ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಂಕ ತಿರುಚಿ ಅಕ್ರಮ: ದತ್ತಾಂಶ ಸಲ್ಲಿಸಿ–ಕೆಎಟಿ ಆದೇಶ

ಕೆಪಿಎಸ್‌ಸಿ: ನೇಮಕಾತಿಯಲ್ಲಿ ಅಂಕ ತಿರುಚಿ ಅಕ್ರಮ
Last Updated 2 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದ ದತ್ತಾಂಶಗಳನ್ನು ಬಾರ್‌ಕೋಡ್‌ ಜೊತೆಗೆ ಹೊಂದಿರುವ ಅಂಕಗಳ ಸಹಿತ ಮುಚ್ಚಿದ ಲಕೋಟೆಯಲ್ಲಿ ಅಧಿಕೃತ ಸಹಿಯೊಂದಿಗೆ ಸಲ್ಲಿಸುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ಗೆ (ಟಿಸಿಎಸ್‌) ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.

ಅದೇ ರೀತಿ, ಟಿಸಿಎಸ್‌ ಮುಖ್ಯಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದ ದತ್ತಾಂಶಗಳನ್ನು ನೀಡಿದ ದಿನದಂದು ಡೌನ್‌ಲೋಡ್‌ ಮಾಡಿದ ಬಾರ್‌ಕೋಡ್ ನಂಬರ್‌ಗೆ ನಮೂದಿಸಿರುವ ಅಂಕಗಳ ಸಹಿತ ದತ್ತಾಂಶ, ಬಾರ್‌ಕೋಡ್ ನಂಬರ್, ನೋಂದಣಿ ಸಂಖ್ಯೆ, ಮುಖ್ಯ ಪರೀಕ್ಷೆಯಲ್ಲಿ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ (ಸಂದರ್ಶನ) ಅಭ್ಯರ್ಥಿಗಳು ಗಳಿಸಿದ ಅಂಕಗಳ ವಿವರಗಳನ್ನು ಸಲ್ಲಿಸಬೇಕು ಎಂದು ಕೆಪಿಎಸ್‌ಸಿಗೂ ಕೆಎಟಿ ಸೂಚಿಸಿದೆ.

ಈ ಸಾಲಿನ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಯ ಅಂಕಗಳನ್ನು ತಿರುಚಲಾಗಿದೆ ಎಂದು ದೂರಿ ಹುದ್ದೆ ವಂಚಿತ ಅಭ್ಯರ್ಥಿ ಸುಧನ್ವ ಭಾಂಡೋಳ್ಕರ್‌ ಸೇರಿ 52 ಅಭ್ಯರ್ಥಿಗಳು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಮೇಲ್ಮನವಿ ವ್ಯಾಪ್ತಿ ಕೆಎಟಿ ಆಗಿರುವುದರಿಂದ, ಅಲ್ಲಿಗೆ ಪ್ರಕರಣವನ್ನು ವರ್ಗಾಯಿಸಿ, ವಿಚಾರಣೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಎರಡು ವಾರಗಳಿಂದ ಕೆಎಟಿ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ. ದೂರುದಾರ ಅಭ್ಯರ್ಥಿಗಳ ಪರ ವಕೀಲರು ಮತ್ತು ಕೆಪಿಎಸ್‌ಸಿ ಪರ ವಕೀಲರ ವಾದ–ಪ್ರತಿವಾದಗಳನ್ನು ಗುರುವಾರ ಆಲಿಸಿದ ಬಳಿಕ ಕೆಎಟಿ ಈ ಆದೇಶ ನೀಡಿದೆ. ಮುಂದಿನ ವಿಚಾರಣೆ ಇದೇ 13ಕ್ಕೆ ನಡೆಯಲಿದೆ.

ಮುಖ್ಯ ಪರೀಕ್ಷೆಯ ಮೌಲ್ಯಮಾಪನದ ತಂತ್ರಾಂಶವನ್ನು ಮುಂಬೈಯ ಟಿಸಿಎಸ್‌ಗೆ ಕೆಪಿಎಸ್‌ಸಿ ಹೊರಗುತ್ತಿಗೆ ನೀಡಿತ್ತು. ಆದರೆ, ಇದೀಗ ಈ ಸಂಸ್ಥೆಯ ಜೊತೆಗಿನ ಒಪ್ಪಂದ ಮುರಿದುಕೊಂಡಿರುವ ಕೆಪಿಎಸ್‌ಸಿ, ಡಿಜಿಟಲ್‌ ಮೌಲ್ಯಮಾಪನಕ್ಕೆ 'ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌'(ಎನ್‌ಐಸಿ) ಮೂಲಕ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಅಲ್ಲದೆ, ಈ ತಂತ್ರಾಂಶದ ಮೂಲಕ 2017ನೇ ಸಾಲಿನ 106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನ ನಡೆಸಲು ನಿರ್ಧರಿಸಿದೆ.

ವಿಳಂಬ ಯಾಕೆ?: ‘2014ರ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಮುಖ್ಯಪರೀಕ್ಷೆಯ ಅಂಕಗಳನ್ನು ಮೂರೇ ದಿನಗಳಲ್ಲಿ ನೀಡಿರುವ ಕೆಪಿಎಸ್‌ಸಿ, 2015ರ ಮುಖ್ಯಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗೆ ನೀಡಲು 67 ದಿನಗಳನ್ನು ತೆಗೆದುಕೊಂಡಿದೆ. ಇಷ್ಟೊಂದು ಸುದೀರ್ಘ ಅವಧಿಯನ್ನು ತೆಗೆದುಕೊಂಡಿರುವುದು ಯಾಕೆ’ ಎಂದು ಕೆಪಿಎಸ್‌ಸಿಯನ್ನು ಕೆಎಟಿ ತರಾಟೆಗೆ ತೆಗೆದುಕೊಂಡಿದೆ

ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಎಸ್‌ಸಿ, ‘ಅಭ್ಯರ್ಥಿಗಳಿಗೆ ಅಂಕಗಳನ್ನು ಒದಗಿಸಲು ಮೂರು ದಿನಗಳೂ ಆಗಬಹುದು. 67 ದಿನಗಳೂ ತಗಲಬಹುದು. ಸಂದರ್ಭ ಬಂದರೆ 120 ದಿನಗಳೂ ಆಗಬಹುದು’ ಎಂದು ತಿಳಿಸಿದೆ. ನಂತರದ ಬೆಳವಣಿಗೆಯಲ್ಲಿ ಕೆಎಟಿ ಈ ಆದೇಶವನ್ನು ನೀಡಿದೆ.

‘ಹೋಲಿಕೆ’ಯಿಂದ ಅಕ್ರಮ ಬಹಿರಂಗ?

‘ಮುಖ್ಯಪರೀಕ್ಷೆಯ ಉತ್ತರ ಪತ್ರಿಕೆಯ ಮುಖಪುಟದ ಬಲಭಾಗದಲ್ಲಿ ಬಾರ್‌ಕೋಡ್‌, ನೋಂದಣಿ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಹಿ ಇರುತ್ತದೆ. ಕೆಪಿಎಸ್‌ಸಿಗೆ ಟಿಸಿಎಸ್‌ ನೀಡಿರುವ ಮುಖ್ಯ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದ ದತ್ತಾಂಶಗಳನ್ನು ಬಾರ್‌ಕೋಡ್‌ನ ಜೊತೆಗೆ, ಕೆಪಿಎಸ್‌ಸಿಯಲ್ಲಿರುವ ಮುಖ್ಯಪರೀಕ್ಷೆಯ ಉತ್ತರ ಪತ್ರಿಕೆಯ ಬಾರ್‌ಕೋಡ್, ನೋಂದಣಿ ಸಂಖ್ಯೆಯ ಜೊತೆ ಹೋಲಿಸಿದಾಗ ಅಂಕಗಳು ತಿರುಚಲಾಗಿದೆಯೇ ಎನ್ನುವುದು ಗೊತ್ತಾಗಲಿದೆ’ ಎಂದು ಸೈಬರ್‌ ತಜ್ಞರೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT