ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಗಳರ ಸಮಗ್ರ ಅಭಿವೃದ್ಧಿ: ಡಿ.ಕೆ. ಶಿವಕುಮಾರ್

Last Updated 14 ಮಾರ್ಚ್ 2023, 23:04 IST
ಅಕ್ಷರ ಗಾತ್ರ

ಕೆಂಗೇರಿ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ತಿಗಳ ಸಮುದಾಯದವರು ತಲೆತಲಾಂತರಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಕರಗದಂಥ ಆಚರಣೆಗಳಿಗೆ ಆರ್ಥಿಕ ಸಮಸ್ಯೆ ತಲೆದೋರದಂತೆ ಬಜೆಟ್‌ನಲ್ಲಿ ನಿರ್ದಿಷ್ಟ ಅನುದಾನ ಮೀಸಲಿರಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಮೈಸೂರು ರಸ್ತೆಯ ಪೂರ್ಣಿಮಾ ಕನ್ವೆನ್ಷನ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಕಾಂಗ್ರೆಸ್ ಮುಖಂಡರ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶೌರ್ಯ ಹಾಗೂ ಶ್ರಮಕ್ಕೆ ತಿಗಳ ಜನಾಂಗದವರು ಹೆಸರುವಾಸಿ’ ಎಂದು ಬಣ್ಣಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ರಾಜ್ಯದಲ್ಲಿ ಪಕ್ಷವು 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಬೆಂಗಳೂರು ನಗರದಲ್ಲಿ ಕನಿಷ್ಟ 20 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಸ್ಥಾನಮಾನ ಸಿಕ್ಕಿದ್ದು ಕಾಂಗ್ರೆಸ್ ಅವಧಿಯಲ್ಲಿ. ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಾಗೂ ಬಂಗಾರಪ್ಪ ಅವರ ರಾಜಕೀಯ ಬೆಳವಣಿಗೆಗೆ ನೀರೆರೆದ್ದು ಕಾಂಗ್ರೆಸ್ ಪಕ್ಷ. ಅನ್ಯಪಕ್ಷಗಳಿಗೆ ಈ ಬದ್ಧತೆ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ಪಿ.ಆರ್. ರಮೇಶ್, ‘ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 198 ಸಮುದಾಯಗಳ ಪೈಕಿ ತಿಗಳರು ಸೇರಿದಂತೆ 170ಕ್ಕೂ ಹೆಚ್ಚು ಸಮುದಾಯಗಳಿಗೆ ಮೀಸಲಾತಿಯ ಸಂಪೂರ್ಣ ಫಲಗಳು ಸಿಕ್ಕಿಲ್ಲ. ಇಂದಿಗೂ ಈ ಸಮುದಾಯಗಳು ಆರ್ಥಿಕವಾಗಿ ಹಾಗೂ ಶೈಕ್ಷಣಿಕ ಹಿಂದುಳಿದಿವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನಾಂಗದ ಬೆಳವಣಿಗೆಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಕಲ್ಯಾಣವಾಗಲಿದೆ’ ಎಂದರು.

‘ಎಲ್ಲ ಜಾತಿಗಳಲ್ಲೂ ಒಳ ಪಂಗಡಗಳಿವೆ. ಇತರೆ ಸಮುದಾಯಗಳಂತೆ ತಿಗಳರು ಸಂಘಟಿತರಾಗಬೇಕು. ಆಗ ಮಾತ್ರ ಸಂವಿಧಾನದತ್ತವಾಗಿ ದೊರಕುವ ಸವಲತ್ತು, ಪ್ರಾತಿನಿಧ್ಯಗಳನ್ನು ದೊರಕಿಸಿಕೊಳ್ಳಬಹುದು’ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು

ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು, ತುಮಕೂರು, ಗುಬ್ಬಿ ‌ಮತ್ತಿತರ ಪ್ರದೇಶಗಳ ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರು.

ವಿಧಾನ‌ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕರಾದ ಭೈರತಿ ಸುರೇಶ್, ಬಿ. ಶಿವಣ್ಣ, ಎಚ್. ನಾಗೇಶ್, ಎನ್‌.ಎ. ಹ್ಯಾರಿಸ್, ಮುಖಂಡರಾದ ಉಮಾಪತಿ, ಆರ್.ಕೆ. ರಮೇಶ್, ಬೆಳ್ತೂರು ರಮೇಶ್ ಮತ್ತಿತರರು ಇದ್ದರು.

ವೀರಶೈವ ಲಿಂಗಾಯತರಿಗೆ ಟಿಕೆಟ್‌–ಆಗ್ರಹ
ಬೆಂಗಳೂರು: ರಾಜಾಜಿನಗರ ಮತ್ತು ಚಿಕ್ಕಪೇಟೆ ಕ್ಷೇತ್ರದಿಂದ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರನ್ನು ಬೆಂಗಳೂರು ವೀರಶೈವ ಲಿಂಗಾಯತರ ಬಳಗ ಆಗ್ರಹಿಸಿದೆ.

‌ಸಿದ್ಧಗಂಗಾ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ‌ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಲಿಂಗಾಯತ ಮಹಾಸಭಾದ ಮಹಾಂತೇಶ್ ಪಾಟೀಲ, ‘ಈ ಬಾರಿ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ರಾಜಾಜಿನಗರದಲ್ಲಿ 51 ಸಾವಿರ ಲಿಂಗಾಯತ ಸಮುದಾಯದ ಮತದಾರರಿದ್ದಾರೆ’ ಎಂದು ಹೇಳಿದರು.

ವೀರಶೈವ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುಸ್ವಾಮಿ, ‘ಲಿಂಗಾಯತ ಸಮುದಾಯದ ಮುಖಂಡರಾದ ಪುಟ್ಟರಾಜು ಈ ಹಿಂದೆ ಉಪ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡಬೇಕು. ಚಿಕ್ಕಪೇಟೆ ಕ್ಷೇತ್ರದಿಂದ ಗಂಗಾಂಬಿಕೆ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಡಬೇಕು. ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದರು.

ವೀರಶೈವ ಲಿಂಗಾಯತರ ಬಳಗದ ಪ್ರಶಾಂತ್ ಕಲ್ಲೂರು, ಮಹಾಲಿಂಗಪ್ಪ, ಡಾ. ನಾಗರಾಜ್, ಶೋಭಾ, ಕೆಪಿಸಿಸಿ ಯುವ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT