲರೂ ಒಟ್ಟಾಗಿ ‘ಸಂಜೀವಿನಿ ಬ್ರಿಗೇಡ್’ ಹೆಸರಿನಲ್ಲಿ ಸಂಘ ರಚಿಸಿಕೊಂಡು, ಸ್ವಂತ ಹಣದಲ್ಲಿಯೇ ಗ್ರಾಮದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಿದರು. ಇದನ್ನು ಮಕ್ಕಳಿಂದಲೇ ಉದ್ಘಾಟನೆ ಮಾಡಿಸಿದ್ದು ವಿಶೇಷ. ಅಷ್ಟೇ ಅಲ್ಲದೆ, ಸ್ವಂತ ವೆಚ್ಚದಲ್ಲಿ ಗ್ರಾಮಸ್ಥರಿಗೆ ಆರೋಗ್ಯ ಕಾರ್ಡ್ ಮಾಡಿಸಿ, ವಿತರಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು 800 ಜನರಿಗೆ ಮಾಡಿಸಿಕೊಟ್ಟಿದ್ದಾರೆ.ಪ್ರತಿ ಕಾರ್ಡ್‌ಗೆ ₹15 ವೆಚ್ಚ ಮಾಡಿದ್ದಾರೆ. ರವಿ ಪಾತರದ, ಹೊಳೆಬಸಯ್ಯ, ಪವನ್ ಪೂಜಾರ ಅವರು ವಲಸೆ ಹೋಗಿದ್ದ ಕಾರ್ಮಿಕರನ್ನು ಈ ಸಾಮಾಜಿಕ ಕಾರ್ಯಕ್ಕೆ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

‘ಲಾಕ್ ಡೌನ್ ಸಂದರ್ಭದಲ್ಲಿ ದುಡಿಯುವ ಸ್ಥಳದಲ್ಲಿ ಅನೇಕ ತೊಂದರೆ ಅನುಭವಿಸಿದರೂ ಸ್ವಂತ ಊರಿಗೆ ಮರಳಿರುವ ಕಾರ್ಮಿಕರು, ಗ್ರಾಮದ ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ’ ಎನ್ನುತ್ತಾರೆ ಗ್ರಾಮಸ್ಥ ಕೋಟೇಶ ಕೋಮಲಾಪುರ.

‘ಕೆಲಸಕ್ಕಾಗಿ ದೂರ ಹೋದರೂ ಊರಿನ ಸೇವೆ ಮಾಡಬೇಕು ಎಂಬ ತುಡಿತ ಸದಾ ಇತ್ತು. ಲಾಕ್ ಡೌನ್ ಅಂತಹ ಅವಕಾಶ ಒದಗಿಸಿತು. ನಮ್ಮ ಕಷ್ಟ ಮರೆತು ಊರಿನ ಹಿತದಲ್ಲಿ ಭಾಗಿಯಾಗಿದ್ದಕ್ಕೆ ಸಂತಸ, ಸಂತೃಪ್ತಿಯಿದೆ’ ಎನ್ನುತ್ತಾರೆ ರವಿ ಪಾತರದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT