ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆತ ನಮ್ಮ ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದೆ'–ಡಿಕೆಶಿ

Last Updated 11 ಜುಲೈ 2021, 10:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮನೆ ಹುಡುಗನಿಗೆ ನಾನು ಹೊಡೆದೆ. ತಪ್ಪು ಮಾಡಿದಾಗ ನಾವು ಬಯ್ಯುತ್ತೇವೆ. ಅದು ನಮ್ಮ ನಡುವಿನ ಪ್ರೀತಿಯ ಸಂಬಂಧ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಹೆಗಲ ಮೇಲೆ ಕೈ ಇಟ್ಟ ಪಕ್ಷದ ಕಾರ್ಯಕರ್ತರೊಬ್ಬರಿಗೆ ಡಿ.ಕೆ.ಶಿವಕುಮಾರ್‌ ಏಟು ಕೊಟ್ಟ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹರಿದಾಡಿತ್ತು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಆತ ನಮ್ಮ ದೂರದ ಸಂಬಂಧಿ. ಹೆಗಲ ಮೇಲೆ ಕೈ ಹಾಕಿದಾಗ ಬೇರೆಯವರು ಏನು ತಿಳಿಯುತ್ತಾರೆ ಎಂದು ಬೈದೆ. ಜೋರಾಗಿ ಹೊಡೆದದ್ದೂ ನಿಜ. ನಿಮ್ಮ ಖುಷಿಗೆ ನೀವು (ಮಾಧ್ಯಮಗಳು) ಅದನ್ನು ತೋರಿಸುತ್ತಿದ್ದೀರಿ. ನೀವು ಅವನನ್ನು ನಾಯಕನನ್ನಾಗಿ ಮಾಡಿದಿರಿ’ ಎಂದರು.

ಜಾತಿ ಗಣತಿ ವೆಚ್ಚ ಪೋಲಾಗಬಾರದು: ‘ಜಾತಿಗಣತಿಗೆ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ವೆಚ್ಚ ಮಾಡಲಾಗಿದೆ. ಹೀಗಾಗಿ, ಅದು ವ್ಯರ್ಥ ಆಗಬಾರದು ಎಂದು ಹಿಂದುಳಿದ ವರ್ಗಗಳ ನಾಯಕರು ನಮ್ಮನ್ನು ಭೇಟಿ ಮಾಡಿ ಹೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪಿಲ್ಲ’ ಎಂದರು.

‘ಜಾತಿ ಗಣತಿ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ನಾನು ಬೇರೆಯವರ ರೀತಿ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ನಾನು, ವಿರೋಧ ಪಕ್ಷದ ನಾಯಕರು ಎಲ್ಲರ ಜತೆ ಚರ್ಚಿಸುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ನಿಲುವು ಏನು ಎಂಬುದನ್ನು ಮೊದಲು ನೋಡೋಣ. ಈ ಬಗ್ಗೆ ಪ್ರಶ್ನೆ ಕೇಳಿದಾಗ ನಮಗೆ ಗೊತ್ತೇ ಇಲ್ಲ, ವರದಿ ಸಲ್ಲಿಕೆಯಾಗಿಲ್ಲ ಎಂದಿದ್ದಾರೆ’ ಎಂದರು.

ನನ್ನ ಬಳಿ ಯಾರೂ ಪ್ರಸ್ತಾಪಿಸಿಲ್ಲ: ‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ನೀರಾವರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಆಗ ಯಾರೂ ಕೂಡ ಅಕ್ರಮ ಗಣಿಗಾರಿಕೆ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿಲ್ಲ. 10-15 ಕಿ.ಮೀ ದೂರದಲ್ಲಿ ಜಲ್ಲಿಕಲ್ಲು ಉತ್ಪಾದಿಸುವುದರಿಂದ ಹೆಚ್ಚು ವ್ಯತ್ಯಾಸವೇನೂ ಆಗುವುದಿಲ್ಲ’ ಎಂದರು.

‘ಗಣಿಗಾರಿಕೆಯ ಬಗ್ಗೆ ನೋಡಿಕೊಳ್ಳಲು ಗಣಿ ಸಚಿವಾಲಯ, ಭೂ ವಿಜ್ಞಾನ ಇಲಾಖೆ ಇದೆ. ನೂರಾರು ಎಂಜಿನಿಯರ್‌ಗಳೂ ಇದ್ದಾರೆ. ನಾವು ಅನಗತ್ಯವಾಗಿ ಜನರಲ್ಲಿ ಆತಂಕ ಮೂಡಿಸುವುದು ಬೇಡ. ಇಂಥ ಚಿಲ್ಲರೆ ಪ್ರಚಾರ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಇದು ಸೂಕ್ಷ್ಮ ವಿಚಾರ. ಕೆಆರ್‌ಎಸ್ ದೇಶದ ಆಸ್ತಿ. ಅದರ ಬಗ್ಗೆ ಗಾಬರಿ ಹುಟ್ಟಿಸಬಾರದು’ ಎಂದರು.

‘ಗಣಿಗಾರಿಕೆಯಿಂದ ಅಪಾಯವಿದೆ ಎಂಬ ವಿಚಾರವಾಗಿ ನಮ್ಮ ಬಳಿ ಯಾರೂ ಚರ್ಚೆ ಮಾಡಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT