ಮಂಗಳವಾರ, ಮೇ 18, 2021
30 °C
ಎರಡೂ ಪಟ್ಟಿಯಲ್ಲಿ ಇರುವ 186 ಅಭ್ಯರ್ಥಿಗಳು ಅತಂತ್ರ

ಎಫ್‌ಡಿಎ ನೇಮಕಾತಿಯ ಅಧಿಸೂಚನೆ ಪಾಲಿಸಿ: ಕೆಎಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು 2018ರಿಂದ ನೇಮಕಾತಿ ಆದೇಶಕ್ಕಾಗಿ ಕಾದಿದ್ದಾರೆ. ಎಸ್‌ಡಿಎ ಮತ್ತು ಎಫ್‌ಡಿಎ ಎರಡೂ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿರುವ 186 ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಕೌನ್ಸಿಲಿಂಗ್ ಮೂಲಕವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ನೀಡಿದೆ.

961 ಎಫ್‌ಡಿಎ(ದ್ವಿತೀಯ ದರ್ಜೆ ಸಹಾಯಕ) ಮತ್ತು 851 ಎಸ್‌ಡಿಎ(ಪ್ರಥಮ ದರ್ಜೆ ಸಹಾಯಕ) ಹುದ್ದೆಗಳ ಭರ್ತಿಗೆ 2017ರ ಸೆಪ್ಟೆಂಬರ್ 1ರಂದು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. 2018ರ ಫೆಬ್ರುವರಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಎರಡೂ ಹುದ್ದೆಗಳ ಪಟ್ಟಿಯಲ್ಲಿ ಇದ್ದರೆ, ಅಂತವರನ್ನು ಕರೆದು ಕೌನ್ಸೆಲಿಂಗ್ ಮೂಲಕ ಒಂದು ಹುದ್ದೆಗೆ ನೇಮಿಸಿ ಆದೇಶಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಕೌನ್ಸೆಲಿಂಗ್ ನಡೆಸದೆ ಎಫ್‌ಡಿಎ ಪಟ್ಟಿಯಲ್ಲಿ ಇದ್ದವರನ್ನು ಎಸ್‌ಡಿಎ ಪಟ್ಟಿಯಿಂದ ಕೈಬಿಟ್ಟು, ಅಭ್ಯರ್ಥಿ ಬಯಸದ ಇಲಾಖೆಗೆ ನಿಯೋಜನೆ ಆದರೆ ಅನ್ಯಾಯವಾಗಲಿದೆ ಎಂದು ಅಭ್ಯರ್ಥಿಗಳ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ 2017ರಲ್ಲಿ ಕೌನ್ಸೆಲಿಂಗ್ ನಡೆಸುವ ನಿರ್ಧಾರವನ್ನು ಕೆಪಿಎಸ್‌ಸಿ ಕೈಗೊಂಡಿತ್ತು.

ಬಳಿಕ ಕೆಪಿಎಸ್‌ಸಿ ಕಾರ್ಯದರ್ಶಿ ಅವರು ಬದಲಾದ ಕಾರಣ ಕೌನ್ಸೆಲಿಂಗ್ ನಡೆಸುವುದು ಕೆಸಿಎಸ್‌(ಕರ್ನಾಟಕ ಸಿವಿಲ್ ಸೇವೆ) ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದು ಹೊಸ ಕಾರ್ಯದರ್ಶಿ ತಡೆ ಹಿಡಿದಿದ್ದರು. ಇದರಿಂದ ಅತಂತ್ರರಾಗಿದ್ದ ಅಭ್ಯರ್ಥಿಗಳು, ಕೆಎಟಿ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಕೆಎಟಿ, ‘ನೇಮಕಾತಿ ಅಧಿಸೂಚನೆ ಪ್ರಕಾರವೇ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಕೌನ್ಸೆಲಿಂಗ್ ನಡೆಸುವುದು ಕೆಸಿಎಸ್ ನಿಯಮಗಳಿಗೆ ವಿರುದ್ಧವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘2018ರಲ್ಲಿ ಪರೀಕ್ಷೆ ಬರೆದು ನೇಮಕಾತಿಗಾಗಿ ಕಾದು ಕುಳಿತಿದ್ದೇವೆ. ಈಗ ಕೆಎಟಿ ಆದೇಶ ಹೊರಡಿಸಿ ಒಂದು ತಿಂಗಳು ಕಳೆದಿದೆ. ಆದರೆ, ಪ್ರಕ್ರಿಯೆ ಪೂರ್ಣಗೊಳಿಸಲು ಕೆಪಿಎಸ್‌ಸಿ ಮನಸು ಮಾಡಿಲ್ಲ’ ಎಂಬುದು ಅಭ್ಯರ್ಥಿಗಳು ಅಸಮಾಧಾನ.‌

ಈ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಬರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.