ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ : ಎಇ 660, ಜೆಇ 330 ಹುದ್ದೆಗೆ ನವೆಂಬರ್‌ 27ರಿಂದ ಪರೀಕ್ಷೆ

Last Updated 26 ಅಕ್ಟೋಬರ್ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ‘ಬಿ’ ವೃಂದದ ಸಹಾಯಕ ಎಂಜಿನಿಯರ್ (ಎಇ, ಗ್ರೇಡ್- 1, ಸಿವಿಲ್) 660 ಹುದ್ದೆಗಳು ಮತ್ತು ಗ್ರೂಪ್‌ 'ಸಿ' ವೃಂದದ ಕಿರಿಯ ಎಂಜಿನಿಯರ್ (ಜೆಇ, ಸಿವಿಲ್) 330 ಹುದ್ದೆಗಳಿಗೆ ನೇಮಕಾತಿಗೆ ಕೆಪಿಎಸ್‌ಸಿ ನ. 27ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.

ಈ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಜುಲೈ 30ರಂದು ಅಧಿಸೂಚನೆ ಹೊರಡಿಸಿ, ಸೆ. 27ರಂದು ಪರೀಕ್ಷೆ ನಡೆಸಲು ಮುಂದಾಗಿತ್ತು. ಆದರೆ, ಆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಪರೀಕ್ಷೆಯನ್ನು ಕೆಪಿಎಸ್‌ಸಿ ಮುಂದೂಡಿತ್ತು.

ಇತ್ತೀಚೆಗೆತಡೆಯಾಜ್ಞೆ ತೆರವುಗೊಂಡಿತ್ತು. ಹೀಗಾಗಿ, ಪರೀಕ್ಷೆ ದಿನಾಂಕವನ್ನು ಪರಿಷ್ಕರಿಸಿದೆ. ನ. 27ರಂದು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಹಾಗೂನ. 28 ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಬೆಳಿಗ್ಗೆ 10ರಿಂದ 11.30ರವರೆಗೆ ಪತ್ರಿಕೆ–1 (ಸಾಮಾನ್ಯ ಪತ್ರಿಕೆ), ಮಧ್ಯಾಹ್ನ 2ರಿಂದ 4ಗಂಟೆವರೆಗೆ ಪತ್ರಿಕೆ–2 (ನಿರ್ದಿಷ್ಟ ಪತ್ರಿಕೆ) ನಡೆಯಲಿದೆ. ಎರಡೂ ಹುದ್ದೆಗಳಿಗೆ 29ರಂದು ಬೆಳಿಗ್ಗೆ 10ರಿಂದ 11.30ರವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.

ಕೆಇಎಯಿಂದ ಕೆಪಿಎಸ್‌ಸಿ: ಈ ಹುದ್ದೆಗಳಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ. ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ಉದ್ದೇಶದಿಂದ ‘ಲೋಕೋಪಯೋಗಿ ಇಲಾಖೆಯ ಸೇವಾ ನಿಯಮಗಳು–2019 (ವಿಶೇಷ ನೇಮಕಾತಿ)’ ಸಿದ್ಧಪಡಿಸಲಾಗಿತ್ತು.

ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕೂಡಾ ನಡೆದಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿತ್ತು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 2019ರ ಅ. 31ರಂದು ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿತ್ತು. ಅಲ್ಲದೆ, ಕೆಪಿಎಸ್‌ಸಿ ಮೂಲಕ ನೇಮಕಾತಿಗೆ ಲೋಕೋಪಯೋಗಿ ಇಲಾಖೆ ತೀರ್ಮಾನಿಸಿತ್ತು. ಇಡೀ ನೇಮಕ ಪ್ರಕ್ರಿಯೆಯನ್ನೇ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇಲಾಖೆಯ ತೀರ್ಮಾನಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT