ಮಂಡ್ಯ: ಹೆಗಲ ಮೇಲೆ ಕೈ ಇಟ್ಟ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಟು ಕೊಟ್ಟಿದ್ದಾರೆ. ಈ ಕುರಿತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಅವರು ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ.
ಶಿವಕುಮಾರ್ ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಅವರ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಡಿಕೆಶಿ ತಲೆಗೆ ಬಾರಿಸಿದ್ದಾರೆ.
'ನಿನಗೆ ಸಾಮಾನ್ಯ ಜ್ಞಾನ ಇಲ್ಲವೇ, ವಿಡಿಯೊ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೆಗಲ ಮೇಲೆ ಕೈ ಇಡುತ್ತೀಯಾ' ಎಂದು ಡಿಕೆಶಿ ಬೈದಿದ್ದಾರೆ.
ತಕ್ಷಣ ಆ ಕಾರ್ಯಕರ್ತ ಹಿಂದೆ ಸರಿದಿದ್ದಾರೆ. ಘಟನೆಯಿಂದ ಅಲ್ಲಿ ಇದ್ದವರೆಲ್ಲರೂ ತಬ್ಬಿಬ್ಬಾಗಿದ್ದಾರೆ.
ಬಿಜೆಪಿ ಖಂಡನೆ: ಘಟನೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ 'ಡಿ.ಕೆ.ಶಿವಕುಮಾರ್ ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಮಾಧ್ಯಮಗಳ ಎದುರು ವ್ಯಕ್ತಿಗೆ ಹಲ್ಲೆ ನಡೆಸಿರುವುದು ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿ ಅವರೇ ನೀವು ರಾಜಕಾರಣಿಯೋ, ರೌಡಿಯೋ' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.