ಭಾನುವಾರ, ಏಪ್ರಿಲ್ 11, 2021
32 °C
ಎಫ್‌ಡಿಎ: ಕೇಂದ್ರದಲ್ಲಿ ಮೊಬೈಲ್‌ ಜಾಮರ್‌, ಕಿವಿಯೋಲೆಗೂ ನಿಷೇಧ l ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡ ಆಯೋಗ

ಯುಪಿಎಸ್‌ಸಿ ಮಾದರಿಯಲ್ಲಿಯೇ ಕೆಪಿಎಸ್‌ಸಿ ಪರೀಕ್ಷೆ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗಳ ಮಾದರಿಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ!

ಜ. 24ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮುಂದೂಡಲಾಗಿದ್ದು, ಭಾನುವಾರ (ಫೆ. 28) ನಡೆಯಲಿದೆ. 1,253 ಎಫ್‌ಡಿಎ ಹುದ್ದೆಗಳಿಗೆ 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದಾದ್ಯಂತ 1,057 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ, 433 ಕೇಂದ್ರಗಳನ್ನು ಸೂಕ್ಷ್ಮವೆಂದು ಗುರುತಿಸಿ, ಆ ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಮೊಬೈಲ್‌ ಜಾಮರ್‌ ಅಳವಡಿಸಲು ಕೆಪಿಎಸ್‌ಸಿ ತೀರ್ಮಾನಿಸಿದೆ.

ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್‌ ಫೋನ್‌ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ಮೈಕ್ರೋಚಿಪ್‌, ಬ್ಲೂ ಟೂಥ್‌, ವೈಫೈ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ, ಲೋಹದ ವಸ್ತುವನ್ನು ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದ್ದು, ಹೆಣ್ಣು ಮಕ್ಕಳು ಕಿವಿಯೋಲೆ ಧರಿಸಿದ್ದರೆ, ಅದನ್ನೂ ಬಿಚ್ಚಿ ಹೊರಗಿಟ್ಟು ಪರೀಕ್ಷೆ ಬರೆಯಬೇಕು. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ, ‘ಎಫ್‌ಡಿಎ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದ ನಮ್ಮ (ಕೆಪಿಎಸ್‌ಸಿ) 30 ಸಿಬ್ಬಂದಿಗೆ ನೀಡಿದ್ದ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ರದ್ದುಪಡಿಸಲಾಗಿದೆ. ಹೀಗಾಗಿ, ಅವರು ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ 21 ಅಭ್ಯರ್ಥಿಗಳ
ಪ್ರವೇಶಪತ್ರವನ್ನು ತಡೆಹಿಡಿಯಲಾಗಿದ್ದು, ಅವರಿಗೂ ಅವಕಾಶ ಇಲ್ಲ’ ಎಂದರು.

‘ಮೊದಲ ಬಾರಿಗೆ ‘ಎ’ ಅಥವಾ ‘ಬಿ’ ವೃಂದದ ಅಧಿಕಾರಿಯೊಬ್ಬರನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೆ ನಿರೀಕ್ಷಕರನ್ನಾಗಿ ನೇಮಿಸಲಾಗಿದೆ. ಕೇಂದ್ರ ಕಚೇರಿಯಲ್ಲಿ (ಬೆಂಗಳೂರು) 24X7 ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಇದು ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದೆ’ ಎಂದರು.

‘ಪರೀಕ್ಷಾ ಸಾಮಗ್ರಿಗಳನ್ನು ಗೌಪ್ಯವಾಗಿಡಲು ಪಿಯುಸಿ ಪರೀಕ್ಷಾ ಮಂಡಳಿಯ ಕರ್ನಾಟಕ ಸೆಕ್ಯೂರ್ಡ್‌ ಎಕ್ಸಾಮಿನೇಷನ್‌ ಸಿಸ್ಟಂ ಅಳವಡಿಸಿಕೊಂಡಿದ್ದೇವೆ. ಪರೀಕ್ಷಾ ಸಾಮಗ್ರಿ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಸಂಚಾರಿ ಪೊಲೀಸ್‌ ದಳಗಳನ್ನು ನಿಯೋಜಿಸಲು ಸೂಚಿಸಲಾಗಿದೆ ’ ಎಂದು ತಿಳಿಸಿದರು.

ಹೈಕೋರ್ಟ್‌, ಕೆಎಟಿ ಮೆಟ್ಟಿಲೇರಿದ ಆರೋಪಿ!

‘ಹಾಲ್‌ ಟಿಕೆಟ್‌ ಬ್ಲಾಕ್‌ ಮಾಡುವ ಮೂಲಕ ಪರೀಕ್ಷೆ ಬರೆಯುವ ಸಾಂವಿಧಾನಿಕ ಹಕ್ಕಿಗೆ ತಡೆ ನೀಡಲಾಗಿದೆ’ ಎಂದು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಬಸವರಾಜ ಕುಂಬಾರ ಹೈಕೋರ್ಟ್ ಮೊರೆ ಹೋಗಿದ್ದ. ‘ಅರ್ಜಿ ತನ್ನ ವ್ಯಾಪ್ತಿಗೆ ಬರುವುದಿಲ್ಲ, ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹೋಗಬಹುದು’ ಎಂದು ಹೇಳಿದ್ದ ಹೈಕೋರ್ಟ್‌ ಶುಕ್ರವಾರ ಬೆಳಿಗ್ಗೆ ಅರ್ಜಿ ವಜಾಗೊಳಿಸಿತ್ತು. ತಕ್ಷಣವೇ ಕೆಎಟಿಗೆ ಬಸವರಾಜ ಮೊರೆ ಹೋಗಿದ್ದ. ಆದರೆ, ಕೆಎಟಿ ಕೂಡಾ ಅರ್ಜಿಯನ್ನು ತಿರಸ್ಕರಿಸಿದೆ. ಬಸವರಾಜ ಇದೇ 17ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಕೆಪಿಎಸ್‌ಸಿಯಲ್ಲಿ ಎಫ್‌ಡಿಎ ಆಗಿರುವ ಬಸವರಾಜ, ಬೇರೆ ಇಲಾಖೆಗೆ ಹೋಗುವ ಉದ್ದೇಶದಿಂದ ಮತ್ತೆ ಎಫ್‌ಡಿಎ ಪರೀಕ್ಷೆ ಬರೆಯಲು ಮುಂದಾಗಿದ್ದ’ ಎಂದು ಸತ್ಯವತಿ ತಿಳಿಸಿದರು.

***

ಜ. 24ರ ಪ್ರವೇಶಪತ್ರ ರದ್ದುಪಡಿಸಲಾಗಿದೆ. ಪರೀಕ್ಷೆ ದಿನ ಫೆ. 28 ಎಂದು ನಮೂದಿಸಿರುವ ಪ್ರವೇಶಪತ್ರ ಹೊಂದಿದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು

-ಜಿ. ಸತ್ಯವತಿ, ಕಾರ್ಯದರ್ಶಿ, ಕೆಪಿಎಸ್‌ಸಿ
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು