ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಇ, ಜೆಇ ನೇಮಕಾತಿಯಲ್ಲೂ ಅಕ್ರಮ

ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆ l ಆರ್‌.ಡಿ.ಪಾಟೀಲ ಪ್ರಮುಖ ಆರೋಪಿ l ವಾಕಿಟಾಕಿ ಬಳಸಿ ಉತ್ತರ ಬರೆದಿದ್ದ ಅಭ್ಯರ್ಥಿ
Last Updated 10 ಮೇ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ ಅಲಿಯಾಸ್ ಆರ್‌.ಡಿ.ಪಾಟೀಲ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ (ಎಇ) ಹಾಗೂ ಕಿರಿಯ ಎಂಜಿನಿಯರ್‌ (ಜೆಇ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) 2021ರ ಡಿ.14 ರಂದು ನಡೆಸಿದ್ದ ಎಇ ಹಾಗೂ ಜೆಇ ನೇಮಕಾತಿ ಪರೀಕ್ಷೆಯಲ್ಲಿ ‘ವಾಕಿಟಾಕಿ’ ಬಳಸಿ ಉತ್ತರ ಬರೆಯುತ್ತಿದ್ದ ಅಭ್ಯರ್ಥಿ ವೀರಣ್ಣಗೌಡ ಡಿ. ಚಿಕ್ಕೇಗೌಡ (30) ಎಂಬಾತನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ರುದ್ರಗೌಡ ಪಾಟೀಲ ಸಹಭಾಗಿಯಾಗಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ರುದ್ರಗೌಡ ಪಾಟೀಲ ಅವರನ್ನು ಬಾಡಿ ವಾರೆಂಟ್ ಮೂಲಕ ಅನ್ನಪೂರ್ಣೇಶ್ವರಿನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ರುದ್ರಗೌಡ ಅವರನ್ನು ಕಲಬುರಗಿಯಿಂದ ಬೆಂಗಳೂರಿಗೆ ಕರೆತರಲಿರುವ ಪೊಲೀಸರು, ನ್ಯಾಯಾಲಯದ ಎದುರು ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಿದ್ದಾರೆ.

ಎಂಜಿನಿಯರ್ ಮೇಳಕುಂದಿಗೆ ಜಾಮೀನು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಎಂಜಿನಿಯರ್ ಮಂಜುನಾಥ್ ಮೇಳಕುಂದಿ ಅವರೂ ಎಇ, ಜೆಇ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಸಿಕ್ಕಿತ್ತು.

ವಾಕಿಟಾಕಿ ಶಬ್ದದಿಂದ ಪತ್ತೆ: ‘ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿ ಸೇಂಟ್ ಜಾನ್ಸ್ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಕಲಬುರಗಿಯ ನಿವಾಸಿ ವೀರಣ್ಣಗೌಡ, ‘ವಾಕಿಟಾಕಿ’ ಸಿಗ್ನಲ್‌ಗಳನ್ನು ಸ್ವೀಕರಿಸುವ ಉಪಕರಣ ಹಾಗೂ ಕಿವಿಯೊಳಗೆ ಚಿಕ್ಕದಾದ ಮೈಕ್‌ ಇಟ್ಟುಕೊಂಡು ಪರೀಕ್ಷೆಗೆ ಹಾಜರಾಗಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪರೀಕ್ಷೆ ಆರಂಭವಾಗುತ್ತಿದ್ದಂತೆ ಉತ್ತರ ಬರೆಯಲು ಆರಂಭಿಸಿದ್ದ ಆರೋಪಿ, ಉಪಕರಣ ಆನ್ ಮಾಡಿದ್ದರು. ‘ಬೀಪ್’ ಶಬ್ದ ಬಂದಿತ್ತು. ಅದನ್ನು ಕೇಳಿಸಿಕೊಂಡಿದ್ದ ಮೇಲ್ವಿಚಾರಕರು, ವೀರಣ್ಣಗೌಡ ಅವರನ್ನು ಪರಿಶೀಲಿಸಿದ್ದರು. ನೀಲಿ ಬಣ್ಣದ ಬನಿಯನ್‌ನಲ್ಲಿ ಉಪಕರಣ ಪತ್ತೆಯಾಗಿತ್ತು.’

‘ಕ್ರಿಮಿನಲ್‌ ಪಿತೂರಿ ( ಐಪಿಸಿ 120 ಬಿ), ನಂಬಿಕೆ ದ್ರೋಹ (ಐಪಿಸಿ 406), ವಂಚನೆ (ಐಪಿಸಿ 420), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ, ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT