ಶುಕ್ರವಾರ, ಅಕ್ಟೋಬರ್ 30, 2020
27 °C
ಗೆಜೆಟೆಡ್‌ ಪ್ರೊಬೇಷನರಿ‌ ಹುದ್ದೆಗಳ ಅಭ್ಯರ್ಥಿ ಅನುಪಾತ 1:20 ರಿಂದ 1:15

ಕೆಪಿಎಸ್‌ಸಿ ಮುಖ್ಯ ಪರೀಕ್ಷೆ: ಅಭ್ಯರ್ಥಿ ಅನುಪಾತ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ‌ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಕರೆಯುವ ಅನುಪಾತವನ್ನು 1:20 ರಿಂದ 1:15 ಇಳಿಸಬೇಕೆಂಬ ಪಿ.ಸಿ. ಹೋಟಾ ಸಮಿತಿಯ ಶಿಫಾರಸಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಲ್ಲದೆ, ಕೆಪಿಎಸ್‌ಸಿ ಅಧ್ಯಕ್ಷರ ಹುದ್ದೆಯನ್ನು ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯ ದರ್ಜೆಗೆ ಸಮನಾಗಿ ಏರಿಸಲು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆದರೆ, ಕೆಪಿಎಸ್‌ಸಿ ಸದಸ್ಯರ ನೇಮಕಕ್ಕೆ ಶೋಧನಾ ಸಮಿತಿ ರಚಿಸಬೇಕು ಎಂಬ ಶಿಫಾರಸನ್ನು ಸಂಪುಟ ಸಭೆ ಒಪ್ಪಿಕೊಂಡಿಲ್ಲ. ಇದು ಸರ್ಕಾರಕ್ಕೆ ಇರುವ ಅಧಿಕಾರವಾಗಿದ್ದು, ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲವೆಂದೂ ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.

ಪ್ರಮುಖ ತೀರ್ಮಾನಗಳು
*ಪರಿಶಿಷ್ಟ ಪಂಗಡದ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳು ಮತ್ತು ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಊಟೋಪಚಾರ ಸೌಲಭ್ಯ, ಶುಚಿ ಸಂಭ್ರಮ ಕಿಟ್‌ ಹಾಗೂ ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸಲು ₹65.48 ಕೋಟಿಗೆ ಅನುಮೋದನೆ

* ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಕುರಿತು ಮಾರ್ಗಸೂಚಿ ಪರಿಷ್ಕರಿಸಲು ಒಪ್ಪಿಗೆ

* ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಷೇರು ಬಂಡವಾಳವನ್ನು ₹1,000 ಕೋಟಿಯಿಂದ ₹1,250 ಕೋಟಿಗೆ ಹೆಚ್ಚಿಸಲು ಸಮ್ಮತಿ 

* ಎಸ್‌ಸಿಪಿ ಟಿಎಸ್‌ಪಿ ಕಾರ್ಯಕ್ರಮದಡಿ 14 ಸಂಚಾರಿ ಆರೋಗ್ಯ ಘಟಕಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 64 ಸಂಚಾರಿ ಆರೋಗ್ಯ ಘಟಕಗಳು ಸೇರಿ ಒಟ್ಟು 78 ಸಂಚಾರಿ ಆರೋಗ್ಯ ಘಟಕಗಳನ್ನು 5 ವರ್ಷಗಳ ಅವಧಿಗೆ ಮುಂದುವರೆಸಲು ಅರ್ಹ ಸೇವಾದಾರರ ಆಯ್ಕೆಗೆ ಟೆಂಡರ್‌ ಕರೆಯಲು ಒಪ್ಪಿಗೆ

* ದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ 32 ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ. ಈಗ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ನೇಮಕಾತಿಯಲ್ಲಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 25 ಅಂಕ ನೀಡಲು ತೀರ್ಮಾನ.

* ಶಿವಮೊಗ್ಗ ಜಿಲ್ಲೆ ಕುಂಸಿ ರೈಲ್ವೇ ನಿಲ್ದಾಣದ ಬಳಿ ಇರುವ ಲೆವೆಲ್‌ ಕ್ರಾಸಿಂಗ್‌ಗೆ ಬದಲು ಮೇಲು ಸೇತುವೆ ನಿರ್ಮಿಸಲು ₹15.31 ಕೋಟಿಗೆ ಅನುಮೋದನೆ. ಭದ್ರಾವತಿಯಲ್ಲೂ ಮೇಲು ಸೇತುವೆ ನಿರ್ಮಿಸಲು₹15 ಕೋಟಿ, ಶಿವಮೊಗ್ಗದಲ್ಲಿ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಪರಿಹಾರ ನೀಡಲು ₹100 ಕೋಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು